Holi: ಅನ್ಯರ ನಿಂದನೆಗೇ ಇರುವ ಹಬ್ಬ ಹೋಳಿ ಹುಣ್ಣಿಮೆ!
ಪುರಾಣದ ಕಥೆಗಳು ಒಂದೊಂದು ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದೂ ಅದರ ಆಚರಣೆಗಳೂ ಭಾರತದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಶಿವನು ಮನ್ಮಥನನ್ನು ದೇಹವಿಲ್ಲದಂತೆ ಮಾಡಿದ ದಿನ ಎಂದೂ ಪ್ರಸಿದ್ಧವಾಗಿದೆ. ಅದೇನೇ ಇದ್ದರೂ ಈ ಆಚರಣೆಯ ಮೂಲ ಉದ್ದೇಶವೇ ಬೇರೆ. ಆಸ್ತಿಕರನ್ನು ಎಷ್ಟು ಒಪ್ಪುತ್ತಾರೋ ನಾಸ್ತಿಕರಿಗೂ ಅಂತಹದ್ದೇ ಗೌರವ ಇದೆ. ಇದಕ್ಕೆ ಕಾರಣ ಅವರಿಂದ ಯಾವುದೇ ತೊಂದರೆಗಳು ಬಾರದೇ ಇರಲಿ ಅಂತ. ಇದಕ್ಕೊಂದು ಸರಳವಾದ ಸುಭಾಷಿತವಿದೆ. ಬಣ್ಣಗಳನ್ನೂ ಎರಚುವ ಸಂಪ್ರದಾಯವೂ ನಮ್ಮ ಕಾಮನೆಯನ್ನು ಪ್ರಕಟಿಸುವ ಸಲುವಾಗಿ ಆಗಿದೆ.

ಭಾರತೀಯರ ಹಬ್ಬದ ವೈಶಿಷ್ಟ್ಯವೇ ಬೇರೆ. ಅವರ ದೃಷ್ಟಿಯ ವಿಶಾಲತೆಯನ್ನು ಸುಲಭಕ್ಕೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ಒಪ್ಪಿಕೊಳ್ಳುವ ಮನಃಸ್ಥಿತಿ ಭಾರತೀಯರಲ್ಲಿ ಇರುವುದು ವಿಶೇಷ. ಯಾವುದನ್ನೂ ಉಪೇಕ್ಷೆ ಮಾಡದೇ ಅದಕ್ಕೆ ಕೊಡಬಹುದಾದ ಸ್ಥಾನಮಾನವನ್ನು ಕೊಟ್ಟು ಸುಮ್ಮನಾಗಿಸುವುದು ವಿಶೇಷ. ಆಸ್ತಿಕರನ್ನು ಎಷ್ಟು ಒಪ್ಪುತ್ತಾರೋ ನಾಸ್ತಿಕರಿಗೂ ಅಂತಹದ್ದೇ ಗೌರವ ಇದೆ. ಇದಕ್ಕೆ ಕಾರಣ ಅವರಿಂದ ಯಾವುದೇ ತೊಂದರೆಗಳು ಬಾರದೇ ಇರಲಿ ಅಂತ. ಇದಕ್ಕೊಂದು ಸರಳವಾದ ಸುಭಾಷಿತವಿದೆ.
ದುರ್ಜನಂ ಪ್ರಥಮಂ ವಂದೇ
ಸಜ್ಜನಂ ತದನಂತರಮ್ |
ಮುಖಪ್ರಕ್ಷಾಲನಾತ್ ಪೂರ್ವೇ
ಗುದಪ್ರಕ್ಷಾಲಂ ಯಥಾ || ಎಂದು.
