ಕರುನಾಡಿನಲ್ಲಿ ಮತ್ತೆ ಮಳೆರಾಯನ ಅಬ್ಬರ.. ಮಂತ್ರಾಲಯಕ್ಕೆ ದಿಗ್ಬಂಧನ ವಿಧಿಸಿದ್ದ ವರುಣ, ಈಗ ಸಂಚಾರಕ್ಕೆ ಮುಕ್ತವಾದ ರಸ್ತೆಗಳು
Karnataka Rain ರಾಜ್ಯದಲ್ಲಿ ಮಳೆರಾಯನ ಆರ್ಭಟ ಮತ್ತೆ ಆರಂಭವಾಗಿದ್ದು, ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಅದರಲ್ಲೂ ತುಂಗಭದ್ರೆಯ ತಟದಲ್ಲಿರೋ ಆ ಪುಣ್ಯ ಕ್ಷೇತ್ರದಲ್ಲಿ ಪ್ರವಾಹ ಸೃಷ್ಟಿಸಿದ್ರೆ, ಅನೇಕ ಕಡೆ ಜನಜೀವನ ಅಸ್ತವ್ಯಸ್ಥವಾಗಿದೆ.
ರಸ್ತೆಯಲ್ಲೇ ನದಿಯಂತೆ ಭೋರ್ಗರೆತ. ಬೀದಿ ಬೀದಿಗಳು ಕಾಲುವೆಗಳಂತಾಗಿವೆ. ಅಂಗಡಿಮುಂಗಟ್ಟುಗಳು ಮುಳುಗಿವೆ. ವಾಹನಗಳು ತೇಲಾಡ್ತಿವೆ. ಕಲ್ಯಾಣಮಂಟಪವಂತೂ ತುಂಬಿದ ಕಲ್ಯಾಣಿಯಂತಾಗಿತ್ತು. ಎಲ್ಲಿ ನೋಡಿದ್ರೂ ನೀರು. ಕಣ್ಣಹಾಯಿಸಿದಲ್ಲೆಲ್ಲಾ ಜಲರಾಶಿ. ಒಂದೇ ಒಂದು ಮಳೆ ಹೊಡೆತಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ.
ಹೌದು, ಮೊನ್ನೆ ರಾತ್ರಿ ಸುರಿದ ಎರ್ರಾಬಿರ್ರಿ ಮಳೆಗೆ ರಾಯಚೂರು ಬಳಿಯ ಮಂತ್ರಾಲಯದಲ್ಲಿ ಪ್ರವಾಹವೇ ಸೃಷ್ಟಿಯಾಗಿತ್ತು. 2009 ರಲ್ಲಿ ತುಂಗಾಭದ್ರೆಯ ಕೋಪದಿಂದ ಮಂತ್ರಾಲಯ ಮುಳುಗಿದ್ರೆ ಈ ಬಾರಿ ಅಲ್ಲೇ ಸುರಿದ ಮಳೆಯಿಂದಾಗಿಯೇ ರಾಯರ ಸನ್ನಿಧಿ ಜಲಾವೃತವಾಗಿತ್ತು. ಅಷ್ಟಕ್ಕೂ ಒಮ್ಮೆಲೇ ಜೋರುಮಳೆಯಾಗಿದ್ರಿಂದ ಹಳ್ಳ ಉಕ್ಕಿಹರಿದಿದೆ. ನದಿ ಸೇರಬೇಕಿದ್ದ ಹಳ್ಳದ ನೀರು ಮಂತ್ರಾಲಯಕ್ಕೆ ನುಗ್ಗಿತ್ತು. ಇದ್ರಿಂದ ಮುಖ್ಯರಸ್ತೆ, ಗೋಶಾಲೆ ಪಕ್ಕದ ರಸ್ತೆ, ರಾಯರ ಮೂಲ ಬೃಂದಾವನದ ಪ್ರಾಂಗಣ ಸೇರಿದಂತೆ ಎಲ್ಲಾ ಕಡೆಗೂ ಮೂರ್ನಾಕು ಅಡಿಗಳಷ್ಟು ನೀರು ನಿಂತಿತ್ತು. ಅದ್ರಲ್ಲೂ ಕರ್ನಾಟಕ ವಸತಿ ನಿಲಯಕ್ಕೂ ನೀರು ನುಗ್ಗಿದ್ರಿಂದ ಸಾವಿರಾರು ಭಕ್ತರು ಪರದಾಡುವಂತಾಗಿತ್ತು.
ಸಂಚಾರಕ್ಕೆ ಮುಕ್ತವಾದ ಮಂತ್ರಾಲಯದ ರಸ್ತೆಗಳು ಮಳೆ ಕಡಿಮೆಯಾಗಿದ್ರಿಂದ ಸುಕ್ಷೇತ್ರ ಮಂತ್ರಾಲಯದ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದೆ. ಮಂತ್ರಾಲಯದ ತಗ್ಗು ಪ್ರದೇಶಕ್ಕೆ ನುಗ್ಗಿದ ಮಳೆ ನೀರು ಹಳ್ಳಕ್ಕೆ ಸೇರಿದ್ದು, ಪ್ರಮುಖ ರಸ್ತೆಗಳು ಯಥಾಸ್ಥಿತಿಗೆ ತಲುಪಿವೆ. ಈಗ ರಾಯರ ದರ್ಶನಕ್ಕೆ ಭಕ್ತಾದಿಗಳಿಗೆ ಯಾವುದೇ ತೊಂದರೆ ಇಲ್ಲ. ಮತ್ತೊಂದ್ಕಡೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲೂ ಭಾರಿ ಮಳೆಯಾಗಿದ್ದು, ಮಸ್ಕಿಯ ಗಾಂಧಿನಗರ ಸಂಪೂರ್ಣ ಜಲಾವೃತವಾಗಿತ್ತು.
