ಸಿಎಂ ಬೊಮ್ಮಾಯಿಯ ಸುದರ್ಶನ ಚಕ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ ಶಿರಚ್ಛೇದನ ಮಾಡಲಿದೆ: ಶ್ರೀರಾಮುಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುದರ್ಶನ ಚಕ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ ಶಿರಚ್ಛೇದನ ಮಾಡಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಗುಡುಗಿದ್ದಾರೆ.
ಬಳ್ಳಾರಿ: ಶ್ರೀಕೃಷ್ಣನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೂಡ ಸುದರ್ಶನ ಚಕ್ರ ಬಿಟ್ಟಿದ್ದಾರೆ. ಈ ಚಕ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ (Congress) ಶಿರಚ್ಛೇದನ ಮಾಡಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು (Minister Sriramulu) ಬಳ್ಳಾರಿಯಲ್ಲಿ ಗುಡುಗಿದ್ದಾರೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆ ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಶ್ರೀರಾಮುಲು, ಸಿಎಂ ಬೊಮ್ಮಾಯಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ಎಸ್ಟಿ ಸಮುದಾಯಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಹನುಮನಿಗೆ, ಪ್ರಭು ಶ್ರೀರಾಮಚಂದ್ರ ಶಕ್ತಿ ತುಂಬಿದ ಹಾಗೇ ನನಗೆ ಭಾರತೀಯ ಜನತಾ ಪಾರ್ಟಿ ಶಕ್ತಿ ತುಂಬಿದೆ ಎಂದರು.
ಬಳ್ಳಾರಿಯ ಸಮಾವೇಶದಿಂದಲೇ ಕಾಂಗ್ರೆಸ್ ಪತನ ಶುರುವಾಗಲಿ. 7 ಸಾವಿರ ಬೇಡರ ಪಡೆಗಳು ವಿಜಯನಗರ ಸಾಮ್ರಾಜ್ಯ ರಕ್ಷಣೆಗೆ ಇದ್ದವು. ಹಾಗೇ 2023ರ ಚುನಾವಣೆಯಲ್ಲಿ ಬೇಡರ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಲ್ಲಬೇಕು. ಈ ಸಮಾವೇಶಕ್ಕೆ 10 ಲಕ್ಷ ಮಂದಿ ವಾಲ್ಮೀಕಿ ಸಮುದಾಯದವರು ಬಂದಿದ್ದಾರೆ. ಮುಖ್ಯಮಂತ್ರಿಗಳು ಇವತ್ತು ಜನಸಾಗರ ನೋಡ್ತಿದರೇ ಅವರಿಗೆ ಕಾಣಿಸುತ್ತೆ ನಮ್ಮ ಸರ್ಕಾರದ ನಡೆ ಸಾಮಾಜ ಪರವಾಗಿ ಕೆಲಸ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸಿಎಂಗೆ ಜೋಡಿ ಗುಂಡಿಗೆ ಇದ್ದಾವೆ
4 ದಶಕದ ಹೋರಾಟವನ್ನು ನೋಡಿ ಮೀಸಲಾತಿ ಹೆಚ್ಚಿಸಿದದ್ದಾರೆ. ಅವರಿಗೆ ಎಂಟು ಗುಂಡಿಗೆ ಇದೆ. ನಾವು ದೇಶಕ್ಕೋಸ್ಕರ ವಾಜಪೇಯಿಯವರನ್ನು ನೆನಪಿಸಿಕೊಳ್ಳಬೇಕು. ನಮ್ಮ ದಕ್ಷಿಣದ ವಾಜಪೇಯಿ ಬೊಮ್ಮಾಯಿ ಆಗಿದ್ದಾರೆ. ಕಾಂಗ್ರೆಸ್ನವರು ಇಷ್ಟು ದಿವಸ ಮೀಸಲಾತಿ ಕೊಡದೇ ನಿದ್ದೆ ಮಾಡಿದ್ದಾರೆ. ನಮ್ಮ ಸರ್ಕಾರ ಎಸ್ಟಿಗೆ 3 ರಿಂದ 7 ಹಾಗೂ ಎಸ್ಸಿಗೆ 15 ರಿಂದ 17 ಪ್ರತಿಶತ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ನಮ್ಮ ಸರ್ಕಾರ ಒಟ್ಟು 24 ಪ್ರತಿಶತ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ಯಡಿಯೂರಪ್ಪ, ನಮ್ಮ ಬೊಮ್ಮಾಯಿ ಬಳ್ಳಾರಿಗೆ ಬಂದು ನಿಂತಿದ್ದಾರೆ. ನಿಮಗೆ ತಾಖತ್ತಿದ್ದರೇ ಬನ್ನಿ ನೋಡೋಣ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ. ನಿಮ್ಮ ಜಾತಿಯ ಪರವಾಗಿ ನಾನಿದ್ದೇನೆ ಅಂತಾ ಬೊಮ್ಮಾಯಿ ಮಾತುಕೊಟ್ಟಿದ್ದರು. ಆ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ ಎಂದು ಮಾತನಾಡಿದರು.
