ಹುಬ್ಬಳ್ಳಿ, ಡಿಸೆಂಬರ್ 08: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ ಹತ್ತು ದಿನಗಳ ಚಳಿಗಾಲದ ಅಧಿವೇಶನ (Winter Session) ಆರಂಭವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರವೇ ನಾಳೆ ಬೆಳಗಾವಿಗೆ ಶಿಫ್ಟ್ ಆಗುತ್ತಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹರಿಹಾಯಲು ಸಜ್ಜಾಗಿವೆ. ಇನ್ನು ನಾಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕೂಡ ಕೆಲವರು ಕಾದಿದ್ದಾರೆ. ಆದರೆ ಯಾವುದೇ ವಿಷಯ ಇಟ್ಟುಕೊಂಡು ಧರಣಿ ನಡೆಸಿ ಕಾಲಹರಣ ಮಾಡಬಾರದು. ಅಭಿವೃದ್ಧಿಯತ್ತ ಗಮನಹರಿಸುವಂತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎಲ್ಲಾ ಪಕ್ಷದವರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಅಧಿವೇಶನ ಅರ್ಥಪೂರ್ಣವಾಗಿ ನಡೆಯಬೇಕೆಂಬುದು ನಮ್ಮ ಉದ್ದೇಶ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು 20 ಕೋಟಿ ರೂ. ಖರ್ಚು ಮಾಡಿ ಸದನ ನಡೆಸಲಾಗುತ್ತಿದೆ. ಹೀಗಾಗಿ ಎರಡೂ ವಾರಗಳಲ್ಲಿ 4 ದಿನ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು ಮೀಸಲು. ಮಂಗಳವಾರ, ಬುಧವಾರ ಸುದೀರ್ಘವಾಗಿ ಚರ್ಚಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಶಿವಸೇನೆ ಬೆಂಬಲ
ಮಹದಾಯಿ, ತುಂಗಭದ್ರಾ, ಕೃಷ್ಣಾ ಸೇರಿ ಹಲವು ನೀರಾವರಿ, ಅಲ್ಲದೆ ಬೆಂಗಳೂರು ಹೊರತುಪಡಿಸಿದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಬೇಕು. ಪರಿಷತ್‌ನ 44 ಸದಸ್ಯರುಗಳೆಲ್ಲರೂ ಚರ್ಚೆಯಲ್ಲಿ ಭಾಗಿಯಾಗಬೇಕು. ನಾಳೆ ಆಡಳಿತ ಪಕ್ಷ, ವಿರೋಧ ಪಕ್ಷಗಳ ಎಲ್ಲಾ ಸದಸ್ಯರುಗಳ ಸಭೆ ಕರೆಯಲಾಗಿದೆ. ಯಾವುದೇ ವಿಷಯ ಇಟ್ಟುಕೊಂಡು ಧರಣಿ ನಡೆಸಿ ಕಾಲಹರಣ ಮಾಡಬಾರದೆಂದು ನಾಳೆಯ ಸಭೆಯಲ್ಲಿ ತಿಳಿಸಲಾಗುತ್ತದೆ ಎಂದಿದ್ದಾರೆ.
ಇಂದು ಸ್ಪೀಕರ್ ಯು.ಟಿ.ಖಾದರ್ ಬೆಳಗಾವಿ ಸುವರ್ಣಸೌಧ ಪರಿಶೀಲನೆ ಮಾಡಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಡಿಸಿ ರೋಷನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಮಾತನಾಡಿದ ಯು.ಟಿ.ಖಾದರ್, ಸುವರ್ಣಸೌಧದ ಸಭಾಂಗಣದ ಸ್ಪೀಕರ್ ಪೀಠ ವಿಧಾನಸೌಧದ ಮಾದರಿಯಲ್ಲೇ ನವೀಕರಣ ಆಗಿದೆ. ಡಿಸಿಎಂ, ಸಿಎಂ ಸಲಹೆ ಪಡೆದು ರೋಜ್ ವುಡ್ ಬಳಸಿ ನವೀಕರಣ ಮಾಡಲಾಗಿದೆ ಎಂದರು.
6 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಸಹಯೋಗದಿಂದ ಸುಮಾರು 10 ಕಮಿಟಿ ರಚಿಸಲಾಗಿದೆ. ಪ್ರತಿಭಟನೆ ಮಾಡುವವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕ ವರ್ಗಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು ಅಧಿವೇಶದಲ್ಲಿ ಭಾಗಿಯಾಗಿ 100 ವರ್ಷ ಕಳೆದಿದೆ. ಮಹಾತ್ಮ ಗಾಂಧಿ ಭಾವಚಿತ್ರ ಇರುವ ಎಜ್ಸಿಬಿಷನ್ ಮಾಡಲಾಗಿದೆ. ಚಿಲ್ಡ್ರನ್ಸ್ ಸೈನ್ಸ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಡೀ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಇದು ಸ್ವಾಭಿಮಾನದ ಸುವರ್ಣಸೌಧ, ಆದರೆ ಹೆಚ್ಚಿನ ಆದ್ಯತೆ ಈ ಭಾಗಕ್ಕೆ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಹಿಮಾಚಲ ಪ್ರದೇಶ, ನಾಗಪುರದಲ್ಲೂ ಎರಡು ವಿಧಾನಸಭೆ ಇದೆ. ಶಾಶ್ವತವಾಗಿ ಶಾಸಕರ ಭವನ ಮಾಡುವ ಯೋಚನೆ ಇದೆ. ಲೋಕೋಪಯೋಗಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜು: ಊಟ, ವಸತಿ, ಇತರ ವ್ಯವಸ್ಥೆಗೆ ಸಿದ್ಧತೆ ಹೇಗಿದೆ ನೋಡಿ
ಅನುಭವ ಮಂಟಪದ ಬಿಲ್ ಬಂದ ಕೂಡಲೇ ಮಾಹಿತಿ ನೀಡುತ್ತೇವೆ. ಚಿತ್ರಕಲಾ ಪರಿಷತ್ನಿಂದ ಆ ಕಲಾಕೃತಿ ಮಾಡಲಾಗಿದೆ. ಸುವರ್ಣಸೌಧದ ವಿಧಾನಸಭಾ ಸಭಾಧ್ಯಕ್ಷದ ಪೀಠ ಕರ್ನಾಟಕ ರಾಜ್ಯ ಅರಣ್ಯ ನಿಗಮ ಸಿದ್ದಪಡಿಸಿದೆ. ಇದಕ್ಕೆ ಅಂದಾಜು 45 ಲಕ್ಷ ರೂ. ವೆಚ್ಚ ತಗುಲಿದೆ. ಒಟ್ಟು 25 ಕೋಟಿ ರೂ. ಬೆಳಗಾವಿ ಅಧಿವೇಶಕ್ಕೆ ಖರ್ಚು ಆಗಲಿದೆ ಎಂದು ಹೇಳಿದ್ದಾರೆ.
ಬೆಳಗಾವಿ ರಾಜ್ಯದ 2ನೇ ರಾಜಧಾನಿ ಆಗುತ್ತಾ ಎಂಬ ವಿಚಾರವಾಗಿ ಮಾತನಾಡಿದ್ದು, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕೇಳಬೇಕು. ಬೆಳಗಾವಿ 2ನೇ ರಾಜಧಾನಿ ಆದರೆ ನನಗೂ ಬಹಳ ಸಂತಸ. ನನ್ನ ಸಲಹೆಯನ್ನು ಅಲ್ಲಿ ಹೇಳುತ್ತೇನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.