ಕೊರೊನಾ ಸೋಂಕಿತನ ಶವ ನೀಡಲು 9 ಲಕ್ಷ ನೀಡುವಂತೆ ಒತ್ತಾಯ; ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆ ಡೋಂಟ್‌ಕೇರ್
ಶವ ನೀಡದೇ ಸತಾಯಿಸುವ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಕೊವಿಡ್ ಮೃತರ ಶವ ನೀಡುವಾಗ ಬಾಕಿ ಬಿಲ್ ಕಟ್ಟಲು ಒತ್ತಡ ಹೇರಬಾರದು ಎಂದು ಸರ್ಕಾರ ಹೇಳಿದೆ.
ಆನೇಕಲ್: ಕೊವಿಡ್ ಶವ ನೀಡಲು ಇಲ್ಲಿನ ಖಾಸಗಿ ಆಸ್ಪತ್ರೆಯೊಂದು 9 ಲಕ್ಷ ರೂಪಾಯಿ ನೀಡುವಂತೆ ಒತ್ತಾಯ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಅತ್ತಿಬೆಲೆ ಬಳಿಯ ಶ್ರೀ ಸಾಯಿ ಆಸ್ಪತ್ರೆ ಆಡಳಿತ ಮಂಡಳಿಯಿಂದ 9 ಲಕ್ಷ ಪಾವತಿಸುವಂತೆ ಒತ್ತಾಯಿಸಲಾಗಿದೆ. ಆಸ್ಪತ್ರೆ ಚಿಕಿತ್ಸೆಗೆ 15 ಲಕ್ಷ ಬಿಲ್ ಮಾಡಿತ್ತು. ಅದರಲ್ಲಿ ಈಗಾಗಲೇ 6 ಲಕ್ಷ ವಸೂಲಿ ಮಾಡಿಕೊಂಡಿದ್ದು, ಉಳಿದ 9 ಲಕ್ಷ ಪಾವತಿಸಿ ಶವ ಪಡೆಯುವಂತೆ ಈಗ ಒತ್ತಾಯ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊರೊನಾಕ್ಕೆ ತುತ್ತಾಗಿದ್ದ ಅರೇಹಳ್ಳಿ ಮೂಲದ ಗಣೇಶ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಶವ ನೀಡಲು ಆಸ್ಪತ್ರೆ ನಿರಾಕರಿಸಿದೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶವ ನೀಡದೇ ಸತಾಯಿಸುವ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಕೊವಿಡ್ ಮೃತರ ಶವ ನೀಡುವಾಗ ಬಾಕಿ ಬಿಲ್ ಕಟ್ಟಲು ಒತ್ತಡ ಹೇರಬಾರದು ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಹೀಗಾದರೆ, ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನೂ ನೀಡಿದೆ. ಅಷ್ಟಾಗಿಯೂ ಸರ್ಕಾರದ ಆದೇಶಕ್ಕೆ ಶ್ರೀ ಸಾಯಿ ಆಸ್ಪತ್ರೆ ಡೋಂಟ್‌ಕೇರ್ ಎಂದಿದೆ.
ನೆಲಮಂಗಲ: ಬಿಲ್ ಪಾವತಿಸದಿದ್ದರೆ ಶವ ನೀಡುವುದಿಲ್ಲ ಬಿಲ್ ಪಾವತಿಸದಿದ್ದರೆ ಕೊವಿಡ್ ಬಾಡಿ ನೀಡುವುದಿಲ್ಲ ಎಂದ ಮತ್ತೊಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಸ್ವಾಸ್ಥ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಸೋಂಕಿತರ ಸಾವು ಸಂಭವಿಸಿದೆ. 62 ಹಾಗೂ 43 ವರ್ಷದ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈಗ ಬಿಲ್ ಪಾವತಿಸದಿದ್ದರೆ ಬಾಡಿ ನೀಡುವುದಿಲ್ಲವೆಂದು ಪಟ್ಟು ಹಿಡಿದಿರುವ ಸ್ವಾಸ್ಥ್ಯ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ ಹೊರಹಾಕಿದ್ದಾರೆ.
ಬಿಲ್ ಪಾವತಿ ವಿಚಾರದಲ್ಲಿ ಆಸ್ಪತ್ರೆ, ಕುಟುಂಬಸ್ಥರ ಗಲಾಟೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿದ್ದಾರೆ. ಸರ್ಕಾರದ ಅಧಿಸೂಚನೆ ಬಗ್ಗೆ ಆಸ್ಪತ್ರೆಯವರಿಗೆ ಮನವರಿಕೆ ಮಾಡಿದ್ದಾರೆ. ಕೊರೊನಾ ಸೋಂಕಿತ ಮೃತಪಟ್ರೆ ಬಿಲ್ ಪಾವತಿಸುವಂತಿಲ್ಲ ಎಂದು ತಿಳಿಸಿ, ಸಂಬಂಧಿಕರಿಗೆ ಶವ ನೀಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.
ಇದನ್ನೂ ಓದಿ: Karnataka Lockdown: ಆರ್ಥಿಕ ಚಟುವಟಿಕೆ ಚುರುಕಿಗೆ ರಾಜ್ಯ ಸರ್ಕಾರ ಪ್ಲ್ಯಾನ್; ಲಾಕ್ಡೌನ್ ನಿಯಮಾವಳಿ ಕೊಂಚ ಸಡಿಲಿಕೆ
ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಹೆಚ್ಚಿನ ಗಮನ; ಲಾಕ್ಡೌನ್ ಮುಂದುವರಿಕೆ ಬಗ್ಗೆ ಜೂನ್ 5ರಂದು ನಿರ್ಧಾರ