
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಸ್ಥಾನವು ಅತ್ಯಂತ ಮಹತ್ವದ್ದು. ಗುರುವು ಜ್ಞಾನ, ಸಂತಾನ ಮತ್ತು ಸಂಪತ್ತಿನ ಕಾರಕ. ಪ್ರಸ್ತುತ ಗುರುವು ಬುಧನ ರಾಶಿಯಾದ ಮಿಥುನ ರಾಶಿಯಲ್ಲಿ ಇದ್ದು, ಶನಿಯ ದ್ರೇಕ್ಕಾಣ, ಚಂದ್ರನ ಹೋರೆ, ಬುಧನ ನವಾಂಶ ಹಾಗೂ ಶುಕ್ರನ ದ್ವಾದಶಾಂಶ ಮತ್ತು ತ್ರಿಂಶಾಂಶಗಳಲ್ಲಿ ಸ್ಥಿತನಾಗಿರುವುದು ಒಂದು ವಿಶಿಷ್ಟ ಯೋಗವಾಗಿದೆ. ಈ ಸೂಕ್ಷ್ಮ ವಿಭಾಗೀಯ ಸ್ಥಿತಿಗಳು ವ್ಯಕ್ತಿಯ ಜೀವನದ ಮೇಲೆ ವೈವಿಧ್ಯಮಯ ಪ್ರಭಾವಗಳನ್ನು ಬೀರುತ್ತವೆ.
ಗುರುವು ಮಿಥುನ ರಾಶಿಯಲ್ಲಿದ್ದಾಗ ಸಾಮಾನ್ಯವಾಗಿ ಬೌದ್ಧಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಇಲ್ಲಿ ಗುರುವು ಶನಿಯ ದ್ರೇಕ್ಕಾಣದಲ್ಲ ಇರುವುದರಿಂದ ಕಠಿಣ ಪರಿಶ್ರಮ ಮತ್ತು ಶಿಸ್ತಿನ ನಂತರವೇ ಯಶಸ್ಸು ಲಭಿಸುತ್ತದೆ. ಚಂದ್ರನ ಹೋರೆಯಲ್ಲಿರುವುದು ಮಾನಸಿಕ ಶಾಂತಿ ಮತ್ತು ಸೃಜನಶೀಲತೆಯನ್ನು ನೀಡಿದರೆ, ಬುಧನ ನವಾಂಶವು ವ್ಯವಹಾರ ಜ್ಞಾನವನ್ನು ಚುರುಕುಗೊಳಿಸುತ್ತದೆ. ವಿಶೇಷವಾಗಿ ಶುಕ್ರನ ದ್ವಾದಶಾಂಶ ಮತ್ತು ತ್ರಿಂಶಾಂಶಗಳಲ್ಲಿ ಗುರು ಇರುವುದು ಲೌಕಿಕ ಸುಖ, ಐಷಾರಾಮಿ ಜೀವನ ಮತ್ತು ಕಲಾತ್ಮಕ ಹವ್ಯಾಸಗಳ ಮೂಲಕ ಲಾಭವನ್ನು ಸೂಚಿಸುತ್ತದೆ.
ಈ ವಿಶಿಷ್ಟ ಸ್ಥಿತಿಯ ಗುರು ದಶೆಯು ಚಾಲ್ತಿಯಲ್ಲಿದ್ದಾಗ, ಆಯಾ ರಾಶಿಗಳಿಗೆ ಈ ಕೆಳಗಿನ ಫಲಗಳು ದೊರೆಯಲಿವೆ. ಮಿಥುನ, ತುಲಾ, ಕುಂಭಗಳು ವಾಯು ತತ್ವದ ರಾಶಿಯಾಗಿದ್ದು, ಈ ರಾಶಿಯವರಿಗೆ ಗುರು ದಶೆಯು ಅತ್ಯಂತ ಲಾಭದಾಯಕ. ಸಂವಹನ ಕಲೆ ಸಿದ್ಧಿಸಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಹೊಸ ಒಪ್ಪಂದಗಳು ಕೈಗೂಡಲಿವೆ. ವಿಶೇಷವಾಗಿ ಲೇಖಕರು, ಮಾಧ್ಯಮದವರು ಮತ್ತು ಕಲಾವಿದರಿಗೆ ಇದು ಸುವರ್ಣ ಕಾಲ.
