Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ 41° ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ; ಹೈರಾಣಾದ ಗಣಿನಾಡಿನ ಜನ

ಅಲ್ಲಿಯ ಜನ ತಂಪು ಪಾನೀಯಗಳು ಕಂಡರೆ ಮುಗಿ ಬೀಳುತ್ತಿದ್ದಾರೆ, ನೆರಳು ನೋಡಿ ಓಡೋಡಿ ಆಶ್ರಯ ಪಡೆಯುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಸಾಕು ಮುಖಕ್ಕೆ ಮಾಸ್ಕ್, ಕೈಯಲ್ಲಿ ಛತ್ರಿ ಹಿಡಿದು ಬರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಬೆಂಡಾಗಿರುವ ಬಳ್ಳಾರಿ ಜಿಲ್ಲೆಯ ಜನ ತಣ್ಣನೆ ಗಾಳಿ ಬಿಸಿದ್ರೆ ಸಾಕಪ್ಪ ಎನ್ನುತ್ತಿದ್ದಾರೆ.

ಬಳ್ಳಾರಿಯಲ್ಲಿ 41° ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ; ಹೈರಾಣಾದ ಗಣಿನಾಡಿನ ಜನ
ಬಳ್ಳಾರಿ ಬಿಸಿಲು
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 31, 2024 | 4:02 PM

ಬಳ್ಳಾರಿ, ಮಾ.31: ಗಣಿನಾಡು ಬಳ್ಳಾರಿಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈಗಾಗಲೇ ಹವಾಮಾನ ಇಲಾಖೆ ನೀಡಿರುವ ವರದಿ ಆಧಾರದಲ್ಲಿ ಬಳ್ಳಾರಿ(Ballari)ಯಲ್ಲಿ 38° ಡಿಗ್ರಿಯಿಂದ 41° ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಗಿದೆ. ಇಷ್ಟೊಂದು ತಾಪಮಾನಕ್ಕೆ ಗಣಿನಾಡಿನ ಮಂದಿ ಹೈರಾಣಾಗಿದ್ದಾರೆ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಕೈಯಲ್ಲಿ ಛತ್ರಿ, ಮುಖಕ್ಕೆ ಮಾಸ್ಕ, ತಲೆ ಮೇಲೆ ಟವೆಲ್ ಹೊತ್ತು ಜನ ಹೊರ ಬರುತ್ತಿದ್ದಾರೆ. ಇನ್ನು ನೆರಳು ಕಂಡರೆ ಸಾಕು ಸ್ವಲ್ಪ ಕಾಲ ಬಿಸಿಲಿನ ತಾಪದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಂಪು ಪಾನೀಯಗಳನ್ನ ಸೇವೆನೆ ಮಾಡಿ ಬಿಸಿ ಧಗೆಯಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಮಾರ್ಚ್​ ಅಂತ್ಯದಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಹೀಗಾಗಿ ಜನರು ಆತಂಕ ಪಡುತ್ತಿದ್ದಾರೆ. ಮಾರ್ಚ್​ ತಿಂಗಳಲ್ಲೇ ಇಷ್ಟೊಂದು ತಾಪಮಾನ ದಾಖಲಾದರೆ, ಎಪ್ರಿಲ್ ತಿಂಗಳ ಗತಿ ಏನು?, ಮನುಷ್ಯ ಇಷ್ಟೊಂದು ತಾಪಮಾನದಲ್ಲಿ ಬದುಕುವುದು ಹೇಗೆ ಎನ್ನುತ್ತಿದ್ದಾರೆ. ಇನ್ನು ಮಕ್ಕಳಲ್ಲಿ ಬೆವರು ಸಾಲಿ(ಚಿಕ್ಕ ಗುಳ್ಳೆ) ಅಂತಹ ಚರ್ಮ ರೋಗ ಕಾಣಿಸಿಕೊಳ್ಳುತ್ತಿದೆ. ತಾಪಮಾನ ಹೀಗೆ ಮುಂದುವರದ್ರೆ ಬದುಕು ಕಷ್ಟ ಎನ್ನುತ್ತಾರೆ ಗಣಿನಾಡಿನ ಜನರು.

ಇದನ್ನೂ ಓದಿ:ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​​ಗೆ ಭಾರಿ ಡಿಮ್ಯಾಂಡ್, ಬೀದರ್​ನಲ್ಲಿ ಮಡಿಕೆಗಾಗಿ ಸರತಿ ಸಾಲಿನಲ್ಲಿ ನಿಂತ ಜನ

ಆರೋಗ್ಯ ಇಲಾಖೆಯಿಂದ ಸೂಚನೆ

ಬಿಸಿಲಿನ ಶಾಕಕ್ಕೆ ಮಕ್ಕಳಿಗೆ, ವಯೋವೃದ್ದರಿಗೆ ಡಿ ಹೈಡ್ರೇಷನ್‌ನಂತಹ ಸಮಸ್ಯೆಗಳು ಬರುತ್ತಿದ್ದು, ಆರೋಗ್ಯ ಇಲಾಖೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಅತೀ ಹೆಚ್ಚು ನೀರನ್ನ ಸೇವನೆ ಮಾಡಬೇಕು, ಗ್ಲೂಕೋಸ್​ ಸೇವನೆ ಮಾಡಬೇಕು. ಬೆಳಗಿನ 10 ಗಂಟೆ ಒಳಗೆ ಮಾತ್ರ ಜನ ಹೊರಗೆ ಬರಬೇಕು, ಉಳಿದ ಕಾಲ ಆದಷ್ಟು ಬಿಸಿಲಿನಿಂದ ಕಾಪಾಡಿಕೊಳ್ಳುವ ಯತ್ನ ಮಾಡಬೇಕು. ತಂಪು ಪಾನೀಯಗಳು ಸೇವನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಇನ್ನು ತಂಪು ಪಾನೀಯಗಳ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಚಬಿಸಿಲಿನ ತಾಪದ ಮದ್ಯೆ ತಂಪು ಪಾನೀಯಗಳ ಬೆಲೆ ಏರಿಕೆ ಬಿಸಿಯು ತಟ್ಟಿತ್ತಿದೆ. ಸರ್ಕಾರ ಕೂಡಲೇ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳನ್ನ ಹೆಚ್ಚಿಸುವ ಕೆಲಸ ಮಾಡಬೇಕೆಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.

ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಹಣ್ಣುಗಳ ದರ ಏರಿಕೆಯಾಗಿದ್ದು, ಜನ ಬೆಲೆ ಏರಿಕೆ ಮದ್ಯೆ ಬಿಸಿಲಿನ ತಾಪಕ್ಕೆ ಖರೀದಿ ಮಾಡಿ ಸೇವನೆ ಮಾಡುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲಿ ತಾಪಮಾನ ಹೆಚ್ಚುವ ಸಾಧ್ಯತೆ ಇದೆ. ಜನ ಆದಷ್ಟು ಸುರಕ್ಷಿತವಾಗಿರಬೇಕು ಎನ್ನುತ್ತಾರೆ. ಒಟ್ಟಿನಲ್ಲಿ ಗಣಿನಾಡು ಬಳ್ಳಾರಿಯಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನ ಹೈರಾಣಾಗಿದ್ದಾರೆ. ಬಿಸಿಲಿನ ತಾಪದಿಂದ ಸುರಕ್ಷಿತವಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sun, 31 March 24