
ಬಳ್ಳಾರಿ. ಆಗಸ್ಟ್ 10: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ, ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ನೀಡದ ವಸತಿ ನಿಲಯವೊಂದು ಇದೀಗ ಪಾಳು ಬಿದ್ದಿದೆ. ಬಳ್ಳಾರಿಯ (Ballari) ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಉದ್ಘಾಟನೆಯಾದ ಬಾಲಕರ ವಸತಿ ನಿಲಯವನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸಲು ಅನುಕೂಲವಾಗುವ ಸಾಮರ್ಥ್ಯ ಹೊಂದಿರುವ ಈ ಹಾಸ್ಟೆಲ್ ಅನ್ನು ಇದುವರೆಗೆ ವಿದ್ಯಾರ್ಥಿಗಳ ಬಳಕೆಗೆ ನೀಡಿಲ್ಲ ಎನ್ನಲಾಗಿದೆ.
ಹಾಸ್ಟೆಲ್ ಸೌಲಭ್ಯ ದೊರೆಯದ ಕಾರಣ ವಿದ್ಯಾರ್ಥಿಗಳು ಪಿಜಿ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದರೂ, ಬಳಕೆಗೆ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಬಳಕೆಗೆ ನೀಡದೆ ಇರುವುದರಿಂದ ಹಾಸ್ಟೆಲ್ ಕಟ್ಟಡದ ಹಲವು ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಜನರ ಓಡಾಟ ಮತ್ತು ನಿರ್ವಹಣೆಯ ಕೊರತೆಯಿಂದ ಕಟ್ಟಡದ ಸ್ಥಿತಿಯೂ ಹದಗೆಡುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇದರ ನಡುವೆ ಹಾಸ್ಟೆಲ್‌ನಲ್ಲಿ ಅಂದಾಜು 12 ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳತನವಾಗಿರುವುದು ಕೂಡ ಬೆಳಕಿಗೆ ಬಂದಿದೆ. ಬಳಕೆಯಿಲ್ಲದೆ ಪಾಳು ಬಿದ್ದಿರುವ ಕಟ್ಟಡದ ಭದ್ರತೆ ಹಾಗೂ ನಿರ್ವಹಣೆ ಕುರಿತು ಇದೀಗ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?
ವಿದ್ಯಾರ್ಥಿಗಳ ವಸತಿ ಸಮಸ್ಯೆ ಪರಿಹರಿಸಲು ತಕ್ಷಣವೇ ಹಾಸ್ಟೆಲ್ ಅನ್ನು ಬಳಕೆಗೆ ಮುಕ್ತಗೊಳಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮತ್ತಷ್ಟು ಹಾಳಾಗಲು ಬಿಡದೆ, ಅಗತ್ಯ ದುರಸ್ತಿ ಹಾಗೂ ಮೂಲಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