ದುರ್ಜನರಿಗೇ ಮೊದಲು ನಮನ. ಅನಂತರ ಸಜ್ಜನರಿಗೆ. ಏಕೆಂದರೆ, ಬೆಳಗ್ಗೆ ಶೌಚವಿಧಿಗಳನ್ನು ಮುಗಿಸಿಯೇ ಮುಖ ತೊಳೆಯುವುದು, ಸ್ನಾನ ಮಾಡುವುದು ಮಾಡಿದಂತೆ. ಅನಂತರ ಶೌಚ ಬಾಧೆ ಉಂಟಾದರೆ ಕಷ್ಟ. ಬೆಳಗ್ಗೆಯೇ ಕೆಲಸವಾದರೆ ಆಮೇಲೆ ನಿಶ್ಚಿಂತೆ.
ಹಾಗೆಯೇ ಇದೂ ಕೂಡ. ಕೆಟ್ಟವರಿಗೆ ಒಂದು ಸ್ಥಾನ ಕೊಟ್ಟರೆ, ಒಳ್ಳೆಯ ಕಾರ್ಯವನ್ನು ಅನಂತರ ಮಾಡಬಹುದು. ಇದೇ ರೀತಿ ಈ ಕಾಮದಹನವೂ ಹೌದು.
ಪುರಾಣದ ಕಥೆಗಳು ಒಂದೊಂದು ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದೂ ಅದರ ಆಚರಣೆಗಳೂ ಭಾರತದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಶಿವನು ಮನ್ಮಥನನ್ನು ದೇಹವಿಲ್ಲದಂತೆ ಮಾಡಿದ ದಿನ ಎಂದೂ ಪ್ರಸಿದ್ಧವಾಗಿದೆ. ಅದೇನೇ ಇದ್ದರೂ ಈ ಆಚರಣೆಯ ಮೂಲ ಉದ್ದೇಶವೇ ಬೇರೆ.
ಏನು ಉದ್ದೇಶ :
ಇದು ಧಾರ್ಮಿಕ ಆಚರಣೆಗಿಂತ ಮುಖ್ಯವಾಗಿ ಮನಶ್ಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಮಾನವನ ಮನಸ್ಸು ಎಷ್ಟು ಸಕಾರಾತ್ಮಕ ಎನಿಸಿದರೂ ನಕಾರಾತ್ಮಕ ಅಂಶಗಳು ಇರಲಿವೆ. ಪ್ರಕೃತಿ ಸಹಜವಾಗಿದ್ದ ಕಾರಣ ಅದನ್ನು ಹೊರ ಹಾಕುವುದೂ ಸಹಜವೇ. ಆದರೆ ಇಂದು ದೈನಂದಿನ, ಕ್ಷಣ ಕ್ಷಣದ ಕಾರ್ಯವಾಗಿದೆ. ಯಾರ ಮೇಲಾದರೂ ಬೇಸರವಾದರೆ ಆ ಕೂಡಲೇ ಹೇಳಿ ಮುಗಿಸುವುದು. ಆದರೆ ಹಿಂದಿನ ಕಾಲದಲ್ಲಿ ಹೀಗೆ ಇರಲಿಲ್ಲ. ಹಿರಿಯರ ಮೇಲೆ, ಗೌರವಾನ್ವಿತರ ಮೇಲೆ ಅಗೌರವ ಬರುವಂತ ಸಂದರ್ಭ ಬಂದಾಗ ಅದನ್ನು ಹೇಳುತ್ತಿರಲಿಲ್ಲ. ಅದನ್ನು ಹಾಗೆಯೇ ಇಟ್ಟುಕೊಂಡು ವರ್ಷದ ಒಂದು ದಿನ ಎಲ್ಲವನ್ನೂ ಹೊರಹಾಕುತ್ತಿದ್ದರು. ಆ ದಿನವೇ ಫಾಲ್ಗುಣ ಮಾಸದ ಶುಕ್ಲಪಕ್ಷದ ಹುಣ್ಣುಮೆ.