ಕೊಪ್ಪಳಕ್ಕೆ ‘ಶಾಕ್’ ಕೊಟ್ಟ ಮಳೆರಾಯ ಕೊಪ್ಪಳದಲ್ಲೂ ಮೊನ್ನೆಯಿಂದ ಬಿಟ್ಟು ಬಿಟ್ಟು ಮಳೆಯಾಗ್ತಿದೆ. ಈ ನಡುವೆ ಶಿವಪುರ ಗ್ರಾಮದಲ್ಲಿ ಪೈಪ್‌ಲೈನ್ ಕಾಮಗಾರಿ ವೇಳೆ ವಿದ್ಯುತ್‌ತಂತಿಯನ್ನ ಗದ್ದೆಯಲ್ಲೇ ಎಸೆದು ಹೋಗಿದ್ರು. ಅದೇ ತಂತಿಯಲ್ಲಿ ವಿದ್ಯುತ್ ಹರಿದಿದೆ, ಜತೆಗೆ ಮಳೆಯಾಗಿರೋದ್ರಿಂದ ಎಲ್ಲಾ ಕಡೆ ವಿದ್ಯುತ್ ಹರಿದಿದೆ. ಇದೇ ವೇಳೆ ಎಮ್ಮೆ ಮೇಯಿಸಲು ಹೋಗಿದ್ದ ಪುರುಷೊತ್ತಮ್ ಎಂಬಾತ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾನೆ. ಕಾಮಗಾರಿ ನಡೆಸುವವರ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರೆ. .
ಕಲಬುರಗಿ, ಬಾಗಲಕೋಟೆಯಲ್ಲೂ ಮಳೆ ನರ್ತನ ಇತ್ತ ಕಲಬುರಗಿ ಜಿಲ್ಲೆಯಲ್ಲಿ ನಿನ್ನೆ ಮುಂಜಾನೆಯಿಂದ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಅನೇಕ ಕಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಅದರಲ್ಲೂ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಅನೇಕ ರಸ್ತೆಗಳು ಜಲಾವೃತಗೊಂಡಿದ್ದವು. ಅಫಜಲಪುರ ಪಟ್ಟಣದ ಎಸ್ ಬಿ ಎಚ್ ಬ್ಯಾಂಕ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಕೆಲವಡೆ ಮನೆಗಳಿಗೆ ಕೂಡಾ ನೀರು ನುಗ್ಗಿದೆ.
ಇತ್ತ ಬಾಗಲಕೋಟೆಯಲ್ಲೂ ಮೊನ್ನೆ ರಾತ್ರಿಯಿಂದಲೂ ಬಿಟ್ಟು ಬಿಟ್ಟು ಮಳೆಯಾಗ್ತಿದೆ. ಇದೇ ಮಳೆ ಹಳ್ಳಗಳು ಉಕ್ಕಿಹರಿಯುತ್ತಿದ್ದು, ಇಳಕಲ್ ತಾಲೂಕಿನ ಕರಡಿ ಗ್ರಾಮದ ಬಳಿ ರಸ್ತೆಯೇ ಮುಳುಗಡೆಯಾಗಿತ್ತು. ಇದ್ರಿಂದ ಬೂದಿಹಾಳ,ತಾರಿಹಾಳ ಗ್ರಾಮಸ್ಥರು ಪರದಾಡುವಂತಾಗಿತ್ತು. ಇಳಕಲ್ ತಾಲೂಕಿನ ಪೋಚಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೋಣೆ ನೆಲಸಮವಾಗಿದೆ. ಮಳೆಯಿಂದ ಬಿಸಿಯೂಟ ಕೋಣೆಯ ಮೇಲ್ಛಾವಣಿ ಕುಸಿದಿದ್ದು, ಬಿಸಿಯೂಟ ತಯಾರಿಸುವ ಎಲ್ಲ ಪಾತ್ರೆ ಪಗಡೆಗಳು ನಜ್ಜುನುಜ್ಜಾಗಿದೆ.
ಗದಗ ಜಿಲ್ಲೆಯ ಹಲವಡೆ ರಾತ್ರಿಯಿಡೀ ಮಳೆಯಾಗಿದ್ದು, ಗಜೇಂದ್ರಗಡ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗೇ ಯಾದಗಿರಿ, ವಿಜಯಪುರದಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಒಟ್ನಲ್ಲಿ ಮುಂಗಾರಿನ ಸಿಂಚನ ಉತ್ತರ ಕರ್ನಾಟಕದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ರೆ, ಕೆಲವು ಕಡೆ ಪ್ರವಾಹವನ್ನೇ ಸೃಷ್ಟಿಸಿದೆ.
ಇದನ್ನೂ ಓದಿ: ಇಂದಿನಿಂದ ಮಂತ್ರಾಲಯ ಮಠ ಓಪನ್.. ರಾಯರ ದರ್ಶನಕ್ಕೆ ಮುಗಿಬಿದ್ದ ಭಕ್ತರು
Published On - 7:33 am, Mon, 28 June 21