AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ

ಜ್ಯೋತಿಷ್ಯದ ಪ್ರಕಾರ, ಮೀನ ರಾಶಿಯಲ್ಲಿರುವ ಶನಿ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತಾನೆ. ಶನಿಯು ಕರ್ಮ ಫಲ ನೀಡುವವನಾಗಿದ್ದು, ಈ ಸಂಕ್ರಮಣದಿಂದ ಉದ್ಯೋಗ, ಆರ್ಥಿಕ ಸ್ಥಿತಿ, ಸಂಬಂಧಗಳು ಪ್ರಭಾವಿತವಾಗುತ್ತವೆ. ಕೆಲವು ರಾಶಿಗಳಿಗೆ ಶುಭ ಫಲ, ಮತ್ತೆ ಕೆಲವು ರಾಶಿಗಳಿಗೆ ಮಿಶ್ರ ಫಲ. ಶನಿ ದಶೆಯೂ ಈ ಸಮಯದಲ್ಲಿ ಶುಭ ಅಥವಾ ಅಶುಭವಾಗಿ ಪರಿಣಮಿಸಬಹುದು. ಈ ಅವಧಿಯಲ್ಲಿ ಶನಿ ಪ್ರಭಾವವನ್ನು ಅರ್ಥಮಾಡಿಕೊಂಡು ಸೂಕ್ತ ಜಾಗ್ರತೆ ವಹಿಸುವುದು ಮುಖ್ಯ.

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ
ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 19, 2026 | 12:36 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು‌ ಕರ್ಮ ಫಲವನ್ನು ನೀಡುವವನು ಎಂದು ಪ್ರಸಿದ್ಧ. ಕುಂಡಲಿಯಲ್ಲಿ ಶನಿಯ ಸ್ಥಾನದ ಮೇಲೆ ಉದ್ಯೋಗ, ಉದ್ಯಮಗಳು ತೀರ್ಮಾನವಾಗುತ್ತವೆ. ಅಧಿಕಾರವನ್ನೂ ನೀಡುವನು, ನ್ಯಾಯ ಮಾರ್ಗದಲ್ಲಿ ಹೋಗುವಂತೆ ಮಾಡಿ ನ್ಯಾಯವನ್ನೂ ಕೊಡಿಸುತ್ತಾನೆ. ​​ಮೀನ ಶನಿಗೆ ಸಮ ಕ್ಷೇತ್ರ, ಚಂದ್ರ ದ್ರೇಕ್ಕಾಣ ಶನಿಗೆ ಶತ್ರು ಕ್ಷೇತ್ರ, ರವಿಯ ಹೋರೆ ಶನಿಗೆ ಪರಮ ಶತ್ರುಕ್ಷೇತ್ರ, ಗುರುವಿನ ನವಾಂಶ ಮತ್ತು ತ್ರಿಂಶಾಂಶ ಸಮ/ಮಿತ್ರ ಕ್ಷೇತ್ರ, ಶುಕ್ರನ ದ್ವಾದಶಾಂಶ ಶನಿಗೆ ಮಿತ್ರ ಕ್ಷೇತ್ರ. ವರ್ತಮಾನದಲ್ಲಿ ಶನಿಯ ಸ್ಥಿತಿ ಇದಾಗಿದೆ.

​ಇಂತಹ ಶನಿ ಸ್ಥಿತಿಯಿಂದ ಯಾವ ರಾಶಿಗೆ ಎಂತಹ ಫಲ?

​ಶನಿಯು ಮೀನ ರಾಶಿಯಲ್ಲಿದ್ದಾಗ ಪ್ರಮುಖವಾಗಿ ದ್ವಾದಶ ರಾಶಿಗಳಿಗೆ ಸಾಮಾನ್ಯ ಮತ್ತು ಈ ವರ್ಗ ಬಲದ ಆಧಾರದ ಮೇಲೆ ವಿಶೇಷ ಫಲಗಳಿವು.

​ಮೇಷ, ಕರ್ಕಾಟಕ, ಸಿಂಹ ರಾಶಿ:

ಶನಿಯು ರವಿಯ ಹೋರೆ ಮತ್ತು ಚಂದ್ರನ ದ್ರೇಕ್ಕಾಣದಲ್ಲಿರುವುದರಿಂದ ಈ ರಾಶಿಯವರಿಗೆ ಮಾನಸಿಕ ಆತಂಕ, ಅನಗತ್ಯ ಖರ್ಚುಗಳು ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಆದರೆ ಗುರುವಿನ ನವಾಂಶವಿರುವುದರಿಂದ ಅಂತಿಮವಾಗಿ ಧಾರ್ಮಿಕ ಚಿಂತನೆಗಳಿಂದ ನೆಮ್ಮದಿ ಸಿಗುತ್ತದೆ.

