ಸಿದ್ದರಾಮಯ್ಯರನ್ನ ಒಂದು ನಟೋರಿಯಸ್ ಗ್ಯಾಂಗ್ ಖೆಡ್ಡಾಗೆ ಕೆಡವಿದೆ: ಹೊಸ ಬಾಂಬ್ ಸಿಡಿಸಿದ ಸಿಟಿ ರವಿ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಾತ್ಕಾಲಿ ರಿಲೀಫ್ ಸಿಕ್ಕಿದೆ. ಬೀಸುವ ದೊಣ್ಣೆಯಿಂದ ಸದ್ಯ ತಪ್ಪಿಸಿಕೊಂಡಿದ್ದಾರೆ. ಆಗಸ್ಟ್ 29ಕ್ಕೆ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ, ಸಿದ್ದರಾಮಯ್ಯರನ್ನು ಒಂದು ನಟೋರಿಯಸ್ ಗ್ಯಾಂಗ್ ಬಳಸಿಕೊಂಡಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಚಿಕ್ಕಮಗಳೂರು, ಆಗಸ್ಟ್ 21: ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೇಲೆ ಮಾತ್ರ ಆರೋಪ ಮಾಡುತ್ತಿಲ್ಲ. ಒಂದು ನಟೋರಿಯಸ್ ಗ್ಯಾಂಗ್ ಸಿಎಂರನ್ನು ಬಳಸಿಕೊಂಡಿದೆ ಎಂದು ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ (CT Ravi) ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಹಗರಣಗಳಿಗೆ ರಕ್ಷಣೆ ಇರಲಿ ಎಂದು ಸಿದ್ದರಾಮಯ್ಯರನ್ನು ನಟೋರಿಯಸ್ ಗ್ಯಾಂಗ್ ಖೆಡ್ಡಾಗೆ ಕೆಡವಿಕೊಂಡಿದೆ ಎಂದು ಹೇಳಿದ್ದಾರೆ.
ಎಷ್ಟು ಡಿನೋಟಿಫೈ ಮಾಡಿದ್ದಾರೆ, ಯಾವ ಕಾರಣಗಳಿಗೆ ಮಾಡಿದ್ದಾರೆ. ಯಾರ್ಯಾರಿಗೆ ಬದಲಿ ನಿವೇಶನ ಕೊಟ್ಟಿದ್ದಾರೆ ಎಲ್ಲವೂ ಹೊರಬರುತ್ತೆ. ಸೆಟ್ಲ್ಮೆಂಟ್ ಡೀಡ್ ಅನ್ನುವುದೇ ಪ್ರಾಧಿಕಾರದಲ್ಲಿ ಇರುವುದಿಲ್ಲ. ಎಲ್ಲರೂ ದೊಡ್ಡ ದೊಡ್ಡ ಪ್ರಭಾವಿಗಳೇ ಇರೋದು. ನಮ್ಮ ಬಳಿ ಆರೋಪ ಸಾಬೀತು ಮಾಡುವ ಕೆಲ ದಾಖಲೆಗಳಿವೆ ಎಂದಿದ್ದಾರೆ.
ನಮ್ಮ ಹತ್ತಿರವು ಕೆಲ ದಾಖಲೆಗಳಿವೆ
ಮೂಡ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರ ಅಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮೈಸೂರಿಗೆ ಹೋಗಿ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ತನಿಖೆ ಕೊಡುವ ಮೂರು ದಿನದ ಮುಂಚೆ ವಾರಗಟ್ಟಲೆ ಮೈಸೂರಿನಲ್ಲಿ ಕುಳಿತ್ತಿದ್ದರು. ಕೆಲವು ದಾಖಲೆಗಳನ್ನು ಇಲ್ಲದಂತೆ ಮಾಡಿದ್ದಾರೆ. ಹಳೆಯ ಅಧಿಕಾರಿಗಳನ್ನು ಕರೆಸಿ ಸಹಿ ಮಾಡಿಸಿದ್ದಾರೆ ಎಂಬ ದೂರು ನಮಗೆ ಬಂದಿತ್ತು. ನಾವು ತನಿಖೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಮಾಡಿದ್ದೇವೆ. ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮೂರು ನಡೆಸಿದೆ. ನಮ್ಮ ಹತ್ತಿರವು ಕೆಲ ದಾಖಲೆಗಳಿವೆ. ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬಳಿಕ ದಾಖಲೆಗಳನ್ನು ನೀಡುತ್ತೇವೆ. ನ್ಯಾಯಾಲಯದ ತೀರ್ಪನ್ನ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಸಂಕಷ್ಟ: ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಕರಣಗಳ ವ್ಯತ್ಯಾಸವೇನು? ಇಲ್ಲಿದೆ ವಿವರ
