AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಬಾಣಂತಿಯರ ಸಾವು: ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಸಿದ್ದರಾಮಯ್ಯ ಖಡಕ್ ಸೂಚನೆ

ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವ ಬಗ್ಗೆ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ನನ್ನ ಸರ್ಕಾರದಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಇಲ್ಲ ಎಂದಿರುವ ಸಿದ್ದರಾಮಯ್ಯ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದಾರೆ.

ಬಳ್ಳಾರಿ ಬಾಣಂತಿಯರ ಸಾವು: ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಸಿದ್ದರಾಮಯ್ಯ ಖಡಕ್ ಸೂಚನೆ
ಸಿದ್ದರಾಮಯ್ಯ
Sunil MH
| Updated By: Ganapathi Sharma|

Updated on:Dec 06, 2024 | 1:04 PM

Share

ಬೆಂಗಳೂರು, ಡಿಸೆಂಬರ್ 6: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಶುಕ್ರವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಗೆ ಬಂದಿದೆ. ಬಾಣಂತಿಯರ ಸಾವಿನ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯಾಗಿದ್ದು, ‘ನನ್ನ ಸರ್ಕಾರದಲ್ಲಿ ಇಂಥದ್ದಕ್ಕೆಲ್ಲ ಅವಕಾಶವಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದಾರೆ. ಜತೆಗೆ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಬಾಣಂತಿಯರ ಸಾವಿನ ಬಗ್ಗೆ ಗಹನವಾದ ಚರ್ಚೆಯಾಗಿದೆ. ಇದೇ ವೇಳೆ ಸಿದ್ದರಾಮಯ್ಯ, ಬಾಣಂತಿಯರ ಸಾವಿನ ಬಗ್ಗೆ ಮೊದಲು ಪರಿಶೀಲನೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನನ್ನ ಸರ್ಕಾರದಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಇಲ್ಲ: ಸಿಎಂ ಗುಡುಗು

ಬಳ್ಳಾರಿ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆಯೋ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ. ನನ್ನ ಸರ್ಕಾರದಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಇಲ್ಲ. ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ನೀಡಲಾಗಿದ್ದ ಐವಿ ದ್ರಾವಣದಿಂದಾಗಿ ನಾಲ್ವರು ಬಾಣಂತಿಯರು ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಕರ್ನಾಟಕದಾದ್ಯಂತ ಈ ವರ್ಷ ಈವರೆಗೆ 327 ಮೆಟರ್ನಲ್ ಸಾವಾಗಿದೆ ಎಂಬ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ನವೆಂಬರ್ 9 ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ಬಳಿಕ ಬಾಣಂತಿಯರಿಗೆ ಐವಿ ದ್ರಾವಣ ನೀಡಲಾಗಿತ್ತು. ಅದಾದ ಎರಡೇ ಗಂಟೆಯಲ್ಲಿ ಬಾಣಂತಿಯರು ಅಸ್ವಸ್ಥಗೊಂಡಿದ್ದರು.

ಒಟ್ಟು 9 ಮಂದಿ ಬಾಣಂತಿಯರ ಪೈಕಿ, ಇದೀಗ ಐವರು ಮೃತಪಟ್ಟಿದ್ದು, ನಾಲ್ವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಅಸ್ವಸ್ಥರಾದ ಕೆಲವು ಮಂದಿ ಬಾಣಂತಿಯರು ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿರುವುದು ಗೊತ್ತಾಗಿದ್ದರೆ, ಮೂವರಲ್ಲಿ ಇಲಿ ಜ್ವರ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿನ ಬಗ್ಗೆ ಸರ್ಕಾರ ಗಂಭೀರವಾಗಿದೆ, ರಾಜೀನಾಮೆಗೂ ಸಿದ್ಧ: ಗುಂಡೂರಾವ್

ಬಾಣಂತಿಯರಿಗೆ ನೀಡಿದ್ದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಸಲು ಯೋಗ್ಯವಲ್ಲವೆಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್​ಹೌಸಿಂಗ್ ​​ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟಾಗಿಯೂ ಅದೇ ದ್ರಾವಣವನ್ನು ವೈದ್ಯರು ಬಳಸಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಖುದ್ದು ಸಿಎಂ ಸಿದ್ದರಾಮಯ್ಯನವರೇ ಈಗ ಸಂಪುಟ ಸಭೆಯಲ್ಲಿ ಆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Fri, 6 December 24