​ವೃಷಭ, ತುಲಾ ರಾಶಿ :

ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ ಈ ರಾಶಿಯವರಿಗೆ ಈ ಅವಧಿಯು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಫಲಗಳನ್ನು ನೀಡುತ್ತದೆ. ಭೂಮಿ, ವಾಹನ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಕಷ್ಟಪಟ್ಟ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

​ಮಿಥುನ, ಕನ್ಯಾ, ಧನು, ಮೀನ ರಾಶಿ :

ಶನಿಯು ಗುರುವಿನ ರಾಶಿ, ನವಾಂಶ ಮತ್ತು ತ್ರಿಂಶಾಂಶಗಳಲ್ಲಿರುವುದರಿಂದ ಈ ರಾಶಿಯವರಿಗೆ ಜ್ಞಾನಾರ್ಜನೆ, ಅಧ್ಯಾತ್ಮ, ಶಿಕ್ಷಣ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ತೀರ್ಥಯಾತ್ರೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮೀನ ರಾಶಿಯವರಿಗೆ ಜನ್ಮ ಶನಿಯ ಪ್ರಭಾವವಿದ್ದರೂ, ಗುರುವಿನ ಬಲದಿಂದಾಗಿ ಬುದ್ಧಿಶಕ್ತಿ ಮತ್ತು ತಾಳ್ಮೆ ಹೆಚ್ಚುತ್ತದೆ.

​ವೃಶ್ಚಿಕ, ಮಕರ, ಕುಂಭ ರಾಶಿ:

ಮಕರ ಮತ್ತು ಕುಂಭ ಶನಿಯ ಸ್ವಂತ ರಾಶಿಗಳಾಗಿದ್ದರೂ, ಮೀನದಲ್ಲಿನ ಶನಿ ಸ್ಥಿತಿಯು ಮಿಶ್ರಫಲವನ್ನು ನೀಡುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಧನಲಾಭವಾಗುತ್ತದೆ. ಆದರೆ ಶತ್ರುಗಳ ಕಾಟ ಅಥವಾ ಗುಪ್ತ ಆತಂಕಗಳು ಎದುರಾಗಬಹುದು.

​ಶನಿಯ ದಶೆ ಶುಭ :

ಈ ನಿರ್ದಿಷ್ಟ ವರ್ಗ ಕುಂಡಲಿಯ ಬಲದ ಪ್ರಕಾರ, ಈ ಕೆಳಗಿನ ಪರಿಸ್ಥಿತಿಯಲ್ಲಿರುವವರಿಗೆ ಶನಿ ದಶೆಯು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ:

​ವೃಷಭ ಮತ್ತು ತುಲಾ:

ಶನಿಗೆ ಶುಕ್ರನು ಪರಮ ಮಿತ್ರ. ಇಲ್ಲಿ ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ, ವೃಷಭ ಮತ್ತು ತುಲಾ ಲಗ್ನ ಅಥವಾ ರಾಶಿಯವರಿಗೆ ಶನಿ ದಶೆಯು ಭಾಗ್ಯೋದಯವನ್ನು ತರುತ್ತದೆ. ಆಸ್ತಿ ವೃದ್ಧಿ, ಉದ್ಯೋಗದಲ್ಲಿ ಪ್ರಗತಿ ಮತ್ತು ರಾಜಯೋಗದಂತಹ ಫಲಗಳು ಸಿಗುತ್ತವೆ.

​ಧನು ಮತ್ತು ಮೀನ :

ಶನಿಯು ಗುರುವಿನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಗುರು ಪ್ರಧಾನ ರಾಶಿಯವರಿಗೆ ಶನಿ ದಶೆಯು ಆಧ್ಯಾತ್ಮಿಕ ಉನ್ನತಿ, ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ, ಮತ್ತು ಸಮಾಜದಲ್ಲಿ ಉನ್ನತ ಪದವಿಯನ್ನು ತಂದುಕೊಡುತ್ತದೆ.

