Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಧನುಸ್ಸು ರಾಶಿ ಮೇಲೆ ಏನು ಪ್ರಭಾವ?
ನಿಮ್ಮ ರಾಶಿಗೆ ಧನ- ಕುಟುಂಬ ಸ್ಥಾನ ಹಾಗೂ ಪರಾಕ್ರಮ- ಯಶಸ್ಸು- ಸೋದರ ಸ್ಥಾನ ಅಧಿಪತಿಯಾದ ಶನಿಯು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಕೂಡು ಕುಟುಂಬದಲ್ಲಿ ವಾಸ ಮಾಡುತ್ತಿದ್ದೀರಿ ಅಂದರೆ ಅಲ್ಲಿಂದ ಪ್ರತ್ಯೇಕ ಬರುವಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ತಾಯಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೀನ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಧನುಸ್ಸು ರಾಶಿಯಲ್ಲಿ ಈ ಎಲ್ಲ ಬದಲಾವಣೆ ಆಗಬಹುದು.

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಧನುಸ್ಸು ರಾಶಿಯವರಿಗೆ ಚತುರ್ಥ ಶನಿಯ ಸಂಚಾರ ಶುರುವಾಗುತ್ತದೆ. ಇದನ್ನು ಅರ್ಧಾಷ್ಟಮ ಅಂತಲೂ ಜ್ಯೋತಿಷ್ಯದಲ್ಲಿ ಕರೆಯಲಾಗುತ್ತದೆ. ಅದರರ್ಥ ಏನೆಂದರೆ, ಅಷ್ಟಮ ಶನಿ ಪ್ರಭಾವದ ಅರ್ಧದಷ್ಟು ನಕಾರಾತ್ಮಕ ಪ್ರಭಾವ ಆಗುತ್ತದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮ ಮಾತಿನಿಂದಲೇ ಜಗಳ- ಕಲಹಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಧನುಸ್ಸು ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ಧನ- ಕುಟುಂಬ ಸ್ಥಾನ ಹಾಗೂ ಪರಾಕ್ರಮ- ಯಶಸ್ಸು- ಸೋದರ ಸ್ಥಾನ ಅಧಿಪತಿಯಾದ ಶನಿಯು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಕೂಡು ಕುಟುಂಬದಲ್ಲಿ ವಾಸ ಮಾಡುತ್ತಿದ್ದೀರಿ ಅಂದರೆ ಅಲ್ಲಿಂದ ಪ್ರತ್ಯೇಕ ಬರುವಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ತಾಯಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮಲ್ಲಿ ಕೆಲವರು ದೊಡ್ಡದಾದ ಸೈಟು ಅಥವಾ ದೊಡ್ಡದಾದ ಮನೆ ಇದ್ದಲ್ಲಿ, ಇಷ್ಟು ವಿಶಾಲವಾದದ್ದು ಬೇಡ ಅಂದುಕೊಂಡು ಅದರ ಮಾರಾಟ ಮಾಡುವಂಥ ಯೋಗ ಇದೆ. ಮುಖ್ಯವಾಗಿ ನಿಮ್ಮ ಮಾತಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ಪದೇಪದೇ ಅನಿಸಿ, ವಿಚಿತ್ರ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ.
