ರಹಸ್ಯ ಸ್ಥಳದಲ್ಲಿ ಜಾರಕಿಹೊಳಿ ಸಹೋದರರ ಸಭೆ.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ‘ಸಾಹುಕಾರ್’ಗೆ ಸಲಹೆ
ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಸಂಚಕಾರ ತಂದ ಸಿಡಿ ಕೇಸ್ ಮಹತ್ವದ ಘಟ್ಟ ತಲುಪಿದೆ. ಇದಾಗುತ್ತಿದ್ದಂತೆ ಮತ್ತೆ ಸಚಿವ ಸ್ಥಾನ ಪಡೆಯಲು ಗೋಕಾಕ್ ಸಾಹುಕಾರ ಭಾರಿ ಪ್ರಯತ್ನ ನಡೆಸ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಸಹೋದರರ ಜೊತೆ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ.
ಬೆಳಗಾವಿ: ಹೇಗಾದ್ರೂ ಮಾಡಿ ಮತ್ತೆ ಸಚಿವನಾಗಬೇಕು ಅನ್ನೋ ಹಠಕ್ಕೆ ಬಿದ್ದಿರೋ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ತಮ್ಮ ಮುಂದಿನ ನಡೆ ಕುರಿತು ಸಹೋದರರ ಜೊತೆ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ನಿನ್ನೆ ತಡರಾತ್ರಿ ನಡೆದ ಜಾರಕಿಹೊಳಿ ಬ್ರದರ್ಸ್ ಮೀಟಿಂಗ್ನಲ್ಲಿ ಸಹೋದರರು ರಮೇಶ್ ಜಾರಕಿಹೊಳಿಗೆ ಹಲವು ಸಲಹೆಗಳನ್ನ ನೀಡಿದ್ದಾರೆ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ಬೇಡ ಅಂತಾ ಸಲಹೆ ನೀಡಿದ್ದಾರೆ. ಮತ್ತೆ ಮಂತ್ರಿ ಸ್ಥಾನ ಸಿಗೋ ಸಾಧ್ಯತೆ ಹೆಚ್ಚಾಗಿದೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಮುಂದೆ ಹಲವು ಅಡ್ಡಿಗಳು ಎದುರಾಗಬಹುದು ಅಂತಾ ಹೇಳಿದ್ದಾರೆ.
ಹೈಕಮಾಂಡ್ ಭೇಟಿಗೂ ಮುನ್ನ ಬಿಎಸ್ವೈ, ಕಟೀಲು ಜೊತೆ ಚರ್ಚೆ? ಮುಂಬೈಗೆ ತೆರಳಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಮೈಸೂರಿಗೆ ತೆರಳಿ ಸುತ್ತೂರು ಮಠದ ಸ್ವಾಮೀಜಿ ಜೊತೆ ಚರ್ಚೆ ನಡೆಸಿದ್ದ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ತಮ್ಮಂದಿರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಜೊತೆ ರಹಸ್ಯ ಸ್ಥಳದಲ್ಲಿ ಚರ್ಚೆ ನಡೆಸಿದ್ರು. ಮೂವರು ಸಹೋದರರು ಮಾತ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಆಪ್ತರನ್ನೂ ಹೊರಗಿಟ್ಟು ಕೆಲ ವಿಚಾರಗಳನ್ನ ಚರ್ಚಿಸಿದ್ದಾರೆ. ಈ ವೇಳೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ರಮೇಶ್‌ಗೆ ಸಹೋದರರು ಸಲಹೆ ನೀಡಿದ್ದಾರೆ. ತನಗಾದ ಅನ್ಯಾಯದ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಆದ್ರೆ, ಇದಕ್ಕೂ ಮೊದಲು ಸಿಎಂ ಬಿಎಸ್‌ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿಯಾಗಲು ಸಲಹೆ ನೀಡಿದ್ದಾರಂತೆ.
