ಸಂಡೂರು ದೇಗುಲಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಗ್ರಾಮಸ್ಥರಿಂದಲೇ ವಿಶೇಷ ಅಭಿಯಾನ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಪುರಾತನ ಕುಮಾರಸ್ವಾಮಿ ದೇವಸ್ಥಾನ ಹಾಗೂ ಪಾರ್ವತಿ ದೇವಿ ದೇವಸ್ಥಾನಗಳನ್ನು ಉಳಿಸಲು ಸಂಡೂರು ಗ್ರಾಮಸ್ಥರು ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ. ದೇಗುಲಗಳನ್ನು ಗಣಿಗಾರಿಕೆಯ ಹೊಡೆತದಿಂದ ತಪ್ಪಿಸಲು ಯುನೆಸ್ಕೋ ಪಟ್ಟಿಗೆ ಸೇರಿಸುವುದಕ್ಕಾಗಿ ಅವರು ಈ ಅಭಿಯಾನ ನಡೆಸುತ್ತಿದ್ದಾರೆ.
ಬಳ್ಳಾರಿ, ನವೆಂಬರ್ 28: ತೀವ್ರ ಗಣಿಗಾರಿಕೆಯಿಂದ ನಲುಗುತ್ತಿರುವ ಸ್ವಾಮಿಮಲೈ ಬೆಟ್ಟದ 1,200 ವರ್ಷಗಳಷ್ಟು ಹಳೆಯದಾದ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಿ ದೇವಸ್ಥಾನಗಳನ್ನು ಉಳಿಸಲು ಸಂಡೂರು (Sandur) ತಾಲೂಕಿನ ಗ್ರಾಮಸ್ಥರು ಸಹಿ ಅಭಿಯಾನ ಆರಂಭಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (Archaeological Survey of India) ಒಳಪಟ್ಟಿರುವ ಈ ದೇವಾಲಯವನ್ನು ಯುನೆಸ್ಕೊ (UNESCO) ಪಟ್ಟಿಗೆ ಸೇರಿಸಲು ಗ್ರಾಮಸ್ಥರು, ಜನಸಂಗ್ರಾಮ ಪರಿಷತ್ತಿನ ಸಮಾಜ ಪರಿವರ್ತನಾ ಸಾನುದಯ ಸಮಾಜಮುಖಿ ಸಹಯೋಗದಲ್ಲಿ ಅಭಿಯಾನವನ್ನು ನಡೆಸಿದ್ದಾರೆ.
ಕುಮಾರಸ್ವಾಮಿ ದೇವಸ್ಥಾನವನ್ನು ವಿಜಯನಗರ ಸಾಮ್ರಾಜ್ಯದ ಮೊದಲು ನಿರ್ಮಿಸಲಾಯಿತು. ಈ ದೇಗುಲ ಮೀಸಲು ಅರಣ್ಯದೊಳಗೆ ನೆಲೆಗೊಂಡಿದೆ. ಆದಾಗ್ಯೂ, ಕಳೆದ ವರ್ಷ, ದೇವಾಲಯದ ಬಳಿ ತೀವ್ರವಾದ ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಅದರ ಒಂದು ಕಂಬವು ಕುಸಿದಿತ್ತು. ಕೆಲವು ಗ್ರಾಮಸ್ಥರು ಗಣಿ ಕಂಪನಿ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಈ ಕುರಿತು ಪರಿಶೀಲಿಸಲು ಪರಿಸರ ಮಂಡಳಿಯಿಂದ ಸಮಿತಿಯೊಂದನ್ನು ರಚಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಗ್ರಾಮಸ್ಥರ ತಂಡದ ಮುಖಂಡ ಶ್ರೀಶೈಲ್ ಆಲದಹಳ್ಳಿ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಸಂಡೂರಿನ ಸ್ಕಂದ ಜಾತ್ರೆ ನಡೆಯುತ್ತಿದ್ದು, ಇದಕ್ಕೆ ಬರುವ ಜನಸಾಗರವನ್ನು ಬಳಸಿಕೊಂಡು ಕುಮಾರಸ್ವಾಮಿ ದೇವಸ್ಥಾನ ಉಳಿಸುತ್ತಿದ್ದೇವೆ. ಜಾತ್ರೆ ವೇಳೆ ಎರಡು ದಿನಗಳ ಸಹಿ ಅಭಿಯಾನ ನಡೆಸುತ್ತಿದ್ದೇವೆ. ದೇವಸ್ಥಾನದ ಬಳಿ ಗಣಿಗಾರಿಕೆ ನಡೆಸುವುದನ್ನು ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಕೆಲವು ಗಣಿ ಕಂಪನಿಗಳು ನಿರ್ದೇಶನಗಳನ್ನು ಅನುಸರಿಸುತ್ತಿಲ್ಲ’ ಎಂದು ದೂರಿದ್ದಾರೆ.
ದೇವಾಲಯವನ್ನು ಯುನೆಸ್ಕೋ ಸಂರಕ್ಷಿತ ತಾಣವೆಂದು ಘೋಷಿಸಿದ ನಂತರ, ಯಾವುದೇ ಗಣಿಗಾರಿಕೆ ಅಥವಾ ಅರಣ್ಯೇತರ ಚಟುವಟಿಕೆಗಳನ್ನು ಅನುಮತಿ ದೊರೆಯುವುದಿಲ್ಲ. ನಮ್ಮ ತಂಡವು ಸಹಿ ಅಭಿಯಾನವನ್ನು ನಡೆಸುತ್ತಿರುವುದಕ್ಕೆ ಇದು ಮುಖ್ಯ ಕಾರಣ. ನಂತರ, ನಾವು ಯುನೆಸ್ಕೋ ಮುಖ್ಯ ಕಚೇರಿಗೆ ಪತ್ರಗಳನ್ನು ಕಳುಹಿಸಲು ಯೋಜಿಸಿದ್ದೇವೆ. ದೇವಸ್ಥಾನದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ಸಂರಕ್ಷಿತ ಅರಣ್ಯ ಎಂದು ತಕ್ಷಣವೇ ಘೋಷಿಸಲು ನಾವು ರಾಜ್ಯ ಸರ್ಕಾರವನ್ನು ಕೋರುತ್ತೇವೆ ಎಂದು ಅವರು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ.
ಇದನ್ನೂ ಓದಿ: ಚಾಲುಕ್ಯರ ಕಾಲದ ಕುಮಾರಸ್ವಾಮಿ ದೇವಸ್ಥಾನದ ಸುತ್ತ ಗಣಿಗಾರಿಕೆ! ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
ಸುಮಾರು 20,000 ಜನರು ಜ್ಞಾಪಕ ಪತ್ರಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ. ಒಮ್ಮೆ ಮಾಡಿದ ನಂತರ, ಪ್ರತಿಗಳನ್ನು ಯುನೆಸ್ಕೋ ಕೇಂದ್ರ ಕಚೇರಿಗೆ ಮತ್ತು ಇನ್ನೊಂದನ್ನು ಕರ್ನಾಟಕ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ಐತಿಹಾಸಿಕ ದೇವಾಲಯವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಏಕೈಕ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