ಬಾಗಲಕೋಟೆ ಭದ್ರಗಿರಿ ಬೆಟ್ಟದಲ್ಲಿ ಆದಿಮಾನವರು ನೆಲೆಸಿದ್ರಾ? ಪುನರ್ವಸತಿ ಕಾಮಗಾರಿ ವೇಳೆ ಸಿಕ್ಕ ಕುರುಹುಗಳು ಏನು?
ಭದ್ರಗಿರಿ ಬೆಟ್ಟದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಅಲ್ಲಿನ ಗಿಡಗಂಟಿ ತೆರವುಗೊಳಿಸಿ ಭೂಮಿಯನ್ನು ಸಮತಟ್ಟಾಗಿ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಬೆಟ್ಟದ ಕೆಳಗಿನ ಭಾಗದಲ್ಲಿ ಜೆಸಿಬಿಯಿಂದ ನೆಲ ಅಗೆಯುವಾಗ ಮಡಿಕೆಗಳು, ಮೂಳೆಗಳ ಪುಡಿಗಳು ಕಂಡು ಬಂದಿದ್ದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.
ಬಾಗಲಕೋಟೆ: ನಮ್ಮ ನೆಲ ಭೂಮಿ ಅಗೆದಂತೆಲ್ಲಾ ಒಂದಿಲ್ಲ ಒಂದು ಐತಿಹಾಸಿಕ ಕುರುಹುಗಳು, ಒಂದಲ್ಲ ಒಂದು ಜಾಗದಲ್ಲಿ ಏನಾದರೂ ಪುರಾತನ ಕಾಲದ ಜೀವನಗಾಥೆಗೆ ಸಂಬಂಧಿಸಿದ ಸಾಕ್ಷಿಗಳು ಸಿಗುತ್ತವೆ. ರಾಜಮಹಾರಾಜರ ಕಾಲದ ಕಟ್ಟಡಗಳು, ದೇಗುಲಗಳು, ವಿಗ್ರಹಗಳು, ಆಯುಧಗಳು ಶಿಲಾಶಾಸನಗಳು ಆಗಾಗ ಕಂಡುಬರುತ್ತವೆ. ಅದರಲ್ಲೂ ಐತಿಹಾಸಿಕ ಸ್ಥಳಗಳನ್ನು ಅಗೆದಲ್ಲೆಲ್ಲಾ ಒಂದಿಲ್ಲ ಒಂದು ವಸ್ತುಗಳು ಸಿಗುತ್ತವೆ. ಆದರೆ ಸದ್ಯ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಕುರುಹುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಆದಿಮಾನವ ಕಾಲದಲ್ಲಿನ ವಸ್ತುಗಳು ಕಂಡುಬಂದಿವೆ. ಬೆಟ್ಟದ ಕೆಳಗಿನ ಪ್ರದೇಶದಲ್ಲಿ ಮೂಳೆಗಳ ಪುಡಿ, ಒಡೆದ ಮಣ್ಣಿನ ಕುಡಿಕೆಗಳು ಪತ್ತೆಯಾಗಿದ್ದು ಇವುಗಳು ಆದಿಮಾನವರ ಕಾಲದ ಕುರುಹುಗಳು ಎಂದು ಅಂದಾಜಿಸಲಾಗಿದೆ. ಆದರೆ ಸಂಶೋಧನೆ ಪ್ರಕಾರ ಆದಿಮಾನವರ ಕಾಲದ್ದಾ ಅಥವಾ ಮೂಳೆಗಳು ಮಡಿಕೆಗಳು ಯಾವ ಕಾಲಕ್ಕೆ ಸೇರಿದ್ದು ಎಂಬ ಬಗ್ಗೆ ಖಚಿತವಾಗಿ ತಿಳಿದು ಬರಬೇಕಿದೆ.
ಪ್ರಾಗೈತಿಹಾಸಿಕ ಕಾಲದ ಕುರುಹುಗಳು ಸಿಕ್ಕಿದ್ದು ಯಾವಾಗ? ಬಾಗಲಕೋಟೆ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ತೀರದ ಜನರು ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕೋದು ಈಗ ಸಾಮಾನ್ಯವಾಗಿದೆ. ಅಂತವರನ್ನು ಸ್ಥಳಾಂತರ ಮಾಡಿ ಪುನರ್ವಸತಿ ಕೇಂದ್ರಗಳನ್ನು ಸರಕಾರ ನಿರ್ಮಿಸುತ್ತಿದೆ. ಇಂತಹ ಸ್ಥಳಾಂತರಗೊಂಡ ಗ್ರಾಮಗಳಲ್ಲಿ ತಮದಡ್ಡಿ ಗ್ರಾಮ ಕೂಡ ಒಂದು. ರಬಕವಿಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮಸ್ಥರಿಗಾಗಿ ಸರಕಾರ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಅಲ್ಲಿನ ಗಿಡಗಂಟಿ ತೆರವುಗೊಳಿಸಿ ಭೂಮಿಯನ್ನು ಸಮತಟ್ಟಾಗಿ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಬೆಟ್ಟದ ಕೆಳಗಿನ ಭಾಗದಲ್ಲಿ ಜೆಸಿಬಿಯಿಂದ ನೆಲ ಅಗೆಯುವಾಗ ಮಡಿಕೆಗಳು, ಮೂಳೆಗಳ ಪುಡಿಗಳು ಕಂಡು ಬಂದಿದ್ದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ. ಇನ್ನು ಇದೇ ಜಾಗಕ್ಕಾಗಿ ಅಗಷ್ಟ ನಾಲ್ಕರಂದು ಹಳಿಂಗಳಿ ಗ್ರಾಮಸ್ಥರು ಮಹಿಳೆಯರು ಸೇರಿದಂತೆ ಬೃಹತ್ ಪ್ರತಿಭಟನೆ ಮಾಡಿದ್ದರು. ನಮ್ಮೂರ ಜಾಗವವನ್ನು ತಮದಡ್ಡಿ ಸಂತ್ರಸ್ತರಿಗೆ ನೀಡಬಾರದೆಂದು ಹೋರಾಟ ಮಾಡಿದ್ದರು. ಈ ವೇಳೆ ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದರು. ಈಗ ಅದೇ ಜಾಗದಲ್ಲಿ ಆದಿಮಾನವರ ಕುರುಹುಗಳು ಸಿಕ್ಕಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ಜಾಗದಲ್ಲಿ ತಪಸ್ಸು ಮಾಡಿದ್ದಾರಂತೆ 772 ಮುನಿಗಳು ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟ ಒಂದು ಜೈನಧರ್ಮದ ಪವಿತ್ರ ಕ್ಷೇತ್ರ. ಇಲ್ಲಿ ಜೈನಮಂದಿರ, ಜೈನಮುನಿಗಳಿದ್ದು ಜೈನರ ಧಾರ್ಮಿಕ ಕ್ಷೇತ್ರವಾಗಿದೆ. ಇದೆ ಬೆಟ್ಟದಲ್ಲಿ ಒಂದು ಕಡೆ ಈಗ ತಮದಡ್ಡಿ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡುತ್ತಿದ್ದು, ಹಳಿಂಗಳಿ ಹಾಗೂ ತಮದಡ್ಡಿ ಗ್ರಾಮಸ್ಥರ ಮಧ್ಯೆ ಜಾಗದ ವಿವಾದ ಶುರುವಾಗಿದೆ. ಇನ್ನು ಇದೇ ಜಾಗದಲ್ಲಿ ಅಗಷ್ಟ ಹದಿನೈದರಂದು ಬಾಹುಬಲಿ ಮೂರ್ತಿ ಕೂಡ ಸಿಕ್ಕಿದೆಯಂತೆ. ಜೊತೆಗೆ ಇಲ್ಲಿ 772 ಮುನಿಗಳು ತಪಸ್ಸು ಮಾಡಿದ್ದು ಏಳುನೂರಕ್ಕೂ ಅಧಿಕ ಜೈನಗುಂಪಾಗಳಿವೆ ಎನ್ನಲಾಗುತ್ತಿದೆ. ಇಲ್ಲಿ ಸಿಗುತ್ತಿರುವ ಕುರುಹುಗಳು, ಮೂರ್ತಿಗಳು ಇದೇ ಮೊದಲಲ್ಲ ಈ ಹಿಂದೆಯೂ ಸಾಕಷ್ಟು ಜೈನ ವಿಗ್ರಹಳು, ಪುರಾತನ ಕಾಲದ ಕುರುಹುಗಳು ಕಂಡುಬಂದಿದ್ದು, ಈ ಜಾಗವನ್ನು ಇದೀಗ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಕುರುಹುಗಳು, ಸಾಕ್ಷಿಗಳನ್ನು ನೋಡಿದರೆ ಇದೊಂದು ಪ್ರಾಗೈತಿಹಾಸಿಕ ಸ್ಥಳ ಆದ್ದರಿಂದ ಇಲ್ಲಿ ಕಾಮಗಾರಿ ಹೆಸರಲ್ಲಿ ಪ್ರಾಗೈತಿಹಾಸಿಕ ನೆಲೆ, ಧಾರ್ಮಿಕ ಬೀಡನ್ನು ಹಾಳು ಮಾಡಬಾರದು ಎಂದು ಜೈನ ಮುನಿ ಕುಲರತ್ನಭೂಷಣ ಮಹಾರಾಜರು ಹೇಳುತ್ತಾರೆ.
ಒಟ್ಟಿನಲ್ಲಿ ಭದ್ರಗಿರಿ ಬೆಟ್ಟದಲ್ಲಿ ಸಿಕ್ಕ ಈ ವಸ್ತುಗಳು ಜನರಲ್ಲಿ ಬಾರಿ ಕುತೂಹಲ ಅಚ್ಚರಿ ಮೂಡಿಸಿವೆ. ಆದರೆ ಇವು ನಿಜವಾಗಲೂ ಯಾವ ಕಾಲಕ್ಕೆ ಸೇರಿದ್ದವು ಎಂಬ ಬಗ್ಗೆ ತಜ್ಞರಿಂದ ಸಂಶೋಧನೆ ನಡೆದು ಜನರಿಗೆ ಇದರ ಸತ್ಯಾಂಸ ತಿಳಿಸುವ ಕಾರ್ಯ ನಡೆಯಬೇಕಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: 2 ವರ್ಷ ಕಳೆದರೂ ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹಗಳು ಅನಾಥ, ಜೋಡಿ ನಂದಿ ವಿಗ್ರಹಗಳಿಗೆ ಸಿಕ್ಕಿಲ್ಲ ಕಾಯಕಲ್ಪ