ಮತ್ತಷ್ಟು ವಿಳಂಬವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ
Bengaluru-Chennai Expressway: ಕರ್ನಾಟಕದ ಭಾಗಗಳಲ್ಲಿ ಅನೌಪಚಾರಿಕವಾಗಿ ಸಂಚಾರಕ್ಕೆ ಅವಕಾಶ ಒದಗಿಸಲಾಗಿದ್ದರೂ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸುಳಿವು ದೊರೆತಿದೆ. ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 18: ದಕ್ಷಿಣ ಭಾರತದ ಎರಡು ಮಹಾನಗರಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಮಹತ್ವಾಕಾಂಕ್ಷೆಯ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಲಿದೆ. ಎಕ್ಸ್‌ಪ್ರೆಸ್ ವೇ ಕಾಮಗಾರಿ ಮುಕ್ತಾಯಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಹಿಂದೆ 2025ರ ಆಗಸ್ಟ್ ಗಡುವು ವಿಧಿಸಲಾಗಿತ್ತು. ಆದರೆ, ಗಡುವಿಗಿಂತ ಸುಮಾರು ಒಂದು ವರ್ಷ ತಡವಾಗಿ, ಅಂದರೆ 2026 ರ ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಕಾರ, ನಿರ್ಮಾಣ ಕಾರ್ಯದಲ್ಲಿನ ಸವಾಲುಗಳು ವಿಳಂಬಕ್ಕೆ ಕಾರಣ ಎನ್ನಲಾಗಿದೆ.
262 ಕಿ.ಮೀ. ಉದ್ದದ ಈ ಎಕ್ಸ್‌ಪ್ರೆಸ್‌ವೇಯ ಕೇವಲ 71 ಕಿ.ಮೀ. ಕಾಮಗಾರಿ ಈವರೆಗೆ ಪೂರ್ಣಗೊಂಡಿದೆ. ಉಳಿದ ಭಾಗಗಳ ಕಾಮಗಾರಿ ಅಡೆತಡೆಗಳನ್ನು ಎದುರಿಸುತ್ತಿವೆ. ಕರ್ನಾಟಕ ಭಾಗದ ಹೆದ್ದಾರಿ ಕಾಮಗಾರಿಯನ್ನು 2024 ರ ಡಿಸೆಂಬರ್ನಲ್ಲಿ ಪೂರ್ಣಗೊಳಿಸಲಾಗಿತ್ತು. ನಂತರ ಅನೌಪಚಾರಿಕವಾಗಿ ವಾನಹ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದರೂ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾಮಗಾರಿ ಪ್ರಗತಿ ನಿಧಾನವಾಗಿದೆ.
ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಉಳಿದ ಕಾಮಗಾರಿ 2026 ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ದೃಢಪಡಿಸಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ. ಕರ್ನಾಟಕದಲ್ಲಿ 68 ಕಿ.ಮೀ ಉದ್ದದ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಕಳೆದ ತಿಂಗಳು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು, ಆದರೆ ಹೆದ್ದಾರಿ ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ.
260 ಕಿ.ಮೀ. ಉದ್ದದ ಈ ಎಕ್ಸ್‌ಪ್ರೆಸ್‌ವೇ ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ಮೂಲಕ ಚೆನ್ನೈ ಬಳಿಯ ಶ್ರೀಪೆರಂಬುದೂರು ತಲುಪುತ್ತದೆ. ಅತಿ ವೇಗದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಈ ಚತುಷ್ಪಥ ಕಾರಿಡಾರ್ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗವನ್ನು ಅನುಮತಿಸುತ್ತದೆ.
ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ
ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಸಲಾದ ಈ 17,900 ಕೋಟಿ ರೂ. ವೆಚ್ಚದ ಯೋಜನೆಯು ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಅವಧಿಯನ್ನು ಏಳು ಗಂಟೆಗಳಿಂದ ಕೇವಲ ಮೂರು ಗಂಟೆಗೆ ಇಳಿಸುವ ಮೂಲಕ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಅಪಘಾತದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ
ಈ ರಸ್ತೆಯಲ್ಲಿ ಈಗಾಗಲೇ ಪ್ರತಿದಿನ ಸುಮಾರು 1,600 ರಿಂದ 2,000 ವಾಹನಗಳು ಓಡಾಡುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Tue, 18 March 25