ಬೆಳಗಾವಿ ಅಜ್ಜಿ ಬಳ್ಳಾರಿ ಕಾಲೇಜಿಗೆ ದೇಹ ದಾನ ಮಾಡಿ ಸಾರ್ಥಕತೆ ಮೆರೆದರು ! ಇದಕ್ಕೆ ಪ್ರೇರಣೆ ಯಾರು? ಇಲ್ಲಿದೆ ಕ್ರಾಂತಿಕಾರಿ ಸ್ಟೋರಿ!

ಬೆಳಗಾವಿ ಅಜ್ಜಿ ಬಳ್ಳಾರಿ ಕಾಲೇಜಿಗೆ ದೇಹ ದಾನ ಮಾಡಿ ಸಾರ್ಥಕತೆ ಮೆರೆದರು ! ಇದಕ್ಕೆ ಪ್ರೇರಣೆ ಯಾರು? ಇಲ್ಲಿದೆ ಕ್ರಾಂತಿಕಾರಿ ಸ್ಟೋರಿ!
ಬೆಳಗಾವಿಯ ಅಜ್ಜಿ ಬಳ್ಳಾರಿ ಕಾಲೇಜಿಗೆ ಕೊಟ್ಟರು ಉಡುಗೊರೆ! ದೇಹ, ನೇತ್ರ, ಚರ್ಮ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ದೆ!

ಬೈಲಹೊಂಗಲದ ನಿವಾಸಿ ದಿ. ಕಸ್ತೂರವ್ವ ಬಸವಣ್ಣೆಪ್ಪ ಜಿಗಜಿನ್ನಿ ಮೃತಪಟ್ಟಿದ್ದು, ನೇತ್ರ ದಾನದ ಮುಖಾಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮ ದಾನದ ಮುಖಾಂತರ ಸುಟ್ಟ ರೋಗಿಗೆ ಜೀವದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬೈಲಹೊಂಗಲದಲ್ಲಿ ನಡೆದ ಡಾ. ರಾಮಣ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇಹದಾನ ಹಾಗೂ ಅಂಗಾಗ ದಾನ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು, ಪ್ರೇರಣೆಗೊಂಡಿದ್ದರು.

TV9kannada Web Team

| Edited By: sadhu srinath

Apr 07, 2022 | 3:54 PM

ಬೆಳಗಾವಿ/ ಬಳ್ಳಾರಿ: ಬೆಳಗಾವಿ ಜಿಲ್ಲೆ (Belagavi) ಬೈಲಹೊಂಗಲದ ನಿವಾಸಿ ದಿ. ಕಸ್ತೂರವ್ವ ಬಸವಣ್ಣೆಪ್ಪ ಜಿಗಜಿನ್ನಿ ( 85 ) ಅವರು (Woman) ದೇಹ ದಾನದ ಮೂಲಕ ಸಾವಿನಲ್ಲೂ ಮೆರೆದಿದ್ದಾರೆ. ಮೃತರ ಹತ್ತಿರ ಸಂಬಂಧಿಗಳ ಮನವಿ ಮೇರೆಗೆ ಮೃತ ದೇಹವನ್ನು ಬೈಲಹೊಂಗಲದ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಮೂಲಕ ನಗರದ (Bellary) ತಾರಾನಾಥ್ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಿದರು (Organ Donation).

ಇವರು 2021 ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದು, ನೇತ್ರ ದಾನದ ಮುಖಾಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮ ದಾನದ ಮುಖಾಂತರ ಸುಟ್ಟ ರೋಗಿಗೆ ಜೀವದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಇತರ ಅಂಗಗಳೂ ದಾನ: ಕೇವಲ ದೇಹವೊಂದೇ ಅಲ್ಲ, ದಿ ಕಸ್ತೂರವ್ವ ಅವರ ನೇತ್ರಗಳು, ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸತ್ರೆಯ ನೇತ್ರ ಭಂಡಾರಕ್ಕೆ ಹಾಗೂ ಚರ್ಮವನ್ನು ಅದೇ ಆಸ್ಪತ್ರೆಯ ಕೆಎಲ್‌ಇ ರೋಟರಿ ಸ್ಕಿನ್‌ ಬ್ಯಾಂಕ್‌ಗೆ ( ಚರ್ಮ ಭಂಡಾರ ) ದಾನ ನೀಡಿದ್ದಾರೆ.

ಸುಟ್ಟ ಗಾಯಕ್ಕೆ ದಾನಿಯ ಚರ್ಮ ಜೋಡಿಸುವ ಮೂಲಕ ಬೇಗ ಗುಣವಾಗುವಂತೆ ಮಾಡಲು ಅವಕಾಶವಿದೆ. ಹೀಗೆ ಅಂಗಾಂಗ ದಾನದ ಮೂಲಕ ಇಬ್ಬರು ಅಂಧರಿಗೆ ಬೆಳಕು ನೀಡಿದ್ದಲ್ಲದೇ, ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖರಾಗಲು ಆಧಾರವಾಗಿದ್ದಾರೆ.

