ರೇಖಾ ಕದಿರೇಶ್ ಹತ್ಯೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ಘೋಷಣೆ
Rekha Kadiresh: ಎಲೆಕ್ಟ್ರಾನಿಕ್ ಸಿಟಿ, ಹೋಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹುಸ್ಕೂರು ಬಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಅಹೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ನಡೆದ 24 ಗಂಟೆಗಳಲ್ಲೇ ಆರೋಪಿಗಳ ಬಂಧಿಸಿದ ಕಾರಣ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ಘೋಷಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬಹುಮಾನ ಘೋಷಿಸಿ ತನಿಖಾ ತಂಡವನ್ನು ಶ್ಲಾಘಿಸಿದ್ದಾರೆ. ರೇಖಾ ಕದಿರೇಶ್ (Rekha Kadiresh) ಹತ್ಯೆ ನಡೆದ 24 ಗಂಟೆಗಳಲ್ಲಿ ಕಾಟನ್ ಪೇಟೆ ಪೊಲೀಸ್ ಸಿಬ್ಬಂದಿ, ಪಶ್ಚಿಮ ವಿಭಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ತನಿಖೆಗೆಂದು ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿದ್ದರು. ಕಾಟನ್ಪೇಟೆ ಇನ್ಸ್ಪೆಕ್ಟರ್ ಚಿದಾನಂದ ಮೂರ್ತಿ, ಸಿಟಿಮಾರ್ಕೆಟ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ, ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಪ್ರಶಾಂತ್, ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ, ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಚಂದ್ರಕಾಂತ್, ಚಾಮರಾಜಪೇಟೆ ಇನ್ಸ್ಪೆಕ್ಟರ್ ಲೋಕಾಪುರ ನೇತೃತ್ವದ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದವು.
ಕೊಲೆಗೆ ಸಂಬಂಧಿಸಿದಂತೆ ರಾತ್ರಿಯೇ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 39 ಜನರನ್ನು ಪೊಲೀಸರು ತಮ್ಮ ವಶದಲ್ಲಿಯೇ ಇರಿಸಿಕೊಂಡು ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ. ಇವನಿಂದ ಮತ್ತಷ್ಟು ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದರು.
ಎಲೆಕ್ಟ್ರಾನಿಕ್ ಸಿಟಿ, ಹೋಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹುಸ್ಕೂರು ಬಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಅಹೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೊಲೆ ಬಳಿಕೆ ಆರೋಪಿಗಳು ಒಂದೆಡೆ ನೆಲೆ ನಿಂತಿರಲಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಟೊದಲ್ಲಿ ತಿರುಗುತ್ತಲೇ ಇದ್ದರು. ನಸುಕಿನ ಮೂರೂವರೆ ಸುಮಾರಿಗೆ ಆರೋಪಿಗಳು ಆಟೊದಲ್ಲಿ ತಿರುಗಾಡುತ್ತಿರುವ ಮಾಹಿತಿ ಅರಿತ ಪೊಲೀಸರು ಆಟೊ ಬೆನ್ನುಹತ್ತಿದರು. ಆಸ್ಟಿಂಗ್ ಟೌನ್ನಲ್ಲಿ ಪೊಲೀಸರಿಗೆ ಮೊದಲಬಾರಿಗೆ ಆಟೊ ಬಗ್ಗೆ ಮಾಹಿತಿ ಸಿಕ್ಕಿತ್ತು.
ಆಸ್ಟಿನ್ ಟೌನ್ ಬಳಿಕ ಕೋರಮಂಗಲ, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ, ಕೊಡತಿ, ಚಿಕ್ಕನಾಯಕನಹಳ್ಳಿ, ಶ್ರಿರಾಮಪುರ, ರಾಜಾಜಿನಗರ, ವಿಜಯನಗರ, ರಾಜಾಜಿನಗರದಲ್ಲಿ ಆರೋಪಿಗಳು ಸಂಚರಿಸಿದ್ದರು. ಮೈಸೂರು ರಸ್ತೆಯ ಮೂಲಕ ಅರೋಪಿಗಳು ಸಂಚರಿಸಿರುವ ವಿಷಯ ಪೊಲೀಸರಿಗೆ ಪಕ್ಕಾ ಆಗಿತ್ತು. ಆದರೆ ಬೆಳಿಗ್ಗೆ ಒಂಬತ್ತು ಮುಕ್ಕಾಲಿಗೆ ಆರೋಪಿಗಳ ಜಾಡು ಪೊಲೀಸರಿಗೆ ತಪ್ಪಿಹೋಗಿತ್ತು.
ಸ್ವಲ್ಪ ಹೊತ್ತಿನ ನಂತರ ಮಾಗಡಿ ರಸ್ತೆಯಲ್ಲಿ ಆರೋಪಿಗಳ ಚಲನಚಲನದ ಮಾಹಿತಿ ಸಿಕ್ಕಾಗ ಪೊಲೀಸರು ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದರು. ಹಲವು ತಂಡಗಳೊಂದಿಗೆ ಆರೋಪಿಗಳ ಬೆನ್ನುಹತ್ತಿದರು. ಹನ್ನೆರಡು ಗಂಟೆ ವೇಳೆಗೆ ಸುಂಕದಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಆರೋಪಿಗಳು ಇರುವ ಮಾಹಿತಿಯನ್ನು ದೃಢಪಡಿಸಿಕೊಂಡ ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ಪೇಟೆ ಇನ್ಸ್ಪೆಕ್ಟರ್ ಚಿದಾನಂದಮೂರ್ತಿ ಆರೋಪಿಗಳನ್ನು ಗುರುತಿಸಿ, ಬಂಧಿಸಲು ಮುಂದಾದರು.
ಮದ್ಯಪಾನ ಮಾಡುತ್ತಿದ್ದ ಆರೋಪಿಗಳು ಸಬ್ಇನ್ಸ್ಪೆಕ್ಟರ್ ಕರಿಯಣ್ಣ ಮತ್ತು ಹೆಡ್ ಕಾನ್ಸ್ಟೆಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಪೊಲೀಸರು, ಅರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡು ಲಕ್ಷ್ಮೀ ಅಸ್ಪತ್ರೆಗೆ ದಾಖಲು ಮಾಡಿದರು. ಮಾಗಡಿ ರಸ್ತೆ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿತ್ತು.
ಇದನ್ನೂ ಓದಿ:
Rekha Kadiresh Murder ರೇಖಾ ನಾದಿನಿ ಮಾಲಾಳ ಹಿಸ್ಟರಿ ರೀ ಓಪನ್.. ಜೋಪಡಿ ರಾಜೇಂದ್ರ ಕೊಲೆಯಲ್ಲೂ ಈಕೆ ಆರೋಪಿ
ರೇಖಾ ಕದಿರೇಶ್ ಕೊಲೆ ಪ್ರಕರಣ: ರೌಡಿಶೀಟರ್ ಮನೆಗಳಿಗೆ ಹೋಗಿ ಎಚ್ಚರಿಕೆ ಕೊಟ್ಟ ಡಿಸಿಪಿ
( BBMP ex Corporator Rekha Kadiresh murder police announce 1.25 lakh prize for accused search team)
Published On - 9:58 pm, Mon, 12 July 21