ಐ ಲವ್ ತಾಲಿಬಾನಿ ಎಂದ ಬಾಗಲಕೋಟೆ ಯುವಕನ ಮೇಲೆ ದೇಶದ್ರೋಹದ ಕೇಸ್ ಹಾಕಲು ಸ್ವಧರ್ಮೀಯರಿಂದಲೇ ಆಗ್ರಹ
‘ಐ ಲವ್ ತಾಲಿಬಾನಿ’ ಎಂದು ಪೋಸ್ಟ್ ಹಾಕಿರುವುದು ಖಂಡನೀಯ. ತಾಲಿಬಾನಿಗೂ ನಮಗೂ ಏನು ಸಂಬಂಧ? ಇಂತಹವರಿಂದಲೇ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡುತ್ತಿರುವುದು. ಅವನಿಗೆ ಅಫ್ಘಾನಿಸ್ತಾನ, ತಾಲಿಬಾನ್ ಇಷ್ಟ ಇದ್ದರೆ ಅಲ್ಲೇ ಹೋಗಿ ಬದುಕಲಿ. ಇವರಿಂದಾಗಿ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ.
ಬಾಗಲಕೋಟೆ: ಅಫ್ಘಾನಿಸ್ತಾನ ರಾಷ್ಟ್ರವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರು ತಮ್ಮ ಆಳ್ವಿಕೆ ಶುರುಮಾಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವನ್ನು ತೆಕ್ಕೆಗೆ ತೆಗೆದುಕೊಂಡು ಬಂದೂಕು ಹಿಡಿದು ದಬ್ಬಾಳಿಕೆ ನಡೆಸುತ್ತಿದ್ದಾರೆ. ತಾಲಿಬಾನಿಗಳ ಈ ನಡೆಗೆ ವಿಶ್ವದಾದ್ಯಂತ ವ್ಯಾಪಕ ಖಂಡನೆಯೂ ವ್ಯಕ್ತವಾಗುತ್ತಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಮಾಯಕ ಅಫ್ಘಾನಿಸ್ತಾನ್ ಪ್ರಜೆಗಳ ಜೀವಕ್ಕಾಗಿ ಪ್ರಾರ್ಥಿಸುತ್ತಿವೆ. ಆದರೆ, ಇಂತಹ ವಿಷಮ ಘಳಿಗೆಯಲ್ಲಿ ಬಾಗಲಕೋಟೆಯ ಆಸೀಫ್ ಗಲಗಲಿ ಎಂಬ ವ್ಯಕ್ತಿ ‘ಐ ಲವ್ ತಾಲಿಬಾನಿ’ ಎಂದು ತಾಲಿಬಾನ್ ಉಗ್ರರನ್ನು ಬೆಂಬಲಿಸುವ ಪೋಸ್ಟ್ ಶೇರ್ ಮಾಡಿದ್ದು, ಆತನ ವಿವಾದಾತ್ಮಕ ನಡೆಗೆ ಅದೇ ಸಮುದಾಯದವರು ಕಿಡಿಕಾರಿದ್ದಾರೆ. ಅಸಿಪ್ ಗಲಗಲಿಯನ್ನು ತರಾಟೆಗೆ ತೆಗೆದುಕೊಂಡ ಮಹಮದ್ ಯಾಕುಬ್ ಎಂಬುವವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಫೇಸ್ಬುಕ್ನಲ್ಲಿ ವೈರಲ್ ಆಗಿದೆ.
‘ಐ ಲವ್ ತಾಲಿಬಾನಿ’ ಎಂದು ಪೋಸ್ಟ್ ಹಾಕಿರುವುದು ಖಂಡನೀಯ. ತಾಲಿಬಾನಿಗೂ ನಮಗೂ ಏನು ಸಂಬಂಧ? ಇಂತಹವರಿಂದಲೇ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡುತ್ತಿರುವುದು. ಅವನಿಗೆ ಅಫ್ಘಾನಿಸ್ತಾನ, ತಾಲಿಬಾನ್ ಇಷ್ಟ ಇದ್ದರೆ ಅಲ್ಲೇ ಹೋಗಿ ಬದುಕಲಿ. ಇವರಿಂದಾಗಿ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಹೀಗಾಗಿ ಆತ ಎಲ್ಲೇ ಇದ್ದರೂ ಅವನನ್ನು ಒದ್ದು ಒಳಗೆ ಹಾಕಬೇಕು ಎಂದು ಜಮಖಂಡಿ ಪೊಲೀಸರಿಗೆ ಮನವಿ ಮಾಡುತ್ತೇನೆ ಎಂದು ಮಹಮದ್ ಯಾಕುಬ್ ಫೇಸ್ಬುಕ್ ವಿಡಿಯೋದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥನಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ವಿಡಿಯೊ ಮೂಲಕ ಆಗ್ರಹಿಸಿರುವ ಮಹಮದ್ ಯಾಕುಬ್, ಐ ಲವ್ ತಾಲಿಬಾನಿ ಎಂದು ಪೋಸ್ಟ್ ಹಾಕಿದ ಆಸೀಫ್ ಗಲಗಲಿಯಿಂದಾಗಿ ಸಮಾಜದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ದೇಶದ್ರೋಹ ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕಿ, ದೇಶದ ಸುರಕ್ಷತೆ, ಅಭಿವೃದ್ಧಿಗೆ ಸಂಬಂಧಪಟ್ಟಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ಬಿಟ್ಟು ಈ ರೀತಿ ಮಾತನಾಡುವವರಿಗೆ ತಕ್ಕ ಶಿಕ್ಷೆ ನೀಡಿ. ಆತ ಎಲ್ಲೇ ಇದ್ದರೂ ಒದ್ದು ಒಳಗೆ ಹಾಕಬೇಕು ಎಂದು ಜಮಖಂಡಿ ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ.
ವಿವಾದಾತ್ಮಕ ಪೋಸ್ಟ್ ಹಾಕಿದ ಆಸೀಫ್ ಗಲಗಲಿ ವಿರುದ್ಧ ಹರಿಹಾಯ್ದ ಮಹಮದ್ ಯಾಕುಬ್ ಅವರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ದೇಶದ ವಿಚಾರಕ್ಕೆ ಬಂದಾಗ ಹೀಗೆ ಧ್ವನಿ ಎತ್ತುವುದು ಹಾಗೂ ದೇಶದ್ರೋಹಿಗಳ ವಿರುದ್ಧ ಸಿಡಿದೇಳುವುದು ಅಗತ್ಯ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜನರು ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ
‘ನೀನು ಮಹಿಳೆ, ಮನೆಗೆ ಹೋಗು’ ಎಂದರು; ತಾಲಿಬಾನ್ ಆಡಳಿತದ ಕರಾಳ ಅನುಭವ ಬಿಚ್ಚಿಟ್ಟ ಅಫ್ಘಾನಿಸ್ತಾನದ ಟಿವಿ ನಿರೂಪಕಿ