ನಿಮ್ಮ ಮಾತು ನಡೆಸಿಕೊಂಡು ನಿಮ್ಮ ಅನ್ನದ ರುಣ ತೀರಿಸುವ ಕೆಲಸ ಮಾಡಿದ್ದೀನಿ
ನಾನು ಇಂದು ನಿಮ್ಮ ಅನ್ನದ ರುಣ ತೀರಿಸುವ ಕೆಲಸ ಮಾಡಿದ್ದೇನೆ. ಬೀದರ್ನಿಂದ ಚಾಮರಾಜನಗರ ಜಿಲ್ಲೆವರೆಗು ಪಾದಯಾತ್ರೆ ಮಾಡಿದ್ದೇನೆ. ಆ ಅನ್ನದ ರುಣ ತೀರಿಸಿದ್ದೇನೆ. ಶ್ರೀರಾಮುಲು ಬೇಡರ ಕುಲದಲ್ಲಿ ಹುಟ್ಟಿರಬಹುದು, ಆದರೆ ಎಲ್ಲ ಜನರು. ನನ್ನ ಸ್ವಂತ ಮಗ ಅಂತ ನನ್ನನ್ನು ಇಲ್ಲಿ ನಿಲ್ಲಿಸಿದ್ದೀರಿ ಎಂದು ನುಡಿದರು.
ಸಿದ್ದರಾಮಯ್ಯನವರೇ ಸಮಾವೇಶ ಮುಗಿದ ಕೂಡಲೇ ನಿಮ್ಮ ಪಕ್ಷ ಬೇರು ಸಮೇತ ಚಿದ್ರ ಚಿದ್ರವಾಗಲಿದೆ
ಸಿದ್ದರಾಮಯ್ಯನವರೇ ಈ ಚುನಾವಣೆಯಲ್ಲಿ ಸುನಾಮಿಯಾಗುತ್ತೆ ಅಂತೀರಾ.? ಸಿದ್ದರಾಮಯ್ಯನವರೇ ಚುನಾವಣೆವರೆಗು ಕಾಯಬೇಡಿ ಈ ಸಮಾವೇಶ ಮುಗಿದ ಕೂಡಲೇ ನಿಮ್ಮ ಪಕ್ಷ ಬೇರು ಸಮೇತ ಚಿದ್ರ ಚಿದ್ರವಾಗಲಿದೆ. ನೆಲ ಜಲದ ವಿಷಯದಲ್ಲಿ ನಾವು ಪಾಳೆಗಾರರಾಗಿ ಕೆಲಸ ಮಾಡಿದ್ದೇವೆ. ನಂಬಿದವರಿಗೆ ಬೆರಳು ಕೊಟ್ಟ ಸಮುದಾಯ ನಮ್ಮದು. ದೈವ ಭಕ್ತಿಗೆ ಕಣ್ಣುಕೊಟ್ಟಂತಹ ಬೇಡರ ಸಮುದಾಯ ನಮ್ಮದು. ರಾಮಾಯಣ ಬರೆದ ವಾಲ್ಮೀಕಿ ನಮ್ಮ ಸಮುದಾಯದವರು. ಬ್ರಿಟೀಷರಿಂದ ನಾವು ಪಾಳಗಾರಿಕೆ ಕಳೆದುಕೊಂಡಿದ್ದೇವೆ. ಬಿಜಾಪುರದ ಬೇಡರ ಲಕ್ಷ್ಮಣ ನಮ್ಮ ಸಮುದಾಯಕ್ಕೆ ಅಂದು ಶಕ್ತಿ ತುಂಬು ಕೆಲಸ ಮಾಡಿದರು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Sun, 20 November 22