
ಬಾಗಲಕೋಟೆ, ಮೇ 11: ಜಿಲ್ಲೆಯಲ್ಲಿ ಚಾಲುಕ್ಯರ ಐತಿಹಾಸಿಕ ಸ್ಥಳಗಳು, ಬಸವಣ್ಣನವರ ಐಕ್ಯ ಸ್ಥಳ ಮತ್ತು ಸಂಗಮನಾಥ ದೇಗುಲ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಮುಖ ಜಿಲ್ಲೆ ಬಾಗಲಕೋಟೆ (bagalkot). ಆದರೆ ಜಿಲ್ಲೆಗೆ ಇದೀಗ ಪ್ರವಾಸಿಗರ ಬರ ಎದುರಾಗಿದೆ. ಇದಕ್ಕೆ ಕಾರಣ ನೆತ್ತಿ ಸುಡುತ್ತಿರುವ ಬಿರುಬಿಸಿಲು (Heatwave). 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿರುವ ತಾಪಮಾನಕ್ಕೆ ಪ್ರವಾಸಿಗರು ಪ್ರವಾಸಿ ತಾಣಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಉಪಹಾರ, ಲಾಡ್ಜ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೂ ಹೊಡೆತ ಬಿದ್ದಿದೆ.
ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಾದಾಮಿಯ ಗುಹಾಂತರ ದೇಗುಲಗಳು, ಐಹೊಳೆ-ಪಟ್ಟದಕಲ್ಲಿನ ಶಿಲ್ಪಕಲೆ, ಶರಣರ ನಾಡಿನ ಸಾಕ್ಷಿಯಾದ ಬಸವಣ್ಣನ ಐಕ್ಯ ಮಂಟಪ ಹಾಗೂ ಸಂಗಮನಾಥ ದೇಗುಲ. ಇವೆಲ್ಲವೂ ಈಗ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ 39 ರಿಂದ 40 ಡಿಗ್ರಿ ದಾಟುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯನ್ನೇ ಬಿಟ್ಟು ಹೊರಬರದ ಜನ, ಈ ರಣಬಿಸಿಲಿನಲ್ಲಿ ಪ್ರವಾಸಿ ತಾಣಗಳಿಗೆ ಬರುವುದಾದರೂ ಹೇಗೆ? ಇದರಿಂದಾಗಿ ಬಾದಾಮಿ, ಐಹೊಳೆ ಹಾಗೂ ಕೂಡಲಸಂಗಮಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಜಿಲ್ಲೆಯ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಬಿಸಿಲ ಬೇಗೆಯ ಕಾರಣ ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ.
ಪ್ರವಾಸಿಗರು ಬಾರದ ಹಿನ್ನೆಲೆ ಒಂದೆಡೆ ಪ್ರವಾಸೋದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಮತ್ತೊಂದೆಡೆ ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿದೆ. ಹೆಚ್ಚು ಪ್ರವಾಸಿಗರು ಭೇಟಿ ವೇಳೆ ಆಗುತ್ತಿದ್ದ ವ್ಯಾಪಾರ ಈ ಬಾರಿ ಇಲ್ಲ. ಉಪಹಾರ, ವಸತಿಗಾಗಿ ಹೋಟೆಲ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೆ ಹೊಡೆತ ಬಿದ್ದಿದೆ.
ಇನ್ನು ಬಿರುಬಿಸಿಲ ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಿ ಮಿತ್ರರು ತುರ್ತು ಸಹಾಯಕ್ಕೆ ಸಿದ್ಧರಿದ್ದಾರೆ. ಆದರೆ ಬಿಸಿಲು ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ನಿಜ ಎಂದು ಪ್ರಭಾರ ಡಿಡಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಮಾತು.
ಇದನ್ನೂ ಓದಿ: ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ
ಒಟ್ಟಿನಲ್ಲಿ, ಬಿಸಿಲ ಬೇಗೆಗೆ ಚಾಲುಕ್ಯರ ನಾಡಿನ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇದು ಪ್ರವಾಸೋದ್ಯಮ ಸೇರಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Mon, 11 May 26