ಸಹೋದರರ ಮಾತಿಗೆ ಸರಿ ನೋಡೋಣ ಅಂದಿರೋ ರಮೇಶ್ ಜಾರಕಿಹೊಳಿ, ಹೈಕಮಾಂಡ್ ಭೇಟಿಗೆ ನಿರ್ಧರಿಸಿದ್ದಾರೆ. ಇಂದು ಸಂಜೆ ಅಥವಾ ನಾಳೆ ಮುಂಬೈಗೆ ತೆರಳಿ ಮತ್ತೆ ದೇವೇಂದ್ರ ಫಡ್ನವಿಸ್ ಭೇಟಿಯಾಗೋ ಸಾಧ್ಯತೆ ಇದೆ. ಬಿಜೆಪಿ ಸೇರ್ಪಡೆ ವೇಳೆ ಹೈಕಮಾಂಡ್ಗೆ ಮನವರಿಕೆ ಮಾಡಿದ್ದ ಸಂಗತಿಗಳನ್ನ ಪುನರುಚ್ಚರಿಸಲಿದ್ದಾರೆ. ಬಿಜೆಪಿ ಸೇರ್ಪಡೆ ವೇಳೆ ಕೆಲವರಿಂದ ತಮಗೆ ತೊಂದರೆ ಆಗಲಿದೆ ಅಂತಾ ಹೇಳಿದ್ರು. ಈಗ ಆ ನಾಯಕರೇ ತನಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಅಂತಾ ದೂರು ನೀಡಲಿದ್ದಾರೆ. ಸಚಿವ ಸ್ಥಾನ ನೀಡೋ ಮೂಲಕ ತನಗಾದ ಅನ್ಯಾಯ ಸರಿಪಡಿಸದಿದ್ರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ ಅಂತಾ ರಮೇಶ್ ಹೇಳಿದ್ರು. ಸದ್ಯಕ್ಕೆ ಆತುರದ ನಿರ್ಧಾರ ಬೇಡ ಕಾದು ನೋಡೋಣ ಅಂತಾ ಸಹೋದರರು ಸಮಾಧಾನ ಪಡಿಸಿದ್ದಾರೆ ಅಂತಾ ಗೊತ್ತಾಗಿದೆ.
ಸಮ್ಮಿಶ್ರ ಸರ್ಕಾರ ಬೀಳಿಸಿ ಹೀರೋ ಅನ್ನಿಸಿಕೊಂಡಿದ್ದ ಸಾಹುಕಾರ್ಗೆ ಸಿಡಿ ಉರುಳು ಸುತ್ತಿಕೊಂಡಿತ್ತು. ಈ ಮೂಲಕ ಸಚಿವ ಸ್ಥಾನ ಕಳೆದುಕೊಂಡಿದ್ರು. ಈಗ ಮತ್ತೆ ಸಚಿವ ಸ್ಥಾನ ಪಡೆಯಲು ನಾನಾ ತಂತ್ರ ಹೆಣೀತಿದ್ದಾರೆ. ಅನೇಕ ಬಿಜೆಪಿ ನಾಯಕರ ಮನೆಗಳಿಗೆ ಎಡ ತಾಕುತ್ತಿದ್ದಾರೆ. ರಮೇಶ್ ಒಂದು ಸಾರಿ ಏನು ಹೇಳ್ತಾರೋ.. ಅದನ್ನ ಮಾಡಿ ತೋರಿಸ್ತಾರೆ ಅನ್ನೋ ಕಾರಣಕ್ಕೆ ಜಾರಕಿಹೊಳಿ ಬ್ರದರ್ಸ್ ಮೀಟಿಂಗ್ ಮಾಡಿ ಅವರನ್ನ ಸಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ನನಗಿಂತಲೂ 10 ಪಟ್ಟು ಪ್ರಬಲ ಹುಲಿಗಳು ನನ್ನ ಕುಟುಂಬದಲ್ಲಿದ್ದಾರೆ: ಶಾಸಕ ರಮೇಶ್ ಜಾರಕಿಹೊಳಿ ವ್ಯಾಖ್ಯಾನ