ಆಕಳು ಕರುವಿಗೆ ಹಾಲುಣಿಸಿ ಮುದ್ದು ಮಾಡಿದ ಎಮ್ಮೆ; ಬಾಗಲಕೋಟೆಯಲ್ಲೊಂದು ಅಪರೂಪದ ಘಟನೆ
ಬಾಗಲಕೋಟೆಯ ತುಳಸಿಗೇರಿ ಗ್ರಾಮದ ರೈತ ಶ್ರೀಶೈಲ ಹೊಸಕೋಟಿ ಎಂಬುವರಿಗೆ ಸೇರಿದ ಎಮ್ಮೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಎಮ್ಮೆ ಅದೇ ಕೊಟ್ಟಿಗೆಯಲ್ಲಿರುವ ಆಕಳು ಕರುವಿಗೆ ತನ್ನ ಸ್ವಂತ ಕರುವಿನಂತೆ ಪ್ರೀತಿ ತೋರಿಸುತ್ತಿದ್ದು, ಹಾಲುಣಿಸಿ ಆರೈಕೆ ಮಾಡುತ್ತಿದೆ.

ಬಾಗಲಕೋಟೆ: ಪ್ರಾಣಿ ಪ್ರಪಂಚ ಅತ್ಯಂತ ಕುತೂಹಲಕಾರಿಯಾದದ್ದು. ಅವುಗಳಿಗೆ ನಮ್ಮಂತೆ ಮಾತು ಬಾರದಿದ್ದರೂ ಎಷ್ಟೋ ಸಂದರ್ಭಗಳಲ್ಲಿ ತಮ್ಮ ನಡವಳಿಕೆಯ ಮೂಲಕವೇ ಹೃದಯ ಗೆಲ್ಲುತ್ತವೆ. ಈ ತೆರನಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಚಿತ್ರ ವಿಚಾರಗಳು ನಮ್ಮ ಕಣ್ಣು, ಕಿವಿಗೆ ಬೀಳುತ್ತಲೇ ಇರುತ್ತವೆ. ಬೆಕ್ಕಿನ ಮರಿಯನ್ನು ತನ್ನ ಮರಿಯಂತೆಯೇ ಸಾಕುವ ನಾಯಿ, ನಾಯಿ ಮರಿಗಳಿಗೆ ಹಾಲುಣಿಸಿ ಹಸಿವು ನೀಗಿಸುವ ಆಕಳು, ಒಮ್ಮೊಮ್ಮೆ ತಮ್ಮ ಬೇಟೆಯನ್ನೂ ಕರುಣಾಮಯಿಗಳಂತೆ ನೋಡುವ ಹುಲಿ, ಚಿರತೆಗಳು.. ಹೀಗೆ ಕೆದಕಿದಷ್ಟೂ ವಿಸ್ಮಯ. ಇದೀಗ ಇಂಥದ್ದೇ ಒಂದು ಘಟನೆ ನಮ್ಮ ಕರ್ನಾಟಕದ ಬಾಗಲಕೋಟೆಯಲ್ಲಿಯೇ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಬಾಗಲಕೋಟೆಯ ತುಳಸಿಗೇರಿ ಗ್ರಾಮದ ರೈತ ಶ್ರೀಶೈಲ ಹೊಸಕೋಟಿ ಎಂಬುವರಿಗೆ ಸೇರಿದ ಎಮ್ಮೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಎಮ್ಮೆ ಅದೇ ಕೊಟ್ಟಿಗೆಯಲ್ಲಿರುವ ಆಕಳು ಕರುವಿಗೆ ತನ್ನ ಸ್ವಂತ ಕರುವಿನಂತೆ ಪ್ರೀತಿ ತೋರಿಸುತ್ತಿದ್ದು, ಹಾಲುಣಿಸಿ ಆರೈಕೆ ಮಾಡುತ್ತಿದೆ. ಮೊದಮೊದಲು ಎಲ್ಲೋ ಗೊತ್ತಿಲ್ಲದೇ ಹಾಲುಣಿಸಿರಬಹುದೆಂದು ಕೆಲವರು ಭಾವಿಸಿದ್ದರಾದರೂ ನಂತರ ಆ ಘಟನೆಯನ್ನು ಕಣ್ಣಾರೆ ಕಂಡಾಗ ಹುಬ್ಬೇರಿಸಿದ್ದಾರೆ.

ಎಮ್ಮೆಯ ಹಾಲು ಕುಡಿಯುತ್ತಿರುವ ಮುದ್ದಾದ ಆಕಳು ಕರು
ಸಾಧಾರಣವಾಗಿ ಎಮ್ಮೆ, ಆಕಳು ಯಾವುದೇ ಆದರೂ ತನ್ನ ಕರುವನ್ನು ಹೊರತುಪಡಿಸಿ ಬೇರೊಂದಕ್ಕೆ ಹಾಲು ನೀಡುವುದು ಅಪರೂಪ. ಅದರಲ್ಲೂ ಸಂಪೂರ್ಣ ಬೇರೆ ಬೇರೆ ಜಾತಿಗೆ ಸೇರಿದ ಆಕಳು ಹಾಗೂ ಎಮ್ಮೆ ನಡುವೆ ಇಂಥದ್ದೊಂದು ಬಾಂಧವ್ಯ ಹುಟ್ಟಿಕೊಳ್ಳುವುದು ತೀರಾ ವಿರಳ. ಆದ ಕಾರಣ ಶ್ರೀಶೈಲ ಅವರ ಮನೆಯ ಎಮ್ಮೆ ಆಕಳು ಕರುವಿಗೆ ಹಾಲುಣಿಸುತ್ತಿರುವ ವಿಡಿಯೋವನ್ನು ತೆಗೆದಿರುವ ಗ್ರಾಮಸ್ಥರು ಅವರೆಡರ ಮಧ್ಯೆ ಇರುವ ಪ್ರೀತಿ ಕಂಡು ಖುಷಿಪಟ್ಟಿದ್ದಾರೆ. ಎಮ್ಮೆಯ ಮಮತೆಯನ್ನು ಕೊಂಡಾಡಿದ್ದಾರೆ.

ತನ್ನ ಸ್ವಂತ ಕರುವಿನಂತೆ ಆಕಳು ಕರುವನ್ನು ಆರೈಕೆ ಮಾಡುತ್ತಿರುವ ಎಮ್ಮೆ
ಇದನ್ನೂ ಓದಿ: Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!
ಹಾಲು ಕದಿಯುವ ಬೆಕ್ಕಿಗೆ ಕಳ್ಳರ ಭಯ: ಗದಗ ಜಿಲ್ಲೆಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳತನದ ದೃಶ್ಯ