ಚಿತ್ರದುರ್ಗದಲ್ಲೊಂದು ವಿಶಿಷ್ಟ ಸಂಪ್ರದಾಯ: ಅತ್ತಿಗೆ ನಾದಿನಿಯರಿಗಾಗಿಯೇ ನಡೆಯುತ್ತೆ ಡಿಕ್ಕಿ ಹಬ್ಬ
ಚಿತ್ರದುರ್ಗದ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಆಚರಿಸಲಾಗುವ ಡಿಕ್ಕಿ ಹಬ್ಬವು ಅತ್ತಿಗೆ ಮತ್ತು ನಾದಿನಿಯರ ನಡುವಿನ ಬಾಂಧವ್ಯವನ್ನು ಸಂಕೇತಿಸುತ್ತದೆ. ಅಹೋಬಲ ನರಸಿಂಹಸ್ವಾಮಿ ಜಾತ್ರೆ ಪ್ರಯುಕ್ತ ಈ ಹಬ್ಬದಲ್ಲಿ ತಲೆಗೆ ತಲೆ ಡಿಕ್ಕಿ ಹೊಡೆಯುವುದು ವಿಶೇಷ. ಈ ಆಚರಣೆಯು ಪುರಾತನ ಕಾಲದಿಂದಲೂ ಮಾಡಲಾಗುತ್ತಿದ್ದು, ಹೆಣ್ಣುಮಕ್ಕಳ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಬಲಪಡಿಸುತ್ತದೆ ಎಂಬ ಭಾವನೆ ಜನರಲ್ಲಿದೆ.
ಚಿತ್ರದುರ್ಗ, ಡಿಸೆಂಬರ್ 16: ಅತ್ತಿಗೆ ನಾದಿನಿಯರ ನಡುವೆ ಶೀಥಲ ಸಮರ ನಡೆಯುವುದು ಓಪನ್ ಸೀಕ್ರೆಟ್. ಆದರೆ ಕೋಟೆನಾಡಿನಲ್ಲಿ ಅತ್ತಿಗೆ ನಾದಿನಿಯರಿಗಾಗಿಯೇ ವಿಶೇಷ ಹಬ್ಬವೊಂದು ಆಚರಣೆಯಲ್ಲಿದೆ. ಡಿಕ್ಕಿ ಹಬ್ಬದ ಆಚರಣೆ ಮೂಲಕ ತಲೆಗೆ ತಲೆ ಡಿಕ್ಕಿ (Dikki Habba) ಹೊಡೆಯುವ ಅಪರೂಪದ ಸಾಂಪ್ರದಾಯಿಕ ಆಚರಣೆಯೊಂದು ನಡೆಸಲಾಗುತ್ತದೆ. ಡಿಕ್ಕಿ ಹಬ್ಬದ ವಿಶೇಷತೆ ತಿಳಿಯಿರಿ.
ಚಿತ್ರದುರ್ಗದಲ್ಲೊಂದು ವಿಶಿಷ್ಟ ಹಬ್ಬ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಜನ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ಅಹೋಬಲ ನರಸಿಂಹಸ್ವಾಮಿ ದೇವರ ಜಾತ್ರೆ, ಉತ್ಸವದ ಅಂಗವಾಗಿ ಈ ಆಚರಣೆ ನಡೆಯುತ್ತದೆ. ದೇವರ ಉತ್ಸವ ಮೆರವಣಿಗೆ ವೇಳೆ ನೆಲಕ್ಕೆ ಬಾಳೆ ಹಣ್ಣು, ಬೆಲ್ಲ ಹಾಕಿ ಸೇವಿಸುವ ಸಾಂಪ್ರದಾಯಿಕ ಮಣೇವು ಆಚರಿಸಲಾಗುತ್ತದೆ.
ಯುವಕರು ಟಗರುಗಳನ್ನು ತಂದು ದೇಗುಲದ ಆವರಣದಲ್ಲಿ ಡಿಕ್ಕಿ ಹೊಡೆಸಿ ಖುಷಿ ಪಡುತ್ತಾರೆ. ಆ ಬಳಿಕ ಅತ್ತಿಗೆ ನಾದಿನಿಯರು ಸಾಂಪ್ರದಾಯಿಕ ಡಿಕ್ಕಿ ಹಬ್ಬ ಆಚರಿಸುತ್ತಾರೆ. ಈ ಆಚರಣೆ ಅತ್ತಿಗೆ ನಾದಿನಿಯರ ಪ್ರೀತಿಯ ಅಪ್ಪುಗೆಯ ಹಬ್ಬವಾಗಿದ್ದು, ಪುರಾತನ ಕಾಲದಿಂದಲೂ ಆಚಿರಿಸಿಕೊಂಡು ಬರಲಾಗುತ್ತಿದೆ ಅಂತಾರೆ ಅಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅವರು.
ಇದನ್ನೂ ಓದಿ: ಕೊನೆಗೂ ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿದ ಕರ್ನಾಟಕ ಸರ್ಕಾರ
ಇನ್ನು ಈ ಗ್ರಾಮದ ಹೆಣ್ಣುಮಕ್ಕಳು ಅದೆಷ್ಟು ದೂರದ ಊರಿಗೆ ಸೊಸೆಯಾಗಿ ಹೋಗಿದ್ದರೂ ಸಹ ತಪ್ಪದೆ ಈ ಹಬ್ಬಕ್ಕೆ ಬರುತ್ತಾರೆ. ಅತ್ತಿಗೆ, ನಾದಿನಿಯರ ಮಧ್ಯೆ ಏನೇ ವೈಮನಸ್ಸು ಇದ್ದರೂ ಸಹ ಇಂದು ಒಂದಾಗಿ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಗೈರಾದರೆ ಸಣ್ಣ ತಲೆನೋವು ಬಂದರೂ ಈ ಹಬ್ಬಕ್ಕೆ ಗೈರಾಗಿದ್ದಕ್ಕೆ ಬಂತೆಂಬ ಭಾವನೆ ಮೂಡತ್ತದೆ. ಹೀಗಾಗಿ, ಅತ್ತಿಗೆ ಮತ್ತು ನಾದಿನಿಯರು ಈ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ತಾರೆ ಎಂದು ಸ್ಥಳೀಯರಾದ ಚಂದ್ರಮ್ಮ ಹೇಳಿದ್ದಾರೆ.
ಚಿತ್ರದುರ್ಗದ ಸಿಎನ್ ಮಾಳಿಗೆ ಗ್ರಾಮದಲ್ಲಿ 3 ದಿನ ಕಾಲ ನಡೆದ ಅಹೋಬಲ ನರಸಿಂಹಸ್ವಾಮಿ ಉತ್ಸವಕ್ಕೆ ನಿನ್ನೆ ತೆರೆ ಬಿದ್ದಿದೆ. ಈ ಅಪರೂಪದ ಆಚರಣೆಯ ಮೂಲಕ ಬಾಂಧ್ಯವಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂಬುವುದು ಜನರ ನಂಬಿಕೆ ಆಗಿದೆ. ಒಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿಯ ಡಿಕ್ಕಿ ಹಬ್ಬ ಆಚರಿಸಿ ಅತ್ತಿಗೆ-ನಾದಿನಿಯರು ಖುಷಿಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.