AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?

ಮುಂಗಾರು ಮಳೆ ಅಭಾವ ಮತ್ತು ಸ್ಥಳೀಯವಾಗಿ ಕೆಲಸ ಸಿಗದ ಕಾರಣ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನೂರಾರು ತಾಂಡಾಗಳಿಂದ ಸುಮಾರು 13,000ಕ್ಕೂ ಹೆಚ್ಚು ಜನರು ಬೆಂಗಳೂರು, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಗುಳೆ ಹೊರಟಿದ್ದಾರೆ ಎನ್ನಲಾಗಿದೆ. ಮಳೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಇದುವರೆಗೂ ಬಿತ್ತನೆ ಕಾರ್ಯವೂ ಆರಂಭವಾಗಿಲ್ಲ. ಇತ್ತ ಉದ್ಯೋಗ ಖಾತ್ರಿ ಯೋಜನೆಗಳಡಿಯೂ ಸಮರ್ಪಕವಾಗಿ ಕೆಲಸ ಸಿಗದ ಕಾರಣ ಈ ನಿರ್ಧಾರ ಅನಿವಾರ್ಯ ಎಂಬ ಮಾತುಗಳು ಕೇಳಿಬಂದಿವೆ.

ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?
ಖಾಲಿ ಖಾಲಿಯಾಗಿರುವ ಮನೆಗಳುImage Credit source: Tv9 Kannada
ವಿನಾಯಕ ಬಡಿಗೇರ್​
| Edited By: |

Updated on: Jul 22, 2026 | 6:27 PM

Share

ಮುಖ್ಯಾಂಶಗಳು

  • ಮುಂಗಾರು ಮಳೆ ಅಭಾವದಿಂದ ಕೆಲಸವಿಲ್ಲದೆ ಜನ ಕಂಗಾಲು
  • ಬಳ್ಳಾರಿ, ವಿಜಯನಗರದಿಂದ ಅನ್ಯ ಊರುಗಳತ್ತ ಹೊರಟ ಜನ
  • 13,000 ಮಂದಿ ಗುಳೆ ಹೋಗಿರುವ ಬಗ್ಗೆ ಸ್ಥಳೀಯರ ಮಾಹಿತಿ

ಬಳ್ಳಾರಿ, ಜುಲೈ 22: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನ ಕಂಗೆಟ್ಟಿದ್ದು, ಕುಟುಂಬ ಸಮೇತ ಗುಳೆ ಹೊರಟಿದ್ದಾರೆ. ಜಿಲ್ಲೆಯ ನೂರಾರು ತಾಂಡಾ ಹಾಗೂ ಹಳ್ಳಿಗಳ ಸಾವಿರಾರು ಜನ ತಂಡೋಪ ತಂಡವಾಗಿ ಊರುಬಿಡುತ್ತಿದ್ದು, ಇದು ಜಿಲ್ಲೆಯಲ್ಲಿನ ಭೀಕರ ಬರಗಾಲಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮನೆಯಲ್ಲಿ ಹಿರಿ ಜೀವಗಳು ಹಾಗೂ ಪುಟಾಣಿ ಮಕ್ಕಳನ್ನ ಬಿಟ್ಟು ಉಳಿದವರೆಲ್ಲ ಹೊಟ್ಟೆ ತುಂಬಿಸಿಕೊಳ್ಳಲು ಅನ್ಯ ಊರುಗಳತ್ತ ಮುಖ ಮಾಡಿದ್ದಾರೆ.

140 ತಾಂಡಾಗಳಿಂದ 13,000 ಮಂದಿ ಗುಳೆ?

ಬರದ ಛಾಯೆ ಹಿನ್ನೆಲೆ ತಾಂಡಾಗಳಿಂದಲೇ ಅತೀ ಹೆಚ್ಚು ಜನ ಗುಳೆ ಹೊರಟಿದ್ದಾರೆ. ಸ್ಥಳೀಯರು ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿರುವ 20 ತಾಂಡಾಗಳಿಂದ 3,000ಕ್ಕೂ ಹೆಚ್ಚು ಜನ ಮತ್ತು ವಿಜಯನಗರ ಜಿಲ್ಲೆಯಲ್ಲಿನ 120 ತಾಂಡಾಗಳಿಂದ 10,000ಕ್ಕೂ ಹೆಚ್ಚು ಮಂದಿ ಊರು ತೊರೆದಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ಕಡೆ ಉದ್ಯೋಗ ಅರಸಿ ಹೊರಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತವಾಗಲಿ ಅಧಿಕಾರಿಗಳಾಗಲೀ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ; ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಸ್ಥಳೀಯವಾಗಿ ಉದ್ಯೋಗದ ಅಭಾವ

ಮಳೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಇದುವರೆಗೂ ಬಿತ್ತನೆ ಕಾರ್ಯವೂ ಆರಂಭವಾಗಿಲ್ಲ. ಇತ್ತ ಉದ್ಯೋಗ ಖಾತ್ರಿ ಯೋಜನೆಗಳಡಿಯೂ (ಈಗಿನ ವಿಬಿ ಜಿ ರಾಮ್​​ ಜಿ) ಸಮರ್ಪಕವಾಗಿ ಕೆಲಸ ಸಿಗುತ್ತಿಲ್ಲ. ಉದ್ಯೋಗ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳ ಕಿವಿ ಹಿಂಡಿ ಸ್ಥಳೀಯವಾಗಿ ಕೆಲಸ ಕೊಡಿಸಬೇಕಿದ್ದ ಜನಪ್ರತಿನಿಧಿಗಳೂ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಲ್ಲೇ ಇದ್ದರೆ ಮುಂದೆ ಉಪವಾಸ ಇರಬೇಕಾದ ಸ್ಥಿತಿ ಬರಲಿದೆ ಎಂಬ ಕಾರಣಕ್ಕೆ ಊರು ತೊರೆಯೋದು ಇಲ್ಲಿನವರಿಗೆ ಅನಿವಾರ್ಯ ಎಂಬುದು ಸಾರ್ವಜನಿಕರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us