
ಬಾಗಲಕೋಟೆ, ಆಗಸ್ಟ್ 20: ಒಂದು ಕಾಲದಲ್ಲಿ ಅರಬ್ ರಾಷ್ಟ್ರಗಳು, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಸೇರಿದಂತೆ ವಿದೇಶಗಳ ಜನರ ನಾಲಿಗೆಗೆ ಸಿಹಿ ಉಣಿಸುತ್ತಿದ್ದ ನಾಡಿನ ಹೆಮ್ಮೆಯ ‘ಬೆಲ್ಲದ ನಾಡು’ (Jaggery Market) ಮಹಾಲಿಂಗಪುರಕ್ಕೆ ಈಗ ಕಹಿ ಕಾಲ ಆವರಿಸಿದೆ. ಕೃಷಿ ಕಾಯ್ದೆಯ ತಿದ್ದುಪಡಿ ತಂದ ಆಘಾತ, ರಾಜಾರೋಷವಾಗಿ ನಡೆಯುತ್ತಿರುವ ಸೆಸ್ ವಂಚನೆ ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪೈಪೋಟಿಯ ನಡುವೆ ಸಿಲುಕಿ, ಶತಮಾನಗಳ ಇತಿಹಾಸವಿರುವ ಈ ಬೆಲ್ಲದ ಮಾರುಕಟ್ಟೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಎಪಿಎಂಸಿ ಬೆಲ್ಲದ ಮಾರಾಟಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬೆಲ್ಲ ರಾಜ್ಯ, ಪರರಾಜ್ಯ ಸೇರಿದಂತೆ ಪಾಕಿಸ್ತಾನ, ಅಪಘಾನಿಸ್ತಾನ, ಅರಬ್ ದೇಶಗಳು, ಶ್ರೀಲಂಕಾ, ವಿದೇಶಕ್ಕೆ ಸಾವಿರಾರು ಟನ್ ಬೆಲ್ಲ ರಪ್ತಾಗುತ್ತಿತ್ತು. ಸಿಹಿ ಬೆಲ್ಲ ಹಂಚುತ್ತಿದ್ದ ಮಹಾಲಿಂಗಪುರ ಮಾರುಕಟ್ಟೆಗೆ ಇಂದು ಸಂಕಷ್ಟ ಎದುರಾಗಿದೆ. 2021ರಲ್ಲಿ ರೈತರು ಬೇಕಾದಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಬಹುದು ಎಂಬ ಹೊಸ ಎಪಿಎಂಸಿ ಕಾನೂನು ಜಾರಿಯಾದ ಬಳಿಕ ಬೆಲ್ಲದ ವಹಿವಾಟಿಗೆ ಬಾರಿ ಹೊಡೆತ ಬಿದ್ದಿದೆ. ಕಾನೂನು ಹಿಂಪಡೆದರೂ ಮಾರುಕಟ್ಟೆ ಚೇತರಿಸಿಕೊಂಡಿಲ್ಲ. ಇದರಿಂದ ಬೆಲ್ಲದ ವ್ಯಾಪಾರಸ್ಥರು ಬೇರೆ ಉದ್ಯೋಗತ್ತ ಮುಖ ಮಾಡಿದ್ದಾರೆ. ಬೆರಳೆಣಿಕೆ ವ್ಯಾಪಾರಸ್ಥರು ಮಾತ್ರ ಬೆಲ್ಲ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮೇಳೈಸಿದ ‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಮೊದಲು ದಿನಕ್ಕೆ 40-50 ಲಾರಿಗಳ ಮೂಲಕ 400-500 ಟನ್ ಬೆಲ್ಲ ರಫ್ತಾಗುತ್ತಿತ್ತು. ಈಗ ದಿನಕ್ಕೆ 4-5 ಲಾರಿ ಅಂದರೆ ಕೇವಲ 40-50 ಟನ್ ಮಾತ್ರ ರಫ್ತಾಗುತ್ತಿದೆ. ಎಪಿಎಂಸಿಗೆ ಸೆಸ್ ಕಟ್ಟಿ, ಮಾರುಕಟ್ಟೆಗೆ ತರದೆಯೂ ಮಾರಾಟ ಮಾಡಲು ಅವಕಾಶವಿದ್ದರೂ, ಸೆಸ್ ವಂಚಿಸಿ ಹೊರಗಡೆಯೇ ಬೆಲ್ಲ ಮಾರಾಟವಾಗುತ್ತಿದೆ. ಇದರಿಂದ ಎಪಿಎಂಸಿಗೆ ನಷ್ಟವಾದರೆ, ಬೆಲ್ಲದ ವ್ಯಾಪಾರಸ್ಥರಿಗೂ ನಷ್ಟವಾಗಿದೆ. ಇನ್ನು ಸೆಸ್ ವಂಚನೆ ಮಾಡಿ ಮಾರಾಟ ಮಾಡುವವರ ಮೇಲೆ ಎಪಿಎಂಸಿ ಅಧಿಕಾರಿಗಳು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೆಲ್ಲದ ವ್ಯಾಪಾರಸ್ಥರು ಆರೋಪ ಮಾಡಿದ್ದಾರೆ.
ಇದು ಕೇವಲ ವ್ಯಾಪಾರಸ್ಥರು ಅಷ್ಟೇ ಅಲ್ಲದೆ ಹಮಾಲರ ಹೊಟ್ಟೆ ಮೇಲೂ ಹೊಡೆತ ನೀಡಿದೆ. ನೂರಾರು ಹಮಾಲರು ಬೆಲ್ಲದ ಮಾರುಕಟ್ಟೆ ನಂಬಿ ಬದುಕು ಸಾಗಿಸ್ತಿದ್ದರು. ಅವರ ಜೀವನಕ್ಕೂ ಕಂಟಕ ಉಂಟಾಗಿದೆ. ಮೊದಲು ಕೆಲಸ ಜಾಸ್ತಿ ಇತ್ತು. ಈಗ ಲಾರಿ ಬರುವುದಿಲ್ಲ. ಹೊಟ್ಟೆಪಾಡಿಗೆ ಕಷ್ಟ ಆಗಿದೆ ಎಂದು ಹಮಾಲರು ಗೋಳಾಡುತ್ತಿದ್ದಾರೆ. ಮಾರುಕಟ್ಟೆ ಅವಲಂಬಿಸಿದ್ದ ನೂರಾರು ಹಮಾಲರು ಕೆಲಸವಿಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳಿಂದಲೂ ಬೆಲ್ಲದ ಉತ್ಪಾದನೆಗೆ ಹೊಡೆತ ಬಿದ್ದಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾಳಿಂಬೆ ಬೆಳೆಗೆ ಅಂಡಮಾರಿ ರೋಗದ ಕಂಟಕ; 10 ಸಾವಿರಕ್ಕೂ ಅಧಿಕ ಎಕರೆ ಬೆಳೆ ನಾಶ!
ಕರ್ನಾಟಕದಲ್ಲೇ ಬೆಲ್ಲದ ಮಾರುಕಟ್ಟೆಗೆ ಹೆಸರಾಗಿದ್ದ ಮಹಾಲಿಂಗಪುರ ಇಂದು ಗತವೈಭವ ಕಳೆದುಕೊಂಡಿದೆ. ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸಿ ವ್ಯಾಪಾರಸ್ಥರು ಹಾಗೂ ಹಮಾಲರನ್ನು ಉಳಿಸಬೇಕಿದೆ. ಆ ಮೂಲಕ ಪುನಃ ಮಹಾಲಿಂಗಪುರ ಬೆಲ್ಲದ ಮಾರುಕಟ್ಟೆ ಗತವೈಭವ ನಿರ್ಮಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.