Karnataka Elections: ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿ, ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್?
ಸರ್ಕಾರ ಬದಲಾದರೂ, ಸ್ಥಳೀಯ ಸಂಸ್ಥೆಗಳಾದ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಬಹುಶಃ ಮುಂದಿನ ವರ್ಷ ಲೋಕಸಭೆ ಚುನಾವಣೆ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು: ಸರ್ಕಾರ ಬದಲಾದರೂ, ಸ್ಥಳೀಯ ಸಂಸ್ಥೆಗಳಾದ ಬಿಬಿಎಂಪಿ (BBMP), ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ (Zilla and Taluk Panchayat) ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಬಹುಶಃ ಮುಂದಿನ ವರ್ಷ ಲೋಕಸಭೆ ಚುನಾವಣೆ (Lok Sabha Election) ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೌದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಲೋಕಸಭೆ ಚುನಾವಣೆಯ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ (Local Body Election) ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚುನಾವಣೆಗಳು ಈಗಾಗಲೇ ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಳಂಬವಾಗಿದೆ. ಈದೀಗ ಮತ್ತಷ್ಟು ವಿಳಂಬವಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದಿನ ಬಿಜೆಪಿ ಸರಕಾರ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಿ, ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿತ್ತು. ತನ್ನ ಶಾಸಕರ ಬೆಂಬಲಿಗರಿಗೆ ಅನುಕೂಲವಾಗುವಂತೆ ವಾರ್ಡ್‌ಗಳ ವ್ಯಾಪ್ತಿ ಅದಲು ಬದಲು ಮಾಡಿ ವಿಂಗಡಣೆ ಮಾಡಿದ್ದಲ್ಲದೆ, ಅದಕ್ಕೆ ತಕ್ಕಂತೆ ಮೀಸಲು ನಿಗದಿ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.
ಇನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆಯನ್ನು ನಮ್ಮ ಸರ್ಕಾರ ಪರಿಶೀಲಿಸುತ್ತದೆ ಈ ನಿಟ್ಟಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಲಾಗಿದೆ. ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಲು ನಾವು ಬದ್ಧರಾಗಿದ್ದು, ಅಧಿಕಾರಿಗಳು ಸಜ್ಜಾಗುವಂತೆ ಸೂಚಿಸಿದ್ದೇನೆ ಎಂದು ಬಿಬಿಎಂಪಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಾರ್ಡ್‌ಗಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೂ ಬಾಕಿ ಇದೆ. ಬಿಜೆಪಿ ಆಡಳಿತವು ನಡೆಸಿದ ಕಸರತ್ತಿನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಉದಾಹರಣೆಗೆ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲಾ ವಾರ್ಡ್‌ಗಳು ನಿರಂಕುಶವಾಗಿ ಮಹಿಳೆಯರಿಗೆ ಮೀಸಲಾಗಿವೆ ಎಂದು ಕಾಂಗ್ರೆಸ್ ಎತ್ತಿ ತೋರಿಸಿದೆ.
ಮಾರ್ಚ್ 31 ರ ಮೊದಲು ಒಬಿಸಿಗಳಿಗೆ ಮೀಸಲಾತಿ ಒದಗಿಸುವ ದಿನಾಂಕವನ್ನು ಒಳಗೊಂಡಂತೆ ಮೀಸಲಾತಿ ರಚನೆಯನ್ನು ನವೀಕರಿಸಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ಸರ್ಕಾರವು ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ. ಮುಂದಿನ ವಿಚಾರಣೆ ಜುಲೈ 4 ರಂದು ನಡೆಯಲಿದೆ, ಆದರೆ ರಾಜಕೀಯ ಮೀಸಲಾತಿಗೆ ಅರ್ಹರಾಗಿರುವ ಒಬಿಸಿಗಳನ್ನು ಲೆಕ್ಕಹಾಕಲು ಮತ್ತು ಗುರುತಿಸಲು ಯಾವುದೇ ಮಾರ್ಗಸೂಚಿಗಳಿಲ್ಲದ ಕಾರಣ ನವೀಕರಣವನ್ನು ನೀಡಲು ಸರ್ಕಾರವು ಸಿದ್ಧವಾಗಿಲ್ಲ. ಹೀಗಾಗಿ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತೇವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಬಿಜೆಪಿ ಪ್ರಬಲವಾಗಿ ಹೊರಹೊಮ್ಮಿರುವುದರಿಂದ ರಾಜಕೀಯವಾಗಿ ಬಿಬಿಎಂಪಿ ಚುನಾವಣೆ ಕಾಂಗ್ರೆಸ್‌ಗೆ ಸವಾಲಾಗಿದೆ. 28 ವಿಧಾನಸಭಾ ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಎಲ್ಲಾ ಮೂರು ಲೋಕಸಭಾ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಲೋಕಸಭೆ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಲು ಕಾಂಗ್ರೆಸ್ ನಾಯಕತ್ವ ಹಿಂದೇಟು ಹಾಕುತ್ತಿದೆ.
31 ಜಿಲ್ಲಾಪಂಚಾಯಿತಿಗಳು ಮತ್ತು 226 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ 135 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಹುಮತವನ್ನು ಗಳಿಸಿದೆ. ಇದರಿಂದ ಕಾಂಗ್ರೆಸ್ ಅನುಕೂಲವಾಗಲಿದೆ. ಆದರೆ ಪಂಚಾಯಿತಿ ವಾರ್ಡ್‌ಗಳ ಮೀಸಲಾತಿಯನ್ನು ಸರ್ಕಾರ ಇನ್ನೂ ಅಂತಿಮಗೊಳಿಸದ ಕಾರಣ ಚುನಾವಣೆ ವಿಳಂಬವಾಗಬಹುದು. ಸರ್ಕಾರ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಹೈಕೋರ್ಟ್ ಸೋಮವಾರ ಪ್ರಕರಣದ ವಿಚಾರಣೆ ನಡೆಸಿ ಜೂನ್ 28ಕ್ಕೆ ಮುಂದೂಡಿತು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬಗೊಳಿಸುವ ಪ್ರವೃತ್ತಿ ಇದೆ. ಆದಷ್ಟು ಬೇಗ ಅವುಗಳನ್ನು ನಡೆಸಲು ಅವಕಾಶ ನೀಡುವಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಬಿ ಬಸವರಾಜ್ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