ನಿಮ್ಮ ದುಡಿಮೆಯ ಸಾಮರ್ಥ್ಯ, ಉದ್ಯೋಗದಲ್ಲಿ ಪಗಾರ ಇತ್ಯಾದಿಗಳ ವಿಚಾರವಾಗಿ ಸಂಗಾತಿ ಹಂಗಿಸುವಂತಾಗುತ್ತದೆ. ಇದರಿಂದ ನೀವು ಕೆರಳಿ, ಜಗಳ- ಕದನಗಳು ಆಗಲಿವೆ. ಇತರರನ್ನು ನಿಮ್ಮ ಜೊತೆಗೆ ಹೋಲಿಸಿ, ಹೀಯಾಳಿಸುವುದು, ಮೂದಲಿಸುವುದು ಇವೆಲ್ಲ ಮಾಡುತ್ತಾರೆ. ಈ ವಿಚಾರದಲ್ಲಿ ನಿಮ್ಮದೂ ತಪ್ಪಿರುತ್ತದೆ. ಸಾಧ್ಯವಾದಷ್ಟೂ ಮಾತು- ಕತೆ ವಿಪರೀತಕ್ಕೆ ಹೋಗದಂತೆ ನೋಡಿಕೊಳ್ಳಿ. ನಿಮ್ಮಿಂದ ಆಗುವ ಕೆಲಸಗಳು ಯಾವುವು ಎಂಬ ಸ್ಪಷ್ಟತೆ ಇರುವುದು ಅತಿ ಮುಖ್ಯ. ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಗಳನ್ನು ವಹಿಸಿಕೊಂಡು, ಆ ನಂತರ ಕೈಯಿಂದ ಹಣ ಹಾಕಿ ಆ ಕೆಲಸ ಮುಗಿಸಬೇಕಾಗುತ್ತದೆ. ಜತೆಗೆ ಅವಮಾನದ ಪಾಲಾಗುತ್ತೀರಿ.
ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಮಸ್ಯೆ ಆಗುತ್ತದೆ. ಆಮೇಲೆ ಓದಿದರಾಯಿತು, ಆಮೇಲೆ ನೋಡಿಕೊಂಡರಾಯಿತು ಇಂಥ ಧೋರಣೆಯನ್ನು ಮೊದಲು ಬಿಡಬೇಕು. ಈ ಹಿಂದಿನ ವರ್ಷಗಳಲ್ಲಿ ನೀವು ಎಷ್ಟು ಅಂಕ ಗಳಿಸಿದಿರಿ, ಎಷ್ಟು ಜಾಣರಾಗಿದ್ದಿರಿ ಎಂಬುದು ಮುಖ್ಯವಾಗುವುದಿಲ್ಲ. ಈ ಅವಧಿಯಲ್ಲಿ ಆಲಸ್ಯ ವಿಪರೀತ ಕಾಡುತ್ತದೆ. ಜತೆಗೆ ನೆನಪಿನ ಶಕ್ತಿ ಕೂಡ ಕೈಕೊಡುತ್ತದೆ. ಐಷಾರಾಮಿ ವಸ್ತುಗಳ ಬೆನ್ನು ಬೀಳದಿರಿ. ಇದರ ಗುಂಗಲ್ಲಿ ವಿದ್ಯಾಭ್ಯಾಸ- ವ್ಯಾಸಂಗಕ್ಕೆ ಹಿನ್ನಡೆ ಆಗುತ್ತದೆ.
ಇತರರ ಮೇಲಿನ ಪ್ರತಿಷ್ಠೆಗಾಗಿ ವಿಲಾಸಿ ವಸ್ತುಗಳ ಖರೀದಿ, ವಾಹನಗಳ ಖರೀದಿ ಮಾಡುವಂತೆ ಪ್ರಚೋದನೆ ದೊರೆಯುತ್ತದೆ. ಸಾಲ ಮಾಡಿ ತೀರಿಸಿಕೊಂಡು ಬಿಡ್ತೀನಿ ಅಂತೇನಾದರೂ ಅಗತ್ಯ ಮೀರಿದ್ದನ್ನು ಖರೀದಿಸಿದಿರೋ ಆ ಸಾಲ ತೀರಿಸುವುದಕ್ಕಾಗಿ ವಸ್ತು- ವಾಹನವನ್ನೇ ಮಾರಾಟ ಮಾಡುವ ಸ್ಥಿತಿ ಉದ್ಭವಿಸುತ್ತದೆ. ಮಹಿಳೆಯರಿಗೆ ತಾಯಿ ಜೊತೆಗೆ ತಾಯಿ ಸಮಾನರಾದವರೊಂದಿಗೆ ಅಭಿಪ್ರಾಯ ಭೇದ, ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ಅವಿವಾಹಿತ ಯುವತಿಯರಿಗೆ ಮಾನಸಿಕ ಕಿರಿಕಿರಿ ಹೆಚ್ಚುತ್ತದೆ.
-ಸ್ವಾತಿ ಎನ್.ಕೆ.




