ಕ್ಯಾನ್ಸರ್ ಪೀಡಿತೆ ಪತ್ನಿ ಚಿಕಿತ್ಸೆಗಾಗಿ ಸಾಲ: ಫೈನಾನ್ಸ್ ಕಿರುಕುಳಕ್ಕೆ ವಿಷ ಕುಡಿದ ರೈತ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರಕುಳ ತಾರಕಕ್ಕೇರಿದೆ. ಹೀಗಾಗಿ ಫೈನಾನ್ಸ್ ಕಾಟಕ್ಕೆ ಬ್ರೇಕ್ ಹಾಕಲು ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಮುಂದಾಗಿದೆ. ಸುಗ್ರೀವಾಜ್ಞೆ ವಾರ್ನಿಂಗ್ ಬಳಿಕವೂ ರಾಜ್ಯದಲ್ಲಿ ಕಿರುಕುಳ ಮಾತ್ರ ನಿಂತಿಲ್ಲ. ಇವತ್ತು (ಫೆಬ್ರವರಿ 03) ಒಂದೇ ದಿನ ಸಹ ಐದಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಬೆಳಗಾವಿಯಲ್ಲಿ ರೈತನೋರ್ವ ತನ್ನ ಪತ್ನಿ ಚಿಕಿತ್ಸೆ ಸಾಲ ಮಾಡಿಕೊಂಡಿದ್ದು, ಅದರ ಕಿರುಕುಳದಿಂದ ವಿಷಸೇವಿಸಿ ಪ್ರಾಣಬಿಟ್ಟಿದ್ದಾನೆ. ಇನ್ನು ಹಾವೇರಿಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ಇಬ್ಬರು ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಳಗಾವಿ, (ಫೆಬ್ರವರಿ 03): ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ವಿಷಸೇವಿಸಿ ಶಿವನಪ್ಪ ಧರ್ಮಟ್ಟಿ(66) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ಯಾನ್ಸರ್ ಪೀಡಿತ ಪತ್ನಿ ಚಿಕಿತ್ಸೆಗಾಗಿ ವಿವಿಧ ಫೈನಾನ್ಸ್ ಕಂಪನಿಗಳಿಂದ 10 ಲಕ್ಷ ರೂಪಾಯಿ ಸಾಲ ಮಾಡಿದ್ದ. ಆದ್ರೆ, ಆ ಸಾಲವನ್ನು ಮರು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಲಾರಂಭಿಸಿವೆ. ಇದರಿಂದ ಬೇಸತ್ತು ಶಿವನಪ್ಪ ಇಂದು (ಫೆಬ್ರವರಿ 03) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ್ದಾರೆ. ಈ ಮೂಲಕ ಇಂದು ಒಂದೇ ದಿನ ಕರ್ನಾಟಕದಲ್ಲಿ 8 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಂತಾಗಿವೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಪತ್ನಿ ಚಿಕಿತ್ಸೆಗಾಗಿ ಶಿವನಪ್ಪ ವಿವಿಧ ಫೈನಾನ್ಸ್ ಕಂಪನಿಗಳಿಂದ ಸುಮಾರು 10 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದ. ನಂತರ ಸಾಲ ಮರು ಪಾವತಿಸುವಂತೆ ಫೈನಾನ್ಸ್ ಸಿಬ್ಬಂದಿ, ರೈತ ಶಿವನಪ್ಪ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಶಿವನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿಂದು ಒಂದೇ ದಿನ 7 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ: ಯಾವ್ಯಾವ ಜಿಲ್ಲೆಯಲ್ಲಿ..?
ಸಾಲಗಾರರ ಕಾಟಕ್ಕೆ ಮಕ್ಕಳಿಗೆ ವಿಷ ನೀಡಿ ತಂದೆ ಆತ್ಮಹತ್ಯೆಗೆ ಯತ್ನ
ಹಾವೇರಿ: ಸಾಲಗಾರ ಕಾಟಕ್ಕೆ ಬೇಸತ್ತು ತನ್ನಿಬ್ಬರು ಮಕ್ಕಳಿಗೆ ವಿಷ ನೀಡಿ ಬಳಿಕ ತಂದೆಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ತಾಲ್ಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದಿದೆ. ನಾಗೇಶ ಪವಾಡೆಪ್ಪರ (47) ಎನ್ನುವರು ತನ್ನ ಮಗ ಆಕಾಶ (10) ಹಾಗೂ ಮಗಳು ವೈಷ್ಣವಿ (8) ಗೆ ವಿಷ ಉಣಿಸಿ ಬಳಿಕ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂಘದಲ್ಲಿ ಮೂರು ಲಕ್ಷ ಸಾಲ ಪಡೆದುಕೊಂಡಿದ್ದು, ಇದನ್ನು ತೀರಿಸಲು ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ.
ಹಾವೇರಿಯಲ್ಲಿ ಮತ್ತೋರ್ವ ಆತ್ಮಹತ್ಯೆಗೆ ಯತ್ನ
ಹಾವೇರಿ: ಇದೇ ಹಾವೇರಿ ಜಿಲ್ಲೆಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ಮತ್ತೋರ್ವ ರೈತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ದಾದಾಪೀರ್ ತಿಳುವಳ್ಳಿ 32 ವರ್ಷದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ದಾದಾಪೀರ್ ಅಡಿಕೆ ವ್ಯಾಪಾರ ಮಾಡುತ್ತಿದ್ದು, 30 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದ. ಅದು ಹೇಗೆ ಅಂದರೆ 30 ಲಕ್ಷ ರುಪಾಯಿ ಅಡಿಕೆಯನ್ನ ಬೇರೆಯವರಿಗೆ ಕೊಡಿಸಿದ್ದ. ಆದ್ರೆ ಆ ವ್ಯಕ್ತಿ ಅಡಿಕೆ ಖರೀದಿಸಿ ಹಣ ಪಾವತಿಸಿರಲಿಲ್ಲ. ಹೀಗಾಗಿ ಅಡಿಕೆ ಮಾಲೀಕರು ಆ ಹಣವನ್ನು ಸಾಲವನ್ನಾಗಿಸಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಈಗ ಸಾಲಕ್ಕೆ ಹೆಚ್ಚಿನ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ,
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.