ಕಲ್ಪವೃಕ್ಷದಂತಹ ವೀರಭದ್ರನಿಗೆ ಅರ್ಧ ಕ್ವಿಂಟಲ್ ತೂಕದ ಬೆಳ್ಳಿ ತೇರು ಸಮರ್ಪಿಸಿದ ಭಕ್ತರು
muchakandi veerabhadra temple: 2 ವರ್ಷದಿಂದ ಈ ತೇರಿನ ನಿರ್ಮಾಣ ನಡೆಯುತ್ತಿತ್ತು. ಬೆಳ್ಳಿ ರಥದ ಮೇಲೆ ಸಿಂಹ, ಗಂಟೆ, ಕಳಸವಿದ್ದು ಸುಂದರ ಕುಸುರಿ ಕೆಲಸ ಮಾಡಲಾಗಿದೆ. ತೇರಿನ ಮಧ್ಯೆ ವೀರಭದ್ರನ ಬೆಳ್ಳಿ ಮೂರ್ತಿ ಕೂರಿಸಲಾಗಿದೆ. ತೇರು 14 ಅಡಿ ಎತ್ತರ, ನಾಲ್ಕು ಅಡಿ ಸುತ್ತಳತೆ ಹೊಂದಿದೆ.

ಭಕ್ತಿಯ ಮುಂದೆ ಎಲ್ಲವೂ ಶೂನ್ಯ, ಭಕ್ತರು ತಮ್ಮ ಆರಾಧ್ಯ ದೈವಕ್ಕಾಗಿ ವಿವಿಧ ಸೇವೆ ಮಾಡೋದನ್ನು ನೋಡಿದ್ದೇವೆ. ಇಷ್ಟಾರ್ಥ ಈಡೇರಿಸುವ ದೇವರಿಗೆ ಭಕ್ತರು ನೀಡುವ ಕಾಣಿಕೆಗೆ ಬೆಲೆ ಕಟ್ಟಲಾಗೋದಿಲ್ಲ. ಇನ್ನು ಅದೊಂದು ದೇವಸ್ಥಾನಕ್ಕೆ ಭಕ್ತರು ಬೆಳ್ಳಿ ತೇರನ್ನೇ ಮಾಡಿಸಿ ಭಕ್ತಿ ಮೆರೆದಿದ್ದಾರೆ. ಅರ್ಧ ಕ್ವಿಂಟಲ್ ಗೂ ಅಧಿಕ ತೂಕದ ಬೆಳ್ಳಿ ರಥ ನೀಡಿ ದೇವರಿಗೆ ಭಕ್ತಿ ಸಲ್ಲಿಸಿದ್ದಾರೆ. ಮಿರ ಮಿರ ಮಿಂಚುತ್ತಿರುವ ಬೆಳ್ಳಿರಥ. ಬೆಳ್ಳಿ ರಥದ ಮುಂದೆ ನಿಂತಿರುವ ಭಕ್ತರು, ಕಲಾವಿದರು. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ. ಇದು ಬಾಗಲಕೋಟೆಯ ಮುಚಖಂಡಿ (bagalkot muchakandi) ವೀರಭದ್ರ ದೇವಸ್ಥಾನದ (veerabhadra temple) ಬೆಳ್ಳಿರಥ (silver theru). ಮುಚಖಂಡಿ ವೀರಭದ್ರ ದೇವಸ್ಥಾನ ಐತಿಹಾಸಿಕ ದೇವಸ್ಥಾನವಾಗಿದ್ದು ಬಾಗಲಕೋಟೆ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು, ಪರರಾಜ್ಯದಿಂದಲೂ ಭಕ್ತರು (devotees) ವೀರಭದ್ರನಿಗೆ ನಡೆದುಕೊಳ್ಳುತ್ತಾರೆ.
ಇದೀಗ ಆ ದೇವರಿಗಾಗಿ ಭಕ್ತರು ಬೆಳ್ಳಿ ರಥವನ್ನೇ ಮಾಡಿಸಿ ಭಕ್ತಿ ಮೆರೆದಿದ್ದಾರೆ. ದೇವಸ್ಥಾನದ ಭಕ್ತರು ಬಹಳ ವರ್ಷಗಳಿಂದ ಬೆಳ್ಳಿ ರಥ ಮಾಡಿಸಿಕೊಡೋದಕ್ಕೆ ಪ್ರಯತ್ನ ಮಾಡುತ್ತಿದರು. ಆದರೆ ಅದು ಈಡೇರಿರಲಿಲ್ಲ. ಈಗ ಅದು ಈಡೇರಿದ್ದು, 52 ಕೆಜಿ ತೂಕದ ಬೆಳ್ಳಿಯಿಂದ ಬೆಳ್ಳಿ ತೇರು ಮಾಡಿಸಿದ್ದಾರೆ. ಭಕ್ತರು ಕೆಜಿ, ಎರಡು ಕೆಜಿ, ಮೂರು ಕೆಜಿ, ಹನ್ನೆರಡು ಕೆಜಿ ವರೆಗೂ ಬೆಳ್ಳಿ ನೀಡಿದ್ದು ಒಟ್ಟು 52 ಕೆಜಿ ಯಲ್ಲಿ ತೇರು ಅರಳಿ ನಿಂತಿದೆ.