ಮೇಷ, ಸಿಂಹ, ಧನುಗಳಯ ಅಗ್ನಿ ತತ್ವ ರಾಶಿಯಾಗಿದ್ದು ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ದೂರ ಪ್ರಯಾಣದಿಂದ ಲಾಭವಾಗಲಿದ್ದು, ಉನ್ನತ ಶಿಕ್ಷಣದಲ್ಲಿ ಪ್ರಗತಿ ಕಂಡುಬರಲಿದೆ. ಶುಕ್ರನ ಪ್ರಭಾವದಿಂದ ಕೌಟುಂಬಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ.
ವೃಷಭ, ಕನ್ಯಾ, ಮಕರಗಳು ಭೂ ತತ್ವ ರಾಶಿಯಾಗಿದ್ದು ಇವರು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಾರೆ. ಶನಿಯ ದ್ರೇಕ್ಕಾಣದ ಪ್ರಭಾವದಿಂದಾಗಿ ಕೆಲಸದಲ್ಲಿ ಆರಂಭದಲ್ಲಿ ವಿಳಂಬವಾದರೂ, ಅಂತಿಮವಾಗಿ ಸ್ಥಿರವಾದ ಆದಾಯ ಲಭಿಸುತ್ತದೆ. ಆಸ್ತಿ ಖರೀದಿ ಅಥವಾ ಹೂಡಿಕೆಗೆ ಇದು ಪೂರಕ ಸಮಯ.
ಕರ್ಕಾಟಕ, ವೃಶ್ಚಿಕ, ಮೀನಗಳು ಜಲ ತತ್ವ ರಾಶಿಯಾಗಿದ್ದು ಇವರಿಗೆ ಮಾನಸಿಕ ನೆಮ್ಮದಿ ಮುಖ್ಯವಾಗಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಹಿರಿಯರ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ರಿಯಲ್ ಎಸ್ಟೇಟ್ ಅಥವಾ ಕೃಷಿ ಕ್ಷೇತ್ರದಲ್ಲಿ ಲಾಭ ನಿರೀಕ್ಷಿಸಬಹುದು.
ಗುರುವು ಈ ಸ್ಥಿತಿಯಲ್ಲಿರುವಾಗ ಈ ಕೆಳಗಿನ ಕಾರ್ಯಗಳು ವಿಶೇಷ ಯಶಸ್ಸನ್ನು ನೀಡುತ್ತವೆ. ಬೋಧನೆ, ತರಬೇತಿ ಕೇಂದ್ರಗಳು ಮತ್ತು ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸುವುದು ಲಾಭದಾಯಕ.
ಶುಕ್ರನ ಅಂಶವಿರುವುದರಿಂದ ಫ್ಯಾಷನ್ ಡಿಸೈನಿಂಗ್, ಆಭರಣಗಳ ವ್ಯಾಪಾರ ಅಥವಾ ಅಲಂಕಾರಿಕ ವಸ್ತುಗಳ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಅಭಿವೃದ್ಧಿ ತರಲಿದೆ.
ಸಾಫ್ಟ್‌ವೇರ್ ಅಭಿವೃದ್ಧಿ, ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಬರವಣಿಗೆಯಂತಹ ಕ್ಷೇತ್ರಗಳು ಉತ್ತಮ ಫಲ ನೀಡಲಿವೆ.
ಮಿಥುನ ರಾಶಿಯ ಗುರುವು ವಿವಿಧ ವರ್ಗಗಳಲ್ಲಿ ಶನಿ, ಬುಧ ಮತ್ತು ಶುಕ್ರನ ಪ್ರಭಾವಕ್ಕೆ ಒಳಗಾಗಿರುವುದರಿಂದ, ಈ ದಶೆಯು ಕೇವಲ ಜ್ಞಾನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಮತ್ತು ಲೌಕಿಕ ಬೆಳವಣಿಗೆಗೂ ದಾರಿಯಾಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡುವವರಿಗೆ ಮತ್ತು ನೈತಿಕ ಹಾದಿಯಲ್ಲಿ ನಡೆಯುವವರಿಗೆ ಈ ಕಾಲವು ಅತ್ಯಂತ ಫಲಪ್ರದವಾಗಲಿದೆ. ಶುಭ ಫಲಗಳ ವೃದ್ಧಿಗಾಗಿ ಗುರುವಾರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಉತ್ತಮ.
– ಲೋಹಿತ ಹೆಬ್ಬಾರ್