ದೇಹದಾನ ಪ್ರಕ್ರಿಯೆಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಸೈದಾ ಆತರ ಫಾತಿಮಾ , ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ . ರಾಜಶೇಖರ ಗಾಣಿಗೇರ , ಶರೀರ ಮಹಾವಿದ್ಯಾಲಯದ ಎಲ್ಲ ಸಹ ಪ್ರಾಧ್ಯಾಪಕರು ರಚನಾ ವಿಭಾಗ ಮುಖ್ಯಸ್ಥ ಡಾ . ಶಾಮ್ ಕಿಶೋರ್ ಸಿಂಗ್ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ಕಾರ್ಯದರ್ಶಿ ಡಾ . ಮಹಾಂತೇಶ ರಾಮಣ್ಣನವರ ಹಾಗೂ ಜಿಗಜಿನ್ನಿ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಹದಾನಕ್ಕೆ ಪ್ರೇರಣೆ ಯಾರು: ಇಲ್ಲಿದೆ ನೋಡಿ ಕ್ರಾಂತಿಕಾರಿ ಸ್ಟೋರಿ!
ಸಮಾಜದಲ್ಲಿ ಜನರ ಸ್ವಾಸ್ಥ್ಯಂವನ್ನು ಕಾಪಾಡುವವರು ವೈದ್ಯರು. ಸಾವು ಬದುಕಿನ ಸೆಣಸಾಟದಲ್ಲಿರುವ ರೋಗಿಯನ್ನು ಬದುಕಿಸಿ ಅವರಿಗೆ ಮರು ಜನ್ಮ ನೀಡುವ ವೈದ್ಯರ ಕಾರ್ಯಕ್ಕೆ ಸಮಾಜದಲ್ಲಿ ಅಪಾರ ಮೆಚ್ಚುಗೆಯಿದೆ. ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರು ರೋಗಿಗಳ ಜೀವವನ್ನು ಕಾಪಾಡಿ ಜೀವದಾನ ಕಾರ್ಯದಲ್ಲಿ ತೊಡಗಿರುತ್ತಾರೆ. ರೋಗಿಗಳು ತಮ್ಮ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಒಂದಿಲ್ಲೊಂದು ಸಮಸ್ಯೆ ತೋಡಿಕೊಂಡು ವೈದ್ಯರ ಬಳಿ ಬರುತ್ತಾರೆ. ರೋಗಿಗಳ ಪ್ರಾಣವನ್ನು ಕಾಪಾಡಲು ಪಣತೊಟ್ಟ ವೈದ್ಯರಿಗೆ ವಯೋಸಹಜ ಕಾಯಿಲೆ, ಎಕ್ಸಿಡೆಂಟ್ ಮೊದಲಾದ ಪ್ರಕೃತಿ ದತ್ತ ಘಟನೆಗಳಿಂದ ಜನ ಮರಣ ಹೊಂದುವದು ಸಹಜವಾಗಿದೆ. ಇದರಿಂದ ಜೀವನದಲ್ಲಿ ಹುಟ್ಟು ನೀರಿಕ್ಷಿತವಾಗಿದೆ. ಸಾವು ಅನೀರಿಕ್ಷಿತವಾಗಿದೆ ಎಂಬುದನ್ನು ಎಲ್ಲರೂ ಮನಗಂಡ ಸತ್ಯವಾಗಿದೆ.

ವೈದ್ಯರು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಆರೈಕೆ ಮಾಡುವದನ್ನು ಮುಖ್ಯವಾಗಿ ವೃತ್ತಿಯಾಗಿ ಕಂಡುಕೊಂಡಿರುತ್ತಾರೆ. ತಮ್ಮ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಮಾಜಮುಖಿ ಕೆಲಸ ಮಾಡುವ ವೈದ್ಯರು ಅಪರೂಪ. ಅಂಥ ಅಪರೂಪ ವೈದ್ಯರಲ್ಲಿ, ದೇಹದಾನ ಜಾಗೃತಿಗಾಗಿ ತಂದೆಯ ದೇಹ ಛೇದಿಸಿ ವೈದ್ಯಲೋಕದಲ್ಲಿ ಇತಿಹಾಸ ನಿರ್ಮಿಸಿದ ಬೆಳಗಾವಿಯ ಕೆಎಲ್‌ಇ ಆರ್ಯುವೇದ ಕಾಲೇಜಿನಲ್ಲಿ ಶಾರೀರ ರಚನಾ ವಿಭಾಗದಲ್ಲಿ ಮುಖ್ಯಸ್ಥರು ಮತ್ತು ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಹಾಂತೇಶ ರಾಮಣ್ಣವರ ಒಬ್ಬರಾಗಿದ್ದಾರೆ.