ಇದಕ್ಕಾಗಿ 36 ಲಕ್ಷ ಮೌಲ್ಯದ ಬೆಳ್ಳಿ ತಯಾರು ಮಾಡೋದಕ್ಕೆ 7 ಲಕ್ಷ ಹಣ ಖರ್ಚಾಗಿದೆ. ಈ ತೇರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಒಯ್ದು ದೇವಸ್ಥಾನ ಟ್ರಸ್ಟ್ ಮಂಡಳಿಯವರು ಉದ್ಘಾಟನೆ ಮಾಡಿದ್ದಾರೆ ಎಂದು ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ದಾರ ಟ್ರಸ್ಟ್ ಅಧ್ಯಕ್ಷರಾದ ಗುರುಬಸವ ತಿಳಿಸಿದ್ದಾರೆ.
ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಬೆಳ್ಳಿ ರಥ ತಯಾರಿಸಿದ ನಾಗಲಿಂಗ ಗಂಗೂರ ಅವರ ಮನೆಯಿಂದ ಮುಚಖಂಡಿ ವರೆಗೂ ಬೆಳ್ಳಿ ರಥದ ಮೆರವಣಿಗೆ ಸಾಗಿತು. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಬೆಳ್ಳಿಯ ವೀರಭದ್ರೇಶ್ವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಅದ್ದೂರಿ ಮೆರವಣಿಗೆ ಜರುಗಿತು. ವಾದ್ಯ ವೈಭವಗಳ ಜೊತೆ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಮುಚಖಂಡಿ ವೀರಭದ್ರ ದೇವಸ್ಥಾನದ ದೇವಸ್ಥಾನಕ್ಕೆ ಬಹಳ ಜನ ಭಕ್ತರಿದ್ದು, ಬೇಡಿದ ಇಷ್ಟಾರ್ಥ ಈಡೇರಿಸುವ ದೇವರು ಎಂದು ಪ್ರಸಿದ್ದಿ ಪಡೆದಿದೆ. ಇದರಿಂದ ಭಕ್ತರು ತಮ್ಮ ಆರಾಧ್ಯ ದೈವಕ್ಕೆ ವಿವಿಧ ಕಾಣಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ ಇದೀಗ ಭಕ್ತರು ಬೆಳ್ಳಿ ರಥ ನೀಡಿದ್ದು ವೀರಭದ್ರ ದೇವರ ಶಕ್ತಿ ಆ ದೇವರ ಮೇಲಿನ ಭಕ್ತರ ಭಕ್ತಿಗೆ ಸಾಕ್ಷಿಯಾಗಿದೆ. ಇನ್ನು ಬೆಳ್ಳಿರಥವನ್ನು ಮಾಡಿದ್ದು ವಿದ್ಯಾಗಿರಿಯ ನಾಗಲಿಂಗಪ್ಪ ಗಂಗೂರ ಹಾಗೂ ಮಕ್ಕಳಾದ ಕಾಶಿನಾಥ, ಗೌತಮ್, ಕಿರಣ, ಸುನಿಲ್ ಎಂಬುವರು ಸೇರಿ.
ಎರಡು ವರ್ಷದಿಂದ ಈ ತೇರಿನ ನಿರ್ಮಾಣದ ಕಾರ್ಯ ನಡೆಯುತ್ತಿತ್ತು. ಬೆಳ್ಳಿ ರಥದ ಮೇಲೆ ಸಿಂಹ, ಗಂಟೆ, ಕಳಸವಿದ್ದು ಸುಂದರ ಕುಸುರಿ ಕೆಲಸ ಮಾಡಲಾಗಿದೆ. ತೇರಿನ ಮಧ್ಯೆ ವೀರಭದ್ರನ ಬೆಳ್ಳಿ ಮೂರ್ತಿ ಕೂರಿಸಲಾಗಿದೆ. ತೇರು 14 ಅಡಿ ಎತ್ತರ ಇದ್ದು, ನಾಲ್ಕು ಅಡಿ ಸುತ್ತಳತೆ ಹೊಂದಿದೆ.
ಶ್ರೀಶೈಲ ಸೇರಿದಂತೆ ಕೆಲವೇ ಕಡೆ ಬೆಳ್ಳಿ ರಥ ಇದ್ದು, ಇದೀಗ ಬಾಗಲಕೋಟೆ ಮುಚಖಂಡಿ ವೀರಭದ್ರನಿಗೂ ಬೆಳ್ಳಿ ತೇರು ಸಿಕ್ಕಿದ್ದು ಪ್ರತಿವರ್ಷ ಕಾರ್ತಿಕೋತ್ಸವ ವೇಳೆ ಐದು ದಿನ ಈ ತೇರನ್ನು ಎಳೆಯುತ್ತಾರೆ. ಪ್ರತಿ ಅಮವಾಸ್ಯೆಗೆ ದೇವಸ್ಥಾನದ ಆವರಣದಲ್ಲಿ ಈ ತೇರನ್ನು ಎಳೆಯಲಿದ್ದಾರೆ. ಇನ್ನು ಇದನ್ನ ತಯಾರು ಮಾಡಿದ ಕಲಾವಿದರು ಕೂಡ ವೀರಭದ್ರ ದೇವರ ಭಕ್ತರಾಗಿದ್ದು,ತೇರು ಇಷ್ಟೊಂದು ಅದ್ಭುತವಾಗಿ ನಿರ್ಮಾಣವಾಗಲು ಕಾರಣವಾಗಿದೆ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ




