
ಬಳ್ಳಾರಿ, ಅಕ್ಟೋಬರ್ 15: ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಬಹುಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಜಾನುವಾರು ವಿಮೆ ಮತ್ತು ಪರಿಹಾರದ ಹಣ ಸೇರಿದಂತೆ ₹16.5 ಕೋಟಿಗೂ ಅಧಿಕ ಮೊತ್ತವನ್ನು ಅರ್ಹ ರೈತರಿಗೆ ನೀಡದೆ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ ಸೇರಿದಂತೆ ಆರು ಜನರ ವಿರುದ್ಧ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಒಕ್ಕೂಟದ ಮಾಜಿ ನಿರ್ದೇಶಕ ಧನಂಜಯ ಹಾವಲ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. 2018ರಿಂದ 2026ರ ನಡುವಿನ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಕ್ಕೂಟಕ್ಕೆ ಹಾಲು ಪೂರೈಸುವ ರೈತರ ಜಾನುವಾರುಗಳಿಗೆ ಖಾಸಗಿ ವಿಮಾ ಕಂಪನಿಗಳ ಮೂಲಕ ವಿಮೆ ಮಾಡಿಸಲಾಗುತ್ತಿತ್ತು. ಈ ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ 60ರಷ್ಟನ್ನು ಒಕ್ಕೂಟ ಹಾಗೂ ಶೇ 40ರಷ್ಟನ್ನು ರೈತರು ಪಾವತಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಮೆ ಮಾಡಿಸಿದ್ದ ಜಾನುವಾರುಗಳು ಮೃತಪಟ್ಟ ಸಂದರ್ಭದಲ್ಲಿ ವಿಮಾ ಕಂಪನಿಗಳಿಂದ ದೊರೆಯುವ ಪರಿಹಾರದ ಹಣವನ್ನು ಸಂಬಂಧಪಟ್ಟ ರೈತರಿಗೆ ತಲುಪಿಸಬೇಕಿತ್ತು. ಆದರೆ, ರೈತರಿಗೆ ಸೇರಬೇಕಿದ್ದ ವಿಮಾ ಪರಿಹಾರದ ಹಣ ಹಾಗೂ ರೈತ ಕಲ್ಯಾಣ ಟ್ರಸ್ಟ್ನ ಹಣ ಸೇರಿದಂತೆ ಒಟ್ಟು ₹16.5 ಕೋಟಿಗೂ ಅಧಿಕ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ನೀಡದೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.
ರೈತರಿಗೆ ಸೇರಬೇಕಿದ್ದ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡುವ ಬದಲು, ಆರೋಪಿಗಳು ತಮ್ಮ ಪರಿಚಯಸ್ಥರಾದ ಕೆ. ಬಸವರಾಜ, ಕೆ. ಈರಮ್ಮ, ಸಾಗರಬಾಬು, ಸಾಗರ ರಾಣಿ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಣವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಹಾಲು ಒಕ್ಕೂಟ ಹಾಗೂ ರೈತರಿಗೆ ನಂಬಿಕೆದ್ರೋಹ ಎಸಗಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಬೇಕಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.
ದೂರಿನಲ್ಲಿ ಉಲ್ಲೇಖಿಸಿರುವವರಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ, ನಿವೃತ್ತ ಉಪ ವ್ಯವಸ್ಥಾಪಕ ಹಾಗೂ ಒಕ್ಕೂಟದ ನಿರ್ದೇಶಕ ಎಚ್. ಮರುಳಸಿದ್ದಪ್ಪ, ಆಡಳಿತ ಮತ್ತು ಯೋಜನೆಗಳ ಉಪ ವ್ಯವಸ್ಥಾಪಕ ವೆಂಕಟೇಶ್ ಜವಳಿ, ಪಶುವೈದ್ಯಾಧಿಕಾರಿ ಶಂಭುಕುಮಾರ್, ಡೆಪ್ಯುಟಿ ಮ್ಯಾನೇಜರ್ ಹನುಮಂತ ಗೌಡ ಹಾಗೂ ಅಕೌಂಟಂಟ್ ಸಹಾಯಕಿ ಉಮಾಮಹೇಶ್ವರಿ ಸೇರಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ರೈತರಿಗೆ ಕಡಿಮೆ ಹಣ ಸಿಗೋದು ಕರ್ನಾಟಕದಲ್ಲೇ!
ಜಾನುವಾರು ವಿಮೆ ಮತ್ತು ಪರಿಹಾರದ ಹಣ ರೈತರಿಗೆ ತಲುಪದೆ ಉಳಿದಿರುವ ಆರೋಪವು ಹಾಲು ಉತ್ಪಾದಕರ ವಲಯದಲ್ಲಿ ಮಹತ್ವದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