ಬಲಿಷ್ಠ ಶನಿ :

ಯಾರ ಜಾತಕದಲ್ಲಿ ಶನಿಯು ತುಲಾ ರಾಶಿಯಲ್ಲಿ ಅಥವಾ ಮಕರ ಅಥವಾ ಕುಂಭದಲ್ಲಿದ್ದು, ಪ್ರಸ್ತುತ ಗೋಚಾರದಲ್ಲಿ ಈ ಮೀನ ರಾಶಿಯ ಸ್ಥಿತಿಯಿದ್ದಾಗ ಶನಿ ದಶೆ ಆರಂಭವಾದರೆ ಅವರಿಗೆ ಸಕಲ ಸುಖ-ಭೋಗಗಳು ದೊರೆಯುತ್ತವೆ.

ಶನಿಯ ದಶೆ ಅಶುಭ:

ಮೇಷ ಮತ್ತು ವೃಶ್ಚಿಕ ಮಂಗಳನ ರಾಶಿ.ಇವರಿಗೆ ಶನಿಯು ನೈಸರ್ಗಿಕ ಶತ್ರು. ಜಾತಕದಲ್ಲಿ ಮಂಗಳ-ಶನಿ ದೋಷವಿದ್ದವರಿಗೆ ಈ ದಶೆಯು ಕಠಿಣ ಪರಿಶ್ರಮ ಪಟ್ಟರೂ ನಿರೀಕ್ಷಿತ ಫಲ ನೀಡದೆ ನಿರಾಸೆ ಮೂಡಿಸಬಹುದು.

​ಸಿಂಹ ಮತ್ತು ಕರ್ಕಾಟಕ :

ಶನಿಯು ಇಲ್ಲಿ ರವಿಯ ಹೋರೆಯಲ್ಲಿಯೂ ಚಂದ್ರನ ದ್ರೇಕ್ಕಾಣದಲ್ಲಿಯೂ ಇದ್ದಾನೆ. ರವಿ ಮತ್ತು ಚಂದ್ರರು ಶನಿಗೆ ವೈರಿಗಳು. ಆದ್ದರಿಂದ ಸಿಂಹ ಮತ್ತು ಕರ್ಕಾಟಕ ರಾಶಿಯವರಿಗೆ ಶನಿ ದಶೆಯು ತಾಯಿಯ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಶಾಂತಿ, ಅಪವಾದ, ಮತ್ತು ಉದ್ಯೋಗದಲ್ಲಿ ಸ್ಥಾನಪಲ್ಲಟದಂತಹ ಕಷ್ಟಗಳನ್ನು ನೀಡಬಹುದು.

​ಸಾಡೇ ಸಾಥ್ :

ಸದ್ಯ ಮೀನ ರಾಶಿಯಲ್ಲಿ ಶನಿ ಇರುವುದರಿಂದ ಕುಂಭ, ಮೀನ ಮತ್ತು ಮೇಷ ರಾಶಿಯವರಿಗೆ ಏಳೂವರೆ ವರ್ಷದ ಶನಿಯ ಪ್ರಭಾವವಿರುತ್ತದೆ. ಈ ರಾಶಿಯವರ ಜಾತಕದಲ್ಲಿ ಶನಿ ದಶೆಯೂ ಒಟ್ಟಿಗೆ ಬಂದರೆ ಕೌಟುಂಬಿಕ ಮತ್ತು ಆರ್ಥಿಕ ಒತ್ತಡಗಳು ಹೆಚ್ಚಾಗುತ್ತವೆ. ​ ಗ್ರಹವು ರವಿ ಮತ್ತು ಚಂದ್ರನ ವರ್ಗಗಳಲ್ಲಿ ಅಶುಭ ಸ್ಥಾನದಲ್ಲಿದ್ದರೂ, ಗುರು ಮತ್ತು ಶುಕ್ರನ ವರ್ಗಗಳಲ್ಲಿ ಶುಭ ಸ್ಥಾನವನ್ನು ಪಡೆದಿರುವುದರಿಂದ, ಶನಿಯು ಸಂಪೂರ್ಣವಾಗಿ ಕೆಟ್ಟ ಫಲವನ್ನು ನೀಡುವುದಿಲ್ಲ. ಆರಂಭದಲ್ಲಿ ಕಷ್ಟಗಳನ್ನು ನೀಡಿದರೂ, ಅಂತಿಮವಾಗಿ ಜ್ಞಾನ, ತಾಳ್ಮೆ ಮತ್ತು ಅನುಭವದ ಮೂಲಕ ಯಶಸ್ಸನ್ನು ಕರುಣಿಸುತ್ತಾನೆ.

– ಲೋಹಿತ ಹೆಬ್ಬಾರ್

Follow Us