ಬೀಡಿ, ಸಿಗರೇಟ್ ವಿಚಾರಕ್ಕೆ ಜೈಲಲ್ಲೇ ಡಿಶುಂ ಡಿಶುಂ: ಸಿಬ್ಬಂದಿ ಮೇಲೆ ಕೈದಿಗಳ ಅಟ್ಯಾಕ್​

ಬೀಡಿ, ಸಿಗರೇಟ್ ವಿಚಾರಕ್ಕೆ ಕೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ. ಕಾರಾಗೃಹಗಳಲ್ಲಿ ಮನಃಪರಿವರ್ತನೆ ಬದಲಿಗೆ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಾ, ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಜೈಲು ಆಡಳಿತದ ವೈಫಲ್ಯ ಮತ್ತು ಬಂಧೀಖಾನೆಗಳ ಮೂಲ ಉದ್ದೇಶದ ಬಗ್ಗೆಯೇ ಹಲವು ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ.

ಬೀಡಿ, ಸಿಗರೇಟ್ ವಿಚಾರಕ್ಕೆ ಜೈಲಲ್ಲೇ ಡಿಶುಂ ಡಿಶುಂ: ಸಿಬ್ಬಂದಿ ಮೇಲೆ ಕೈದಿಗಳ ಅಟ್ಯಾಕ್​
ಬಳ್ಳಾರಿಯ ಸೆಂಟ್ರಲ್ ಜೈಲು
Image Credit source: Tv9 Kannada
Edited By:

Updated on: Apr 08, 2026 | 6:11 PM

ಬಳ್ಳಾರಿ, ಏಪ್ರಿಲ್​​ 08: ಜೈಲು ಎಂದರೆ ಮಾಡಿದ ತಪ್ಪಿಗೆ ಅಪರಾಧಿಗಳು ಶಿಕ್ಷೆಯ ಅವಧಿಯನ್ನು ಕಳೆಯಬೇಕಾದ ಮತ್ತು ತಮ್ಮನ್ನು ತಾವು ತಿದ್ದುಕೊಳ್ಳಬೇಕಾದ ಜಾಗ. ಆದರೆ ಪ್ರಸ್ತುತವಾಗಿ ರಾಜ್ಯದ ಜೈಲುಗಳು ಇವಕ್ಕೆ ತದ್ವಿರುದ್ಧವಾಗಿವೆ. ಮನಃ ಪರಿವರ್ತನೆ ಮಾಡಿಕೊಳ್ಳುವ ಬದಲು ಕೈದಿಗಳು ಹೊರಗಿನಗಿಂತಲೂ ಬಂಧೀಖಾನೆಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇರೋದು ಕಾರಗೃಹದಲ್ಲಿ ಅನ್ನೋದು ಒಂದನ್ನು ಹೊರತು ಪಡಿಸಿದರೆ ದುಡ್ಡು ಕೊಟ್ಟರೆ ಏನು ಬೇಕಾದರೂ ಇಲ್ಲಿ ಸಿಗುತ್ತೆ ಎಂಬ ಸ್ಥಿತಿ ಇದೆ. ರಾಜಾತಿಥ್ಯ ಪ್ರಕರಣಗಳ ಬಗ್ಗೆ ಸಾಲು ಸಾಲು ವರದಿಯಾಗುತ್ತಿದ್ದರೂ, ಕೈದಿಗಳ ಪುಂಡಾಟಕ್ಕೆ ಮಾತ್ರ ಇನ್ನೂ ಬ್ರೇಕ್​​ ಬಿದ್ದಿಲ್ಲ.

ಇನ್ನು ಜೈಲು ಸಿಬ್ಬಂದಿಗೆ ಹೆದರಬೇಕಿದ್ದ ಕೈದಿಗಳು ಅವರನ್ನೇ ಹೆದರಿಸುತ್ತಿರೋದು, ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೇ ಸರಿ. ಮೊನ್ನೆ ಮೊನ್ನೆಯಷ್ಟೇ ಮೊಬೈಲ್​​ ತಪಾಸಣೆಗೆ ಹೋದ ಸಿಬ್ಬಂದಿಗೆ ಪರಪ್ಪನ ಅಗ್ರಹಾರದ ಕೈದಿಗಳು ಬೆದರಿಕೆ ಹಾಕಿರುವ ಘಟನೆ ಮಾಸುವ ಮುನ್ನವೇ ಇತ್ತ ಬಳ್ಳಾರಿಯಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಸೆಂಟ್ರಲ್ ಜೈಲಿನಲ್ಲಿ ಬೀಡಿ, ಸಿಗರೇಟ್ ನೀಡದಿರುವ ವಿಚಾರಕ್ಕೆ ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದಾರೆ. ಜೈಲರ್ ಅಶೋಕ ಹೊಸಮನಿ ಜೊತೆ ಮಾತಿನಚಕಮಕಿ ನಡೆಸಿದ ಕೈದಿಗಳು, ವಾಗ್ವಾದದ ನಂತರ ದಾಳಿ ನಡೆಸಿದ್ದಾರೆ. ಅಲ್ತಾಫ್, ರಶೀದ್ ಸೇರಿದಂತೆ ಐವರು ಕೈದಿಗಳಿಂದ ಅಟ್ಯಾಕ್​​ ನಡೆದಿದ್ದು, ಈ ಸಂಬಂಧ ಬಳ್ಳಾರಿಯ ಬ್ರೂಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್

ಕಾರವಾರ ಜೈಲಿನಲ್ಲೂ ನಡೆದಿತ್ತು ಇಂತಹುದ್ದೇ ಘಟನೆ

ತಂಬಾಕು ಮತ್ತು ಇನ್ನಿತರೆ ಮದಕ ವಸ್ತುಗಳ ಬಳಕೆಗೆ ಆಸ್ಪದ ನೀಡದ ಕಾರಣಕ್ಕೆ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳು ಹಲ್ಲೆಗೆ ಮುಂದಾದ ಘಟನೆ ಕೆಲ ತಿಂಗಳುಗಳ ಹಿಂದೆಯಷ್ಟೇ ಕಾರವಾರ ಜೈಲಿನಲ್ಲಿಯೂ ನಡೆದಿತ್ತು. ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬವರು ಅಟ್ಯಾಕ್​​ಗೆ ಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಹೆಚ್ಚಿನ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ವಿನಾಯಕ ಬಡಿಗೇರ್​
Follow Us