ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗದ ಮೇಲೆ ಕಣ್ಣಾಕಿದ ಕೇಂದ್ರ ಸರ್ಕಾರ!
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಜಾಗದ ಮೇಲೆ ಮೇಲಿಂದ ಮೇಲೆ ಕಣ್ಣು ಬೀಳುತ್ತಿದೆ. ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಮೀಸಲಾಗಿರುವ ವಿವಿ ಕ್ಯಾಂಪಸ್ನಲ್ಲಿ ಹಲವಾರು ಸಂಸ್ಥೆಗಳು ತಲೆ ಎತ್ತಿದ್ದು, ಕ್ಯಾಂಪಸ್ ಕಿರಿದಾಗಿದೆ. ಈಗ 100 ಎಕರೆ ಜಾಗ ಬೇಕೆಂದು ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಕೇಂದ್ರ 100 ಎಕರೆ ಕೊಡಿ ಎಂದು ಕೇಳಿದ್ಯಾಕೆ? ಪ್ಲ್ಯಾನ್ ಏನು? ಇದಕ್ಕೆ ವಿವಿ ಆಡಳಿ ಮಂಡಳಿ ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 05): ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ (Karnataka Universities) ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಪ್ರಮುಖವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. 1200 ಎಕರೆ ಜಾಗದಲ್ಲಿ ಸ್ಥಾಪನೆಯಾದ ಬೆಂಗಳೂರು ವಿಶ್ವವಿದ್ಯಾಲ ಕ್ರಮೇಣ ಕಿರಿದಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಎಕರೆ ಜಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳಿಗೆ ಬಿಟ್ಟುಕೊಡಲಾಗಿದೆ. ಈ ವಿಚಾರಕ್ಕೆ ವಿರೋಧವಿದ್ದು, ಇದರ ಮಧ್ಯೆ ಇದೀಗ ಮತ್ತೆ ಜ್ಞಾನಭಾರತಿ ಆವರಣದ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ. ಒಲಿಂಪಿಕ್ಸ್ ಟ್ರೈನಿಂಗ್ ಸೆಂಟರ್ಗೆ 100 ಎಕರೆ ಜಾಗ ಬೇಕು ಎಂದು ಕೇಂದ್ರ ಸರ್ಕಾರ ಬೇಡಿಕೆ ಇಟ್ಟಿದೆ. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಮುಖ್ಯಾಂಶಗಳು
- ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗಕ್ಕೆ ಕೇಂದ್ರ ಸರ್ಕಾರ ಬೇಡಿಕೆ
- ಒಲಿಂಪಿಕ್ಸ್ ಟ್ರೈನಿಂಗ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪ್ಲಾನ್
- ವಿಶ್ವವಿದ್ಯಾಲ ಕ್ಯಾಂಪಸ್ನಲ್ಲಿ ಜಾಗ ಕೊಡಲ್ಲ ಎಂದ ವಿವಿ ಆಡಳಿತ
- ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಕೇಂದ್ರ ನಡೆಗೆ ವಿರೋಧ
ಕ್ಯಾಂಪಸ್ನಲ್ಲಿ ಜಾಗ ಕೊಡಲ್ಲ ಎಂದ ವಿವಿ ಆಡಳಿತ
ಸದ್ಯದ ಮಾಹಿತಿ ಪ್ರಕಾರ ಈಗಾಗಲೇ ಕ್ಯಾಂಪಸ್ ಕಿರಿದಾಗಿದ್ದು, ಶೈಕ್ಷಣಿಕ ವಾತಾವರಣ ಕ್ಷೀಣಿಸುತ್ತಿದೆ. ಹೀಗಾಗಿ ಕೇಂದ್ರ ಈ ಪ್ರಸ್ತಾವನೆಯನ್ನ ನಿರಾಕರಿಸಲು ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ನಿರ್ಧರಿಸಿದೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕ್ಯಾಂಪಸ್ನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?
ಸದ್ಯ ಕ್ಯಾಂಪಸ್ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಯಾಂಪಸ್ಗೆ ಹೊಂದಿಕೊಂಡಂತೆ ಇರುವ 100 ಎಕರೆ ಜಾಗ ಬೇಕು ಅಂತಾ ರಾಜ್ಯ ಉನ್ನತ ಶಿಕ್ಷಣ ಪರಿಷತ್ಗೆ ಕೇಂದ್ರ ಬೇಡಿಕೆ ಇಟ್ಟಿದೆ. ಮುಂದಿನ ದಿನಗಳಲ್ಲಿ ವಿಶಾಲವಾದ ಜ್ಞಾನಭಾರತಿ ಆವರಣ ಉಳಿಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು




