ಅರಣು ಕುಮಾರ್ ಪುತ್ತಿಲಗೆ ಮತ್ತೆ ನೋಟಿಸ್: ಪೊಲೀಸರ ವಿರುದ್ಧ ಸಕ್ಷಮ ಪಾಧಿಕಾರಕ್ಕೆ ಶೋಭಾ ಪತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಖಂಡರು ಮತ್ತು ಸಂಘಟನೆಗಳ ವಿರುದ್ಧ ಪೊಲೀಸರು ಗಡಿಪಾರಿನಂತಹ ಕ್ರಮ ಕೈಗೊಂಡಿದ್ದಾರೆ. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪೊಲೀಸರು ಮತ್ತೆ ನೋಟಿಸ್ ನೀಡಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪೊಲೀಸ್ ದೂರು ಪ್ರಾಧಿಕಾರಕ್ಕೆ ದಕ್ಷಿಣ ಕನ್ನಡ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ಹಿಂದೂ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆ ಭೇಟಿ ನೀಡಿದ ಆರೋಪಗಳಿವೆ. ಎಸ್ಪಿ ಡಾ. ಅರುಣ್ ವಿರುದ್ಧವೂ ದೂರು ನೀಡಲಾಗಿದೆ.

ಮಂಗಳೂರು, ಮೇ 03: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಪೊಲೀಸರು ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು (Dakshina Kannada Police) ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಅವರಿಗೆ ಮತ್ತೆ ನೋಟಿಸ್ ನೀಡಿದ್ದಾರೆ. ಈ ಸಂದರ್ಭದಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪತ್ರ ಬರೆದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ.
ಅರುಣ ಕುಮಾರ್ ಪುತ್ತಿಲಗೆ 2ನೇ ನೋಟಿಸ್
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪುತ್ತೂರಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಅರುಣ ಕುಮಾರ್ ಪುತ್ತಿಲ ಅವರು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸಿ ಭಾಷಣ ಮಾಡಿದ್ದಾರೆ ಎಂದು ಪುತ್ತೂರು ನಗರ ಠಾಣೆಯಲ್ಲಿ ಅಶ್ರಫ್ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಠಾಣೆ ಪೊಲೀಸರು ಅರುಣ ಕುಮಾರ್ ಪುತ್ತಿಲ ಅವರಿಗೆ ಎರಡನೇ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಅರುಣ್ ಸೂಚನೆ ನೀಡಿದ್ದಾರೆ. ಸೋಮವಾರವಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅರುಣ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್ ನೀಡಿದ್ದರು.
ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಚಿವೆ ಪತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂ ಪರ ಕಾರ್ಯಕರ್ತರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದು ದೂರು ನೀಡಿದ್ದಾರೆ. “ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದ ಪೊಲೀಸರು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ವ್ಯಾಪಾರಿಗಳು ಮತ್ತು ನಾಗರಿಕರ ಮೇಲೂ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಪೊಲೀಸ್ ಅಧಿಕಾರಿಗಳು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದಾರೆ. ಅವರ ನಿವಾಸಗಳ ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ವಾರಂಟ್‌ಗಳು ಇಲ್ಲದೆಯೂ ಜಿಪಿಎಸ್ ಮುಖಾಂತರ ಫೋಟೋ ಸೆರೆಹಿಡಿಯುತ್ತಿದ್ದಾರೆ. ಪೊಲೀಸರ ಈ ಕ್ರಮಗಳು ಕಾನೂನು ಬಾಹಿರವಾಗಿದೆ. ಇದು ಮೂಲಭೂತ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ತಕ್ಷಣವೇ ತಾವು ಮಧ್ಯಪ್ರವೇಶ ಮಾಡಬೇಕು. ಪೊಲೀಸರ ಕಾನೂನು ಬಾಹಿರ ಕ್ರಮದ ವಿರುದ್ಧ ತನಿಖೆ ನಡೆಸಬೇಕು” ಎಂದು ಪ್ರಾಧಿಕಾರದ ಮುಖ್ಯಸ್ಥ ನ್ಯಾ. ಸುಧೀಂದ್ರ ರಾವ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್ ಭೇಟಿ: ವಿಹೆಚ್ಪಿ ಪ್ರತಿಭಟನೆಯ ಎಚ್ಚರಿಕೆ
ದಕ್ಷಿಣ ಕನ್ನಡ ಎಸ್ಪಿ ವಿರುದ್ಧ ದೂರು
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅವರ ವಿರುದ್ಧ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಹಿಂದೂ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ದೂರು ನೀಡಿದ್ದಾರೆ. ಎಸ್ಪಿಯವರು ನಿಯಮ ಮೀರಿ ಅಕ್ರಮವಾಗಿ ವರ್ತಿಸಿದ್ದಾರೆ. ಯಾವುದೇ ಕೇಸ್ಗಳಿಲ್ಲದವರ ಮನೆಗೆ ಸಿಬ್ಬಂದಿ ಕಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಮನೆಗೆ ಸಿಬ್ಬಂದಿ ಕಳಿಸಿ ವಿಚಾರಣೆ ನಡೆಸಿದ್ದಾರೆ. ಸೂಕ್ತ ಆದೇಶಗಳಿಲ್ಲದೆ ತಡರಾತ್ರಿ ಹಿಂದೂ ಕಾರ್ಯಕರ್ತರ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ಖಾಸಗಿ ಬದುಕಿನ ಹಕ್ಕು ಎಸ್ಪಿ ಕಸಿದುಕೊಂಡಿದ್ದಾರೆ. ಹೀಗಾಗಿ ಎಸ್ಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Tue, 3 June 25