ಕೇವಲ ಸಿದ್ದರಾಮಯ್ಯನವರ ಕುಟುಂಬ ಮಾತ್ರ ಈ ಹಗರಣದಲ್ಲಿ ಭಾಗಿಯಾಗಿಲ್ಲ. 1600ಕ್ಕೂ ಹೆಚ್ಚು ನಿವೇಶನಗಳನ್ನ ಇದೆ ರೀತಿ ಪರಬಾರಿ ಮಾಡಲಾಗಿದೆ ಎಂಬ ಆರೋಪ ಇದೆ. ಇದು ಅತಿ ದೊಡ್ಡ ಹಗರಣ. ಮೈಸೂರಿನಂತಹ ಸ್ಥಳದಲ್ಲೇ ಹೀಗಾಗಿರುವಾಗ ಬೆಂಗಳೂರಿನಲ್ಲಿ ಎಷ್ಟಾಗಿರಬಹುದು. ಬೇರೆ ಬೇರೆ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿಧಾನಸಭೆ ವಿಧಾನಪರಿಷತ್ನಲ್ಲಿ ಚರ್ಚೆಗೆ ಒತ್ತಾಯ ಮಾಡಿದ್ದು, ದುರ್ದೈವದ ಸಂಗತಿ ಎಂದರೆ ಆಡಳಿತ ಪಕ್ಷ ಚರ್ಚೆಗೂ ಅವಕಾಶ ಕೊಡಲಿಲ್ಲ. ಸಿದ್ದರಾಮಯ್ಯ ಒಂದು ಪತ್ರ ಇದ್ದರೆ ತೋರಿಸಿ ಅಂತಾರೆ. ಅವರ ಪತ್ನಿಯೇ ಬರೆದ ಪತ್ರ ಇದೆ. ಕೆಸವೆ ಗ್ರಾಮದಲ್ಲಿ 2001ರಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ಡೆವಲಪ್ ಮಾಡಿದೆ. ಎಲ್ಎನ್ಟಿ ಕಂಪನಿ ಅವರಿಗೆ ಗುತ್ತಿಗೆ ಕೊಟ್ಟಿರುವ ದಾಖಲೆಗಳಿವೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ
12 ನಿವೇಶನಗಳನ್ನ 2003ರಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲೆಗಳಿವೆ. ಅಭಿವೃದ್ಧಿ ಆಗಿರುವ ಜಾಗವನ್ನು ಇವರ ಭಾವ ತೆಗೆದುಕೊಂಡಿರುವುದೇ ಅಪರಾಧ. ಮೂಲ ವಾರಸುದಾರರು ಅಲ್ಲದವರ ಬಳಿ ಜಾಗ ತೆಗೆದುಕೊಂಡಿದ್ದಾರೆ. ಜಾಗ ಖರೀದಿ ಇಂದ ಹಿಡಿದು ಕನ್ವರ್ಷನ್ವರೆಗೂ ಅಕ್ರಮವೇ ನಡೆದಿದೆ. ಸಿದ್ದರಾಮಯ್ಯ ಅರ್ಧ ಸತ್ಯ ಹೇಳುತ್ತಿದ್ದಾರೆ. ಪೂರ್ಣ ಸತ್ಯ ಮುಂಚೆ ಸಿದ್ದರಾಮಯ್ಯ ಅವರಿಗೆ ಗೊತ್ತಿತ್ತೋ ಇಲ್ವೋ ಅಥವಾ ಗೊತ್ತಿಲ್ವೋ. ಆದರೆ ಇವಾಗ ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಕೂಡಲೇ ಸಿದ್ದರಾಮಯ್ಯ ಸೇರಿದಂತೆ ಇಡಿ ಕಾಂಗ್ರೆಸ್ಗೆ ದಿಗಿಲು ಬಂತು. ತಪ್ಪೇ ನಡೆದಿಲ್ಲ ಅಂದ್ರೆ ಯಾವ ತನಿಕೆ ಮಾಡಿದ್ರೇನು? ತಪ್ಪು ನಡೆದಿದೆ ಎಂದು ಮನವರಿಕೆ ಯಾದ ಮೇಲೆ ಇಡೀ ಕಾಂಗ್ರೆಸ್ ಭಯಕ್ಕೆ ಬಿದ್ದಿದೆ. ನೀವು ಶುದ್ಧವಾಗಿದ್ದರೆ ಯಾರು ಯಾವ ತನಿಖೆ ಬೇಕಾದರೂ ಮಾಡಿದ್ರು ಏನಾಗುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.