ಇವರು ವೈದ್ಯಕೀಯ ಸೇವೆ ಮಾಡುತ್ತಲೇ ತಮ್ಮ ತಂದೆ ಲಿಂ. ದೇಹದಾನಿ ಡಾ.ಬಿ.ಎಸ್.ರಾಮಣ್ಣವರ ಸ್ಮರಣೆಗಾಗಿ ಹುಟ್ಟೂರಾದ ಬೈಲಹೊಂಗಲದಲ್ಲಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ೨೦೦೯ ರಲ್ಲಿ ಸ್ಥಾಪಿಸಿಕೊಂಡು ವೈದ್ಯಲೋಕಕ್ಕೆ ಕೊಡುಗೆ ನೀಡುವದರೊಂದಿಗೆ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಡಾ. ರಾಮಣ್ಣವರ ಟ್ರಸ್ಟ್ ವತಿಯಿಂದ ಇಲ್ಲಿಯವರೆಗೆ ೨೦೦೦ ಕ್ಕೂ ಹೆಚ್ಚು ಜನ ಜನರು ತಮ್ಮ ಅಂಗಾಂಗ ದಾನ, ದೇಹದಾನ ಹಾಗೂ ನೇತ್ರದಾನವನ್ನು ಮತ್ತು ಚರ್ಮದಾನವನ್ನು ಮಾಡಲು ಮುಂದೆ ಬಂದಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತ ಪ್ರವೃತ್ತಿಯಿಂದ ಇಂಥಹ ಸಾಮಾಜಿಕ ಕಾರ್ಯಗಳ ಮೂಲಕ ಚಿರಪರಿಚಿತರಾದ ಇವರು ನಿಧನ ಸುದ್ದಿಯನ್ನು ಎಲ್ಲಡೆ ಬಿತ್ತಿರಿಸಿ, ವಿಶಿಷ್ಠವಾಗಿ ಮುಟ್ಟಿಸುವ ಕಾರ್ಯ ವಿಭಿನ್ನವಾಗಿ ಕಾಣುತ್ತದೆ. ಜನರಲ್ಲಿ ಸಾವಿನ ಬಗ್ಗೆ ಅರಿವು ಮೂಡಿಸುತ್ತ ವೈದ್ಯ ಲೋಕದಲ್ಲಿ ಮತ್ತು ಸಮಾಜಕ್ಕೆ ದೇಹದಾನದ ಕೊರತೆಯನ್ನು ನೀಗಿಸಿ ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಮೂಲತ: ಬೈಲಹೊಂಗಲ ಪಟ್ಟಣದವರಾದ ಇವರು ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಮೂಲಕ ಯಾವುದೇ ಸರಕಾರದ ಅನುದಾನವಿಲ್ಲದೆ ದೇಹದಾನ, ಅಂಗಾಂಗ ದಾನ, ರಕ್ತದಾನ, ಚರ್ಮದಾನ ಇವು ಮಹಾದಾನ ಎಂಬ ಸಮಾಜಕ್ಕೆ ದೇಹದಾನ ಮಹತ್ವವನ್ನು ಸಾರುತ್ತಿದ್ದಾರೆ. ದೇಹದಾನ ಜಾಗೃತಿಯಿಂದ ಅಥಣಿ ತಾಲೂಕಿನ ಶೇಗುಣಸಿಯಲ್ಲಿ ೨೦೦ ಕ್ಕೂ ಹೆಚ್ಚು ಜನ ನೇತ್ರ, ಚರ್ಮ, ದೇಹದಾನಕ್ಕೆ ಸಹಿ ಮಾಡಿದ್ದಾರೆ.

ರಾಮಣ್ಣವರ ಟ್ರಸ್ಟಗೆ ಬೆನ್ನುಲುಬಾಗಿ ಅವರ ತಾಯಿ ಡಾ. ಸುಶೀಲಾದೇವಿ, ಧರ್ಮಪತ್ನಿ ದಂತ ವೈದ್ಯೆ ಡಾ. ಸುರೇಖಾ ,ಕುಟುಂಬದವರಾದ ಡಾ. ವೇಧಾ ವಿನಾಯಕ ರಾಮಣ್ಣವರ, ಸಹೋದರ ಗಂಗಾಧರ, ಜಗದೀಶ, ಇವರು ಅವೀಸ್ಮರಣೀಯವಾದ ಕೊಡುಗೆ ನೀಡುತ್ತಿರುವುದಲ್ಲದೆ, ದೇಹದಾನ, ಸಮಾಜಮುಖಿ ಕಾರ್ಯಕ್ಕೆ ಉತ್ತೇಜನ ನೀಡುತ್ತಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಬೆನ್ನುಲುಬಾಗಿ ನಿಂತು ಸಹಾಯ ಮಾಡುತ್ತಿರುವುದು ಶ್ಲಾಘನೀಯವಾದುದು. ಇವರ ಜಾಗೃತಿಯಿಂದ ಪ್ರೇರಣೆಗೊಂಡ ಸಾವಿರಾರು ಜನರು ಈಗಾಗಲೇ ದೇಹದಾನ ಮಾಡಿದ್ದಾರೆ. ಇದೀಗ ಕಸ್ತೂರವ್ವ ಸಹ ದೇಹ. ನೇತ್ರ ಹಾಗೂ ಚರ್ಮ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
– ವೀರಪ್ಪ ದಾನಿ, ಟಿವಿ9 ವರದಿಗಾರ, ಬಳ್ಳಾರಿ

TV9 Nimagondu Salam Family Donates Body Dr Mahantesh Ramannavar

Follow us on

Related Stories

Most Read Stories

Click on your DTH Provider to Add TV9 Kannada