Saturn Transit 2023: ಜನವರಿ 17ರಂದು ಕುಂಭ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 11, 2022 | 7:59 AM

ಶನಿ ಸಂಚಾರ 2023: ಮುಂದಿನ ವರ್ಷ ಜನವರಿ 17ರ ನಂತರ ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿ ಹೇಳಿದ್ದಾರೆ.

Saturn Transit 2023: ಜನವರಿ 17ರಂದು ಕುಂಭ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು
ಸಾಂದರ್ಭಿಕ ಚಿತ್ರ
Follow us on

ಮುಂದಿನ ವರ್ಷ, ಅಂದರೆ 2023ರ ಜನವರಿ 17ಕ್ಕೆ ಮತ್ತೆ (ಈ ಹಿಂದೆ ಕೆಲ ಸಮಯ ಕುಂಭ ರಾಶಿಯ ಶನಿ ಸಂಚಾರ ಆಗಿದೆ) ಶನಿಗ್ರಹ ಕುಂಭದಲ್ಲಿ ಉದಯ ಆಗಲು ಶುರು ಮಾಡುತ್ತಾನೆ. ಯಾವ ಜಾತಕರಿಗೆ ಕರ್ಕಾಟಕ ಲಗ್ನವೋ, ಕರ್ಕಾಟಕ ರಾಶಿಯೋ (ಜನ್ಮ ರಾಶಿ) ಅಥವಾ ಕರ್ಕಾಟಕದಲ್ಲಿಯೋ, ವೃಶ್ಚಿಕದಲ್ಲೋ ಜನ್ಮ ಜಾತಕದಲಿ ಶನಿ ಇದ್ದರೆ ಅಂಥವರು 2025ರ ಮಾರ್ಚ್‌ ತನಕ, ಹೆಚ್ಚೂ ಕಡಿಮೆ ಎರಡೂ ಕಾಲ ವರ್ಷ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್‌ನಿಂದ ಪ್ರಕಾಶ್ ಅಮ್ಮಣ್ಣಾಯ ಅವರನ್ನೇ ಮಾತನಾಡಿಸಿ, ಕಾರಣ ಮತ್ತು ಎಚ್ಚರಿಕೆ ಎರಡರ ಬಗ್ಗೆಯೂ ಕೇಳಲಾಯಿತು. ಅವರು ನೀಡಿದ ಉತ್ತರದ ವಿವರಣೆ ಹೀಗಿದೆ.

ಮೊದಲಿಗೆ ಆಯಾ ವ್ಯಕ್ತಿಗಳು ತಮ್ಮ ಜನ್ಮ ಜಾತಕವನ್ನು ನೋಡಿಕೊಳ್ಳಬೇಕು. ಒಂದು ವೇಳೆ ಹೇಗೆ ನೋಡಿಕೊಳ್ಳುವುದು ಎಂಬುದು ಗೊತ್ತಿಲ್ಲ ಅಂತಾದಲ್ಲಿ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳಬೇಕು. ಲಗ್ನ ಎಂದು ಅದರ ಮುಂದೆ ಬರೆದಿರಲಾಗುತ್ತದೆ. ಅಥವಾ ಎಲ್ಲಿ ಚಂದ್ರ ಇದೆಯೋ (ರಾಶಿ ಅಥವಾ ಭಾವ ಕುಂಡಲಿಯಲ್ಲಿ) ಅದು ಆ ವ್ಯಕ್ತಿಯ ರಾಶಿ ಆಗಿರುತ್ತದೆ. ಅಲ್ಲಿಂದ ಗಡಿಯಾರ ತಿರುಗುವ ರೀತಿಯಲ್ಲಿ ಎಣಿಸುತ್ತಾ ಬಂದರೆ ಯಾರಿಗೆ ಶನಿ ಇರುವ ಸ್ಥಾನವು, ಅಂದರೆ ಕುಂಭ ರಾಶಿಯು ಎಂಟು ಅಥವಾ ನಾಲ್ಕನೇ ಸ್ಥಾನ ಆಗಿರುತ್ತದೋ ಅಂಥವರು ಬಹಳ ಜಾಗ್ರತೆ ವಹಿಸಿಕೊಳ್ಳಬೇಕು.

