
ಬಳ್ಳಾರಿ, ಜುಲೈ 17: ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಿನ್ನೆ (ಜುಲೈ 16) ರಾತ್ರಿ ನಡೆದಿದೆ. ನಬಿ ರಸೂಲ್ ಮೃತ ವ್ಯಕ್ತಿಯಾಗಿದ್ದು, ದುರ್ದೈವ ಅಂದರೆ ಮದುವೆಯ ರಿಸೆಪ್ಷನ್ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಇವರ ಉಸಿರು ನಿಂತಿದೆ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋಗಿದ್ದ ರಸೂಲ್ ಶವವಾಗಿ ಪತ್ತೆಯಾಗಿದ್ದಾರೆ.
ನಬಿ ರಸೂಲ್ ವಿಚ್ಛೇದಿತ ಮಹಿಳೆಯೋರ್ವಳನ್ನು ಪ್ರೀತಿಸುತ್ತಿದ್ದು, 15 ದಿನಗಳ ಹಿಂದೆ ಆಕೆಯನ್ನು ಕರೆದೊಯ್ದಿದ್ದರು. ಕೆಲವು ದಿನಗಳ ಬಳಿಕ ಇಬ್ಬರು ಮನೆಗೆ ವಾಪಸ್ ಆಗಿದ್ದರು. ಈ ವೇಳೆ ರಸೂಲ್ ಸಂಬಂಧಿಕರು ಒಪ್ಪಿ ಇವರ ಮದುವೆ ಮಾಡಿಸಿದ್ದರು. ನಿನ್ನೆ ಮನೆಯಲ್ಲಿಯೇ ರಸೂಲ್ ಮದುವೆ ನಡೆದಿತ್ತು. ಸಂಭ್ರಮದಿಂದ ಮದುವೆ ಮತ್ತು ರಿಸೆಪ್ಷನ್ ಕಾರ್ಯಕ್ರಮ ನಡೆದ ಕೆಲ ಸಮಯದ ಬಳಿಕ ಅಂದರೆ, ರಾತ್ರಿ 11.30ರ ಸುಮಾರಿಗೆ ಸ್ನೇಹಿತ ಕರೆದ ಅಂತಾ ರಸೂಲ್ ಹೊರಹೋಗಿದ್ದರು. ಆದರೆ ಅವರು ರಾತ್ರಿ 2 ಗಂಟೆ ಆದ್ರೂ ಬಂದಿರಲಿಲ್ಲ. ಹೀಗಾಗಿ ಮನೆ ಸುತ್ತ ಪೋಷಕರು ಮತ್ತು ಸಂಬಂಧಿಕರು ಹುಡುಕಾಡಿದಾಗ ಮನೆಯಿಂದ 700 ಮೀಟರ್ ದೂರದಲ್ಲಿ ರಸೂಲ್ ಶವ ಪತ್ತೆಯಾಗಿದೆ.
ಮಹಿಳೆಯ ಪೋಷಕರಿಂದ ಈ ಮದುವೆಗೆ ವಿರೋಧವಿತ್ತು, ಆಕೆಯ ಸಂಬಂಧಿಕರು ಈ ಹಿಂದೆ ರಸೂಲ್‌ಗೆ ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂಬ ವಿಚಾರವೂ ಬಯಲಾಗಿದೆ. ಹೀಗಾಗಿ ವಿಚ್ಛೇದಿತ ಮಹಿಳೆಯನ್ನ ಮದುವೆಯಾಗಿದ್ದೇ ಕೊಲೆಗೆ ಕಾರಣವಾಗಿರಬುದೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಸುಮನ್.ಡಿ ಪನ್ನೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Fri, 17 July 26