Covaxin Production in Kolar: ಕೋಲಾರದಲ್ಲಿ ಕೊವ್ಯಾಕ್ಸಿನ್ ಘಟಕ! ಹೈದರಾಬಾದ್ ಘಟಕಕ್ಕಿಂತ 5 ಪಟ್ಟು ಹೆಚ್ಚು ಲಸಿಕೆ ತಯಾರಿ
ಸದ್ಯ ತೆಲಂಗಾಣದ ಹೈದರಾಬಾದ್ ಬಳಿ ಮಾತ್ರ ಉತ್ಪಾದನಾ ಘಟಕ ಹೊಂದಿರುವ ಸಂಸ್ಥೆ ಪ್ರತಿ ತಿಂಗಳು 40 ಲಕ್ಷ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೋಲಾರದಲ್ಲಿ ಆರಂಭವಾಗಲಿರುವ ಘಟಕ ಅದಕ್ಕಿಂತ ಐದು ಪಟ್ಟು ಹೆಚ್ಚಿನ ಲಸಿಕೆ ಉತ್ಪಾದಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.
ಬೆಂಗಳೂರು: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ಈಗಾಗಲೇ ಹೆಚ್ಚಿದ್ದು ಬಹುತೇಕ ರಾಜ್ಯಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಜೊತೆಗೆ, ಕೊರೊನಾ ಲಸಿಕೆ ವಿತರಣೆ ವೇಗವನ್ನೂ ಹೆಚ್ಚಿಸಲಾಗುತ್ತಿದ್ದು ಲಸಿಕೆ ನೀಡುವ ಮೂಲಕ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲೇ ಕರ್ನಾಟಕದ ಪಾಲಿಗೆ ಶುಭಸುದ್ದಿಯೊಂದು ಸಿಕ್ಕಿದ್ದು ಭಾರತ್ ಬಯೋಟೆಕ್ ಸಂಸ್ಥೆಯ ಸ್ವದೇಶಿ ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಅತೀ ಶೀಘ್ರದಲ್ಲಿ ಕರ್ನಾಟಕದಲ್ಲೇ ಆರಂಭವಾಗಲಿದೆ.
ಕರ್ನಾಟಕದ ಕೋಲಾರ ತಾಲ್ಲೂಕಿನ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಘಟಕ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು ಸದ್ಯದಲ್ಲೇ ಆರಂಭಗೊಳ್ಳಲಿದೆ. ಸದ್ಯ ತೆಲಂಗಾಣದ ಹೈದರಾಬಾದ್ ಬಳಿ ಮಾತ್ರ ಉತ್ಪಾದನಾ ಘಟಕ ಹೊಂದಿರುವ ಸಂಸ್ಥೆ ಪ್ರತಿ ತಿಂಗಳು 40 ಲಕ್ಷ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೋಲಾರದಲ್ಲಿ ಆರಂಭವಾಗಲಿರುವ ಘಟಕ ಅದಕ್ಕಿಂತ ಐದು ಪಟ್ಟು ಹೆಚ್ಚಿನ ಲಸಿಕೆ ಉತ್ಪಾದಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.
ಕೊವ್ಯಾಕ್ಸಿನ್ ಲಸಿಕೆಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪೂರೈಕೆಯನ್ನು ಹೆಚ್ಚು ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯ ಸಿಇಓ ಕೃಷ್ಣ ಎಲ್ಲಾ ಹಾಗೂ ಜಂಟಿ ಎಂ.ಡಿ ಸುಚಿತ್ರಾ ಇಬ್ಬರೂ ಕರ್ನಾಟಕದಲ್ಲೇ ವ್ಯಾಸಂಗ ಮಾಡಿದವರಾಗಿದ್ದು, ಸಂಸ್ಥೆಯ ಉತ್ಪಾದನಾ ಘಟಕ ಕರ್ನಾಟಕದಲ್ಲಿ ಆರಂಭವಾಗುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಭಾರತದ ಲಸಿಕೆ ಕೊವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತ! ಸರ್ಟಿಫಿಕೇಟ್ ಕೊಟ್ಟ ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್
Published On - 2:50 pm, Mon, 5 April 21