World Smile Day 2024 : ಮನಸಾರೆ ನಕ್ಕು ಬಿಡಿ, ಆರೋಗ್ಯದಲ್ಲಾಗುತ್ತೆ ಈ ಬದಲಾವಣೆ
ನಗುವೆನ್ನೆವುದು ಅದ್ಭುತ ಶಕ್ತಿ. ಮನುಷ್ಯರಾಗಿರುವ ನಮಗೆ ಮಾತ್ರ ನಗುವುದಕ್ಕೆ ಸಾಧ್ಯ. ಆದರೆ ಈ ಪ್ರಾಣಿ ಪಕ್ಷಿಗಳು ತಮ್ಮ ಭಾವನೆಗಳನ್ನು ಬೇರೆಯದ್ದೇ ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಈ ನಗುವಿನಿಂದ ಬದುಕಿನಲ್ಲಿ ಎಲ್ಲವನ್ನೂ ಗಳಿಸಲು ಸಾಧ್ಯ. ಇಂತಹ ನಗುವಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವ ನಗುವಿನ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಹುಟ್ಟಿಕೊಂಡದ್ದು ಹೇಗೆ?ಹಾಗೂ ನಗುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ವರೋಗವನ್ನು ನಿವಾರಿಸುವಲ್ಲಿ ಈ ನಗುವಿನ ಪಾತ್ರವು ಬಹುದೊಡ್ಡದು. ಹೀಗಾಗಿ ನಮ್ಮ ಹಿರಿಯರು ಸರ್ವ ರೋಗಕ್ಕೂ ನಗುವೊಂದೇ ಪರಮ ಔಷಧ ಎಂದಿದ್ದಾರೆ. ಒಬ್ಬ ವ್ಯಕ್ತಿಯು ಮನಸಾರೆ ನಗುವುದರಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುವಲ್ಲಿ ಹಾಗೂ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಈ ನಗು ಸಹಾಯ ಮಾಡುತ್ತದೆ. ಹೀಗಾಗಿ ನಾವು ಎಷ್ಟು ನಗುತ್ತೇವೆ ಅಷ್ಟು ಆರೋಗ್ಯವಾಗಿರುತ್ತೇವೆ ಎನ್ನುವುದು ಮಾತ್ರ ಸತ್ಯ. ಮನಸಾರೆ ನಕ್ಕರೆ ಸಾಕು ಏನೇ ಟೆನ್ಶನ್ ಇರಲಿ, ಕ್ಷಣಾರ್ಧದಲ್ಲಿ ದೂರಾಗುತ್ತದೆ. ನಗುವಿನಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ನಗುವಿನ ಮಹತ್ವವನ್ನು ತಿಳಿಸಲು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಶುಕ್ರವಾರದಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 4 ರಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ನಗು ದಿನದ ಇತಿಹಾಸ ಹಾಗೂ ಮಹತ್ವ
ವಿಶ್ವ ನಗು ದಿನವನ್ನು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. 1963ರಲ್ಲಿ ಮ್ಯಾಸಚೂಸೆಟ್ಸ್‌ನ ವೋರ್ಸೆಸ್ಟರ್‌ನ ಕಲಾವಿದ ಹಾರ್ವೆ ಬಾಲ್ ಸ್ಮೈಲಿ ಫೇಸ್ ಅನ್ನು ರಚಿಸಿದರು. ಈ ಚಿತ್ರವು ನಂತರ ಬಹಳ ಪ್ರಸಿದ್ಧಿ ಪಡೆಯಿತು. ವರ್ಷಗಳು ಕಳೆದಂತೆ ಹಾರ್ವೆ ಬಾಲ್ ತನ್ನ ಚಿಹ್ನೆಯ ಅತಿಯಾದ ವಾಣಿಜ್ಯೀಕರಣದ ಬಗ್ಗೆ ಎಚ್ಚರ ವಹಿಸಿದರು. ಬಳಿಕ, ವಿಶ್ವ ನಗು ದಿನಾಚರಣೆಯ ಆಲೋಚನೆ ಅವರಿಗೆ ಬಂದಿತು. ಮೊದಲ ವಿಶ್ವ ನಗು ದಿನವನ್ನು 1999ರಲ್ಲಿ ವೋರ್ಸೆಸ್ಟರ್ನಲ್ಲಿ ಆಚರಿಸಲಾಯಿತು. ಜನರು ದಯೆಯ ಕಾರ್ಯಗಳನ್ನು ಮಾಡಲು ಮತ್ತು ಸರಳವಾಗಿ ನಗುವ ಮೂಲಕ ಸಂತೋಷವನ್ನು ಹರಡಲು ಪ್ರೋತ್ಸಾಹಿಸುವುದು ಈ ದಿನದ ಗುರಿಯಾಗಿದೆ. 