
ವಿಜಯನಗರ, ಸೆಪ್ಟೆಂಬರ್ 14: ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅದ್ಧೂರಿಯಾಗಿ ಗಣೇಶ ಉತ್ಸವ ಆಚರಣೆ ವೇಳೆ ಅವಘಡ ಕೂಡ ಸಂಭವಿಸಿವೆ. ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್ ಅವಘಡ ಸಂಭವಿಸಿದ್ದು, ಗಣಪತಿ ಮೂರ್ತಿ ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಕಾಲುವೆಗೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನಗುಡಿ ಗ್ರಾಮದ ಹೊರವಲಯದಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ಮೂರ್ತಿಯಲ್ಲಿದ್ದ ಬಿದಿರುಗಳು ಮಾರ್ಗಮಧ್ಯೆ ವಿದ್ಯುತ್ ಕಂಬದ ತಂತಿಗೆ ತಗುಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಗಣಪತಿ ಮೂರ್ತಿ ಸಮೇತ ಕಾಲುವೆಗೆ ಉರುಳಿಬಿದ್ದಿದೆ.
ಇನ್ನು ದುರ್ಘಟನೆಯಲ್ಲಿ ಕಮಲಾಪುರ ಮೂಲದ ಹುಲುಗಪ್ಪ ಹಾಗೂ ದೀಪಕ್ ಎಂಬುವವರಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗಳಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ಹೇಳಿದಂಗೆ ಇನ್ಸ್ಪೆಕ್ಟರ್ ಧನಂಜಯ್ನ ಸಸ್ಪೆಂಡ್ ಮಾಡೋಕ್ಕಾಗಲ್ಲ ಖರ್ಗೆ ಗರಂ
ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅವಘಡ ಸಂಭವಿಸಿದ ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೊಸಪೇಟೆ ಡಿವೈಎಸ್ಪಿ ಮುರಳೀಧರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಹುಲುಗಪ್ಪ ಮತ್ತು ಗುರುರಾಜ್ ಕಟ್ಟಿಮನಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Mon, 14 September 26