Pisces Ugadi Horoscope 2025: ಮೀನ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
2025ರ ಮಾರ್ಚ್ 30ರಿಂದ ಆರಂಭವಾದ ವಿಶ್ವಾವಸು ಸಂವತ್ಸರದ ರಾಶಿ ಭವಿಷ್ಯ ಇಲ್ಲಿದೆ. ಶನಿ, ಗುರು, ರಾಹು-ಕೇತು ಗ್ರಹಗಳ ಸ್ಥಿತಿಯನ್ನು ಆಧರಿಸಿ 12 ರಾಶಿಗಳಿಗೂ ಭವಿಷ್ಯವನ್ನು ತಿಳಿಸಲಾಗಿದೆ. ಮೀನ ರಾಶಿಯವರಿಗೆ ಶನಿಯ ಪ್ರಭಾವದಿಂದ ಆರೋಗ್ಯ ಸಮಸ್ಯೆಗಳು, ಗುರು ಗ್ರಹದಿಂದ ಹಣಕಾಸು ಸಮಸ್ಯೆಗಳು ಮತ್ತು ರಾಹು-ಕೇತುಗಳಿಂದ ವ್ಯಾಜ್ಯಗಳು ಉಂಟಾಗಬಹುದು. ವೈಯಕ್ತಿಕ ಜಾತಕ ವಿವರಗಳನ್ನು ಪರಿಗಣಿಸುವುದು ಮುಖ್ಯ.

2025ರ ಮಾರ್ಚ್ 30 ವಿಶ್ವಾವಸು ಸಂವತ್ಸರ ಶುರುವಾಗುವ ದಿನ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಈ ಸಂವತ್ಸರದ ಗ್ರಹಸ್ಥಿತಿಗಳು ಹೀಗಿವೆ:
ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶಿಸಿದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಮೀನ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಒಂದನೇ ಮನೆ ಸಂಚಾರ):
ಜನ್ಮ ರಾಶಿಯಲ್ಲಿ ಶನಿ ಸಂಚರಿಸುವುದರಿಂದ ಆರೋಗ್ಯದಲ್ಲಿ ಸಮಸ್ಯೆಗಳು ತೀವ್ರವಾಗಲಿದೆ. ದೀರ್ಘಾವಧಿಗೆ ಔಷಧೋಪಚಾರಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ವ್ಯಾಯಾಮ, ಯೋಗ, ಜಿಮ್ ಇಂಥದ್ದನ್ನು ಮಾಡುತ್ತಾ ಇರುವವರು ಆಲಸ್ಯದ ಕಾರಣಕ್ಕೆ ನಿಲ್ಲಿಸುವುದಕ್ಕೆ ಹೋಗಬಾರದು. ಒಂದು ವೇಳೆ ಈಗ ಶುರು ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಪರಿಣತ ತರಬೇತುದಾರರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಬಹಳ ಮುಖ್ಯವಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡಬಹುದು, ನಿಮ್ಮ ಪರವಾಗಿ ನಾನು ವ್ಯವಹಾರವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡು ನಿಮ್ಮ ಬಳಿ ಯಾರಾದರೂ ಬರಲಿದ್ದಾರೆ. ಅಂಥ ವ್ಯವಹಾರ- ವ್ಯಕ್ತಿಗಳಿಂದ ದೂರ ಇರುವುದು ಕ್ಷೇಮ.
ಗುರು (ನಾಲ್ಕನೇ ಮನೆ- ಐದನೇ ಮನೆ):
ತಾಯಿಯ ಜೊತೆಗೆ ಮನಸ್ತಾಪಗಳು ಆಗಲಿವೆ. ಹಣಕಾಸು ವಿಚಾರಕ್ಕೆ ಸ್ನೇಹಿತರು- ಆಪ್ತರ ಜತೆಗೆ ಜಗಳ- ಕಲಹಗಳು ಆಗಲಿವೆ. ನಿಮ್ಮಲ್ಲಿ ಕೆಲವರಿಗೆ ವೈದ್ಯರು ನೀಡುವಂಥ ಔಷಧಿಯಿಂದ ಅಲರ್ಜಿ ಆಗಲಿದೆ. ಮಾತ್ರೆ- ಸಿರಪ್ ಇಂಥದ್ದನ್ನು ಖರೀದಿ ಮಾಡುವಾಗ ಯಾವ ಕಂಪನಿಯದು, ಅದರ ಮುಕ್ತಾಯ ದಿನಾಂಕ ಆಗಿಹೋಗಿದೆಯಾ, ಆ ಔಷಧಿಯಿಂದ ನಿಮಗೆ ಹಿಂದೆ ಅಲರ್ಜಿ ಅಂಥದ್ದೇನಾದರೂ ಆಗಿತ್ತೇ ಎಂಬಿತ್ಯಾದಿ ವಿಚಾರಗಳನ್ನು ಆಲೋಚನೆ ಮಾಡುವುದು ಒಳ್ಳೆಯದು. ಅಕ್ಟೋಬರ್- ಡಿಸೆಂಬರ್ ಮಧ್ಯೆ ನೀವು ಈ ಹಿಂದೆ ಹೂಡಿಕೆ ಮಾಡಿದ್ದು ಒಳ್ಳೆ ರಿಟರ್ನ್ ನೀಡಿದ್ದಲ್ಲಿ ಹಣ ಹಿಂತೆಗೆದುಕೊಳ್ಳುವುದು ಒಳ್ಳೆಯದು. ಹಾಗೆ ನಿಮಗೆ ಆಲೋಚನೆಯೂ ಬರಲಿದೆ. ನಿಮಗೆ ಬರಬೇಕಾದ ಬಾಕಿ ಹಣ ತಲುಪಲಿದೆ.
ಇದನ್ನೂ ಓದಿ: ವೃಶ್ಚಿಕ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ಹನ್ನೆರಡನೇ ಮನೆ), ಕೇತು (ಆರನೇ ಮನೆ):
ಷೇರು- ಮ್ಯೂಚುವಲ್ ಫಂಡ್, ಸಟ್ಟಾ ವ್ಯವಹಾರದಿಂದ ದೂರ ಇರುವುದು ಬಹಳ ಒಳ್ಳೆಯದು. ಜೂಜು- ಆನ್ ಲೈನ್ ಗೇಮ್ ಇಂಥವುಗಳಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳಿ. ನಿಮ್ಮ ಸ್ನೇಹಿತರೋ ಸಂಬಂಧಿಗಳೋ ಇಂಥದ್ದರಿಂದ ಲಾಭ ಮಾಡಿಕೊಂಡರು ಎಂಬ ಕಾರಣಕ್ಕೆ ಅವರದೇ ಹಾದಿಯನ್ನು ತುಳಿಯುವುದು ಅಪಾಯಕಾರಿ ಆಗಲಿದೆ. ಸೈಟು- ಆಸ್ತಿ ವಿಚಾರಕ್ಕೆ ವ್ಯಾಜ್ಯಗಳು ತಲೆ ಎತ್ತಲಿವೆ. ಅದರ ನಿರ್ಲಕ್ಷ್ಯ ಮಾಡಬೇಡಿ. ದೇವತಾರಾಧನೆ, ತೀರ್ಥಕ್ಷೇತ್ರ ದರ್ಶನ ಇತ್ಯಾದಿ ಪುಣ್ಯ ಕಾರ್ಯಗಳನ್ನು ಮಾಡುವುದಕ್ಕೆ ದೊರೆಯುವ ಅವಕಾಶವನ್ನು ಬಳಸಿಕೊಳ್ಳಿ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Tue, 1 April 25