2001ರಲ್ಲಿ ಹಾರ್ವೆ ನಿಧನರಾದ ನಂತರ ಅವರ ಹೆಸರು ಮತ್ತು ಸ್ಮರಣೆಯನ್ನು ಗೌರವಿಸಲು ಹಾರ್ವೆ ಬಾಲ್ ವರ್ಲ್ಡ್ ಸ್ಮೈಲ್ ಫೌಂಡೇಶನ್ ಅನ್ನು ರಚಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವ ನಗು ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಗುವ ಮೂಲಕ ಸದ್ಭಾವನೆ ಹಾಗೂ ಸಕಾರಾತ್ಮಕತೆಯನ್ನು ಹೆಚ್ಚಿಸಲು ಹಾಗೂ ನಗುವುದನ್ನು ಹೆಚ್ಚು ಉತ್ತೇಜಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ.
ಇದನ್ನೂ ಓದಿ: ಜನನದ ಸಮಯದಲ್ಲಿ ನವಜಾತ ಶಿಶುವಿನ ತೂಕ ಎಷ್ಟಿರಬೇಕು? ತೂಕ ಕಡಿಮೆಯಾದಾಗ ಏನಾಗುತ್ತದೆ?
ನಗುವುದರಿಂದ ಆರೋಗ್ಯ ಲಾಭಗಳು
* ನಗುವುದರಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಗಳು ನಮ್ಮ ದೇಹದಲ್ಲಿ ಬಿಡುಗಡೆಯಾಗುತ್ತವೆ. ಇವು ಮೆದುಳಿಗೆ ಉತ್ತಮ ರಾಸಾಯನಿಕಗಳಾಗಿದ್ದು, ಇದು ನೀವು ಸದಾ ಸಂತೋಷವಾಗಿರಲು ಸಹಾಯ ಮಾಡುತ್ತದೆ.
* ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ ಉತ್ತಮವಾಗಿ ನಿದ್ರಿಸುವುದಕ್ಕೆ ಈ ನಗುವೇ ಕಾರಣವಾಗಿದೆ.
* ನಗು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ರೋಗಗಳಿಗೆ ಪ್ರತಿರೋಧ ಒಡ್ಡಿ ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ತಲೆನೋವು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ
* ನಗು ನಕಾರಾತ್ಮಕ ಭಾವನೆಗಳ ಪರಿಣಾಮವನ್ನು ಕಡಿಮೆ ಮಾಡಿ ಖಿನ್ನತೆ, ಆತಂಕ, ಕೋಪ ಅಥವಾ ದುಃಖದಿಂದ ದೂರವಿಡುತ್ತದೆ. ದೇಹದ ಶಕ್ತಿಯ ಮಟ್ಟವನ್ನು ಸುಧಾರಿಸಿ ಸಂತೋಷದಿಂದ ಇರಲು ಸಹಾಯ ಮಾಡುತ್ತದೆ.
* ನಗುವುದರಿಂದ ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸಿ ಹೃದಯಾಘಾತ ಸೇರಿದಂತೆ ಹೃದಯರಕ್ತನಾಳದ ಸಮಸ್ಯೆಗಳಿಂದ ರಕ್ಷಿಸುತ್ತದೆ.
* ದೇಹದಲ್ಲಿರುವ ಅಧಿಕ ಕ್ಯಾಲೊರಿಯನ್ನು ಬರ್ನ್ ಮಾಡಿ ದೇಹವನ್ನು ಫಿಟ್ ಆಗಿಡುತ್ತದೆ. ನಗುವುದರಿಂದಲೂ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