ಕುಂಭ ರಾಶಿಯಲ್ಲಿ ಶನಿ ಸಂಚಾರದ ಪರಿಣಾಮಗಳು

ಕರ್ಕಾಟಕ ಲಗ್ನ ಅಥವಾ ಕರ್ಕಾಟಕ ರಾಶಿಯವರು ಹಾಗೂ ಒಂದು ವೇಳೆ ಯಾರ ಜನ್ಮ ಜಾತಕದಲ್ಲಿ ಕರ್ಕಾಟಕ ರಾಶಿಯಲ್ಲಿ ಶನಿ ಇರುತ್ತದೋ ಅಂಥವರಿಗೆ ಅಲ್ಲಿಂದ ಎಣಿಸುತ್ತಾ ಬಂದರೆ ಕುಂಭ ರಾಶಿಯಲ್ಲಿನ ಶನಿ ಎಂಟನೇ ಮನೆ ಆಗುತ್ತದೆ. ಅದೇ ರೀತಿ ವೃಶ್ಚಿಕಕ್ಕೆ ಕುಂಭ ರಾಶಿ ನಾಲ್ಕನೇ ಸ್ಥಾನವಾಗುತ್ತದೆ. ಆದ್ದರಿಂದ ವೃಶ್ಚಿಕ ಲಗ್ನದವರು ಅಥವಾ ಆ ರಾಶಿಯಲ್ಲಿ ಚಂದ್ರ ಇರುವಂಥವರು ಮೇಲೆ ತಿಳಿಸಿದಂತೆ ಇನ್ನು ಎರಡೂ ಕಾಲು ವರ್ಷ ಎಚ್ಚರದಿಂದ ಇರಬೇಕು.

ಇನ್ನು ಬರೀ ಎಚ್ಚರಿಕೆ ಅಂದರಾಯಿತಾ, ವಿವರಿಸಿ ಹೇಳಿ ಅನ್ನುವವರಿಗೆ, ಆರೋಗ್ಯ ಸಮಸ್ಯೆ, ವಿವಾದಗಳು ಉಂಟಾಗಬಹುದು. ವಿವಾದಾತ್ಮಕ ಹೇಳಿಕೆ,ಬರಹದ ಮೂಲಕ ಸಮಸ್ಯೆ ಉಂಟಾದೀತು.ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾದೀತು. ಹೊಸ ಹೊಸ ಉದ್ಯಮಕ್ಕೆ ಕೈ ಹಾಕಬಾರದು. ಇದ್ದುದನ್ನೇ ನಿರ್ವಹಿಸಿಕೊಂಡು ಹೋಗೋದು, ವಿವಾದಗಳಿಂದ ದೂರ ಇರೋದೇ ಇದಕ್ಕೆ ಪ್ರಥಮ ಪರಿಹಾರ.

ಶನಿ ಸಂಚಾರದ ದುಷ್ಪರಿಣಾಮಕ್ಕೆ ಪರಿಹಾರ ಹೀಗಿದೆ:

ಇನ್ನು ಈ ಅವಧಿಯಲ್ಲಿ ದೇವತಾರಾಧನೆ ರೂಪದಲ್ಲಿ ಪರಿಹಾರ ಏನು ಅಂದರೆ, ಆಂಜನೇಯ, ಈಶ್ವರ, ಅಯ್ಯಪ್ಪ ಈ ದೇವರ ಆರಾಧನೆಯನ್ನು ಶ್ರದ್ಧಾ- ಭಕ್ತಿಯಿಂದ ಮಾಡಬೇಕು. ಇನ್ನು ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ವಿವೇಕಯುತರಾಗಿ ನಡೆದುಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಯಾವುದೇ ಜಾತಕರಿಗೆ ರಕ್ಷಣೆ ನೀಡಬಹುದಾದದ್ದು ಅವರ ವಿವೇಚನೆ. ಅಡಸಾ ಬಡಸಾ ಮಾತು, ನಡವಳಿಕೆ ಇವುಗಳಿಂದ ಸಮಸ್ಯೆಗಳಾಗುತ್ತವೆ. ಆದ್ದರಿಂದ ವಿವೇಕಯುತರಾಗಬೇಕು, ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಮಾತು ಮುಗಿಸಿದರು.

ಲೇಖನ – ಸ್ವಾತಿ ಎನ್ ಕೆ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:05 am, Sun, 11 December 22