ಇದು ವರ್ಷದ ಕೊನೆಯ ಹುಣ್ಣುಮೆ. ಮುಂದೆ ಹೊಸ ವರ್ಷ ಬರಲಿದ್ದು ಹಳೆಯ ಕೆಟ್ಟ ಅಂಶಗಳನ್ನು ತಲೆಯಿಂದ ತೆಗೆದು ಹಾಕಿ, ಹೊಸಬರಾಗುವ ದಿನವಿದು. ಈ ದಿನ ಯಾರಿಗೂ ಏನನ್ನೂ ಹೇಳಬಹುದು. ಅವರ ಬಗ್ಗೆ ಇರುವ ಎಲ್ಲ ನಕಾರಾತ್ಮಕ ಅಂಶಗಳನ್ನೂ ಹೊರಹಾಕಿ ಮನಸ್ಸಿಗೆ ಒಂದು ನೆಮ್ಮದಿಯನ್ನು ಕೊಡುವಂತಹ ದಿನ.
ಪೂರ್ಣಿಮೆಯ ರಾತ್ರಿ ಗೋಮಯ ಹಾಗೂ ಕಟ್ಟಿಗೆಯ ರಾಶಿಯನ್ನು ಮಾಡಿ, ಅದಕ್ಕೆ ಬೆಂಕಿ ಹಚ್ಚಿ, ಅಲ್ಲಿ ಡುಂಢಿ ರಾಕ್ಷಸನನ್ನು ಆಹ್ವಾನಿಸಿ, ಅರ್ಘ್ಯ, ಪಾದ್ಯಗಳಿಂದ ಪೂಜಿಸಿ ಅನಂತರ ಹಾಡು ಹೇಳುತ್ತಾ, ನಗುತ್ತಾ, ಇಷ್ಟವಾಗದವರ ಬಗ್ಗೆ ಇಷ್ಟ ಬಂದಂತೆ ನಿಂದಿಸುತ್ತಾ ಮೂರು ಪ್ರದಕ್ಷಿಣೆ ಬಂದು ನಮಸ್ಕರಿಸಿ ಪೂಜೆಯನ್ನು ಮುಕ್ತಾಗೊಳಿಸಬೇಕು. ಸ್ನಾನ ಮಾಡಿ ಶುದ್ಧನಾಗಬೇಕು. ಅನಂತರ ದಾನಾದಿಗಳನ್ನು ನೀಡಬೇಕು. ಇನ್ನೊಂದು ವಿಶೇಷವೆಂದರೆ ಈ ದಹನಕ್ಕೆ ಬೇಕಾದ ಕಟ್ಟಿಗೆಯನ್ನು ಕಳ್ಳತನದಿಂದ ತರಬಹುದು. ಆದರೆ ಅದಕ್ಕೂ ಸಮಯವಿದೆ. ಆ ಪಕ್ಷದ ಪಂಚಮೀ ತಿಥಿಯಿಂದ ದಶಮೀ ತಿಥಿಯ ವರೆಗೆ ಮಾತ್ರ ಕಟ್ಟಿಗೆಯನ್ನು ತಂದು ಇಟ್ಟಕೊಂಡು ಪೂರ್ಣಿಮೆಯಂದು ಸುಡುವುದು. ಹೀಗೆ ಈ ದಿನವನ್ನು ಆಚರಿಸುವುದು.
ಬಣ್ಣಗಳನ್ನೂ ಎರಚುವ ಸಂಪ್ರದಾಯವೂ ನಮ್ಮ ಕಾಮನೆಯನ್ನು ಪ್ರಕಟಿಸುವ ಸಲುವಾಗಿ ಆಗಿದ್ದು, ಮನಸ್ಸಿನ ಸುದ್ಭಾವ ಮತ್ತು ದುರ್ಭಾವಗಳನ್ನು ಬಣ್ಣದ ಮೂಲಕ ಪ್ರಕಟಿಸುವುದಾಗಿದೆ.
ಹೀಗೆ ಭಾರತೀಯರ ಆಚರಣೆಗಳೇ ಭಿನ್ನ. ಊಹಿಸಲಾಗದ ಕಾರ್ಯಗಳು, ಅನೂಹ್ಯ ಅರ್ಥಗಳನ್ನು ಕೊಡುವಂತಹವುಗಳಾಗಿವೆ.
– ಲೋಹಿತ ಹೆಬ್ಬಾರ್ – 8762924271
Published On - 5:52 pm, Tue, 11 March 25