ಅತಿಯಾದ ಆಲೂಗಡ್ಡೆ ಸೇವನೆಯೂ ಆರೋಗ್ಯಕ್ಕೆ ಮಾರಕ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಪ್ರತಿಯೊಬ್ಬರ ಮನೆಯಲ್ಲಿರುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಬಿ ಮತ್ತು ರಂಜಕ ಹೀಗೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ದಿನನಿತ್ಯದ ಆಹಾರದಲ್ಲಿ ಇದನ್ನು ಸೇವಿಸುವುದು ಉತ್ತಮ. ಒತ್ತಡ ನಿವಾರಣೆ, ಉರಿಯೂತದಿಂದ ಪರಿಹಾರ ಸಿಗುವುದರ ಜೊತೆಗೆ ಮೆದುಳಿನ ಆರೋಗ್ಯವೂ ಸುಧಾರಿಸುತ್ತದೆ ಎನ್ನಲಾಗುತ್ತದೆ. ಮಿತಿಗಿಂತ ಹೆಚ್ಚು ಆಲೂಗಡ್ಡೆ ಸೇವನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಂತೆ. ಹೌದು, ಆಲೂಗಡ್ಡೆಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಅತಿಯಾಗಿ ಸೇವಿಸುವ ಮುನ್ನ ಈ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಸಾಂದರ್ಭಿಕ ಚಿತ್ರ
ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಷ್ಟ ಪಟ್ಟು ಸೇವಿಸುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಪಾಸ್ಟ್ ಫುಡ್ ಸೇರಿದಂತೆ ಸಮೋಸ, ಆಲೂಗೆಡ್ಡೆ ಫ್ರೆಂಚ್ ಫ್ರೈಸ್, ಆಲೂಗೆಡ್ಡೆ ಪಕೋಡ, ಆಲೂಗಡ್ಡೆ ಪರಾಠ ಹೀಗೆ ವಿವಿಧ ಬಗೆಯ ಖಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುವುದರೊಂದಿಗೆ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಆದರೆ ಅತಿಯಾಗಿ ಆಲೂಗಡ್ಡೆ ಸೇವಿಸುವರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತವೆ, ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
- ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ : ಅತಿಯಾದ ಆಲೂಗಡ್ಡೆಯ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಆಲೂಗಡ್ಡೆಯ ಸೇವನೆಯನ್ನು ಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರ.
- ಉಸಿರಾಟದ ತೊಂದರೆ : ಆಲೂಗಡ್ಡೆಯಲ್ಲಿ ಪೊಟ್ಯಾಸಿಯಂ ಹೇರಳವಾಗಿದ್ದು ಇವುಗಳ ಅತಿಯಾದ ಸೇವನೆಯೂ ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗುತ್ತವೆ. ಇದು ದೇಹದಲ್ಲಿ ಪೊಟ್ಯಾಸಿಯಂ ಹೆಚ್ಚಳವಾಗಿ, ಉಸಿರಾಟದ ತೊಂದರೆ, ದೇಹದಲ್ಲಿ ವಿಪರೀತ ನೋವು, ವಾಂತಿ ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
- ಬೊಜ್ಜಿನ ಸಮಸ್ಯೆ : ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದ್ದು, ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರವಾಗುತ್ತದೆ. ಇದು ಸೊಂಟದ ಸುತ್ತ ಮತ್ತು ಹೊಟ್ಟೆಯ ಮಧ್ಯಭಾಗದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ಈ ತರಕಾರಿ ಸೇವನೆಯನ್ನು ಮಿತಗೊಳಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
- ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು : ದಿನ ನಿತ್ಯ ಆಹಾರದಲ್ಲಿ ಅತೀ ಹೆಚ್ಚು ಆಲೂಗಡ್ಡೆ ಸೇರಿಸುವುದರಿಂದ ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಲಬದ್ಧತೆ, ಹೊಟ್ಟೆ ನೋವು ವಾಂತಿ, ಭೇದಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ಅಲರ್ಜಿ ಸಮಸ್ಯೆ : ಮೊಳಕೆಯೊಡೆದ ಆಲೂಗಡ್ಡೆಯನ್ನು ಬೇಯಿಸಿ ತಿಂದರೆ, ದೇಹದಲ್ಲಿ ಅಲರ್ಜಿಗಳು ಬರುವ ಸಾಧ್ಯತೆಯಿದೆ. ಹೌದು, ನೀಲಿ ಹಾಗೂ ಮೊಳಕೆಯೊಡೆದ ಆಲೂಗಡ್ಡೆಗಳು ಸಹ ವಿಷಕಾರಿಯಾಗುತ್ತವೆ. ಇವುಗಳ ಸೇವನೆಯು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಆಲೂಗಡ್ಡೆಯಲ್ಲಿರುವ ಪಿಷ್ಟವು ಅಲರ್ಜಿಯಂತಹ ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
- ರಕ್ತದೊತ್ತಡ ಸಮಸ್ಯೆ : ಬಿಪಿ ಇದ್ದವರು ಹೆಚ್ಚು ಆಲೂಗಡ್ಡೆ ಸೇವಿಸದೇ ಇರುವುದು ಉತ್ತಮ. ಅತಿಯಾದ ಆಲೂಗಡ್ಡೆ ಸೇವನೆಯೂ ರಕ್ತದೊತ್ತಡ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಲುತ್ತದೆ. ಬಿಪಿ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ಸಂಧಿವಾತ : ಸಂಧಿವಾತ ರೋಗಿಗಳು ಆಲೂಗಡ್ಡೆ ಅಪ್ಪಿತಪ್ಪಿಯೂ ಸೇವಿಸಲೇಬಾರದು. ಅದಲ್ಲದೇ, ಈ ತರಕಾರಿಯ ಅತಿಯಾದ ಸೇವನೆಯು ಸಂಧಿವಾತ, ಮಂಡಿ ನೋವು ಹಾಗೂ ಕೀಲು ನೋವಿಗೆ ಕಾರಣವಾಗುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶವು ಕೀಲು ನೋವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ, ಯಾವುದೇ ಸಂದೇಹಗಳಿದ್ದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