ಬೆಳಗಾವಿ: ಸಿಬಿಐ ದಾಳಿಯಾದ ಕೆಲವೇ ದಿನಗಳಲ್ಲಿ ಕಂಟೋನ್ಮೆಂಟ್ ಬೋರ್ಡ್ ಸಿಇಒ ಅನುಮಾನಾಸ್ಪದ ಸಾವು
2019ರ ಉದ್ಯೋಗಿಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ಇತ್ತೀಚೆಗೆ ದಾಳಿ ನಡೆಸಿತ್ತು. ಇದಾದ ಕೆಲವೇ ದಿನಗಳಲ್ಲಿ ಕಂಟೋನ್ಮೆಂಟ್ ಬೋರ್ಡ್ ಸಿಇಒ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿ, ನವೆಂಬರ್ 25: ಬೆಳಗಾವಿ ದಂಡು ಮಂಡಳಿಯ (Belagavi Cantonment Board) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ ಆನಂದ್ (K Anand) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರ ಮೃತದೇಹ ಶನಿವಾರ ಬೆಳಗ್ಗೆ ದಂಡು ಮಂಡಳಿಯ ಕ್ಯಾಂಪಸ್ನಲ್ಲಿರುವ ಅಧಿಕೃತ ಕ್ವಾರ್ಟರ್ಸ್ನಲ್ಲಿ ಪತ್ತೆಯಾಗಿದೆ. ಚೆನ್ನೈ ಮೂಲದ ಐಡಿಇಎಸ್ ಶ್ರೇಣಿಯ ಅಧಿಕಾರಿ ಆನಂದ್ ಅವರು (40) ಸುಮಾರು ಒಂದೂವರೆ ವರ್ಷದ ಹಿಂದೆ ನೇಮಕಗೊಂಡಿದ್ದರು. ಅವರು ಒಂಟಿಯಾಗಿ ವಾಸವಾಗಿದ್ದರು.
ಶನಿವಾರ ಬೆಳಗ್ಗೆ ನಿತ್ಯ ಕೆಲಸ ನಿಮಿತ್ತ ಸಿಬ್ಬಂದಿ ಕ್ವಾರ್ಟರ್ಸ್‌ಗೆ ಬಂದಾಗ ಆನಂದ್ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
2019ರ ಉದ್ಯೋಗಿಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ಇತ್ತೀಚೆಗೆ ದಾಳಿ ನಡೆಸಿತ್ತು.
ಇದನ್ನೂ ಓದಿ: ನೇಮಕಾತಿ ಅಕ್ರಮ ಆರೋಪ: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ದಾಳಿ
ನೇಮಕಾತಿ ಅಕ್ರಮ ವಿಚಾರ ಇತ್ತೀಚೆಗೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಖುದ್ದು ಸಿಬಿಐ ಅಧಿಕಾರಿಗಳೇ ಬಂದಿದ್ದರು. ಸ್ಥಳೀಯ ಮಟ್ಟದ ಅಧಿಕಾರಿಗಳನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ದಂಡು ಮಂಡಳಿಯ ವಿರುದ್ಧ, ಕ್ಲರ್ಕ್ ಹಾಗೂ ಸ್ಟೇನೋಗ್ರಾಫರ್ ಪರೀಕ್ಷೆಯಲ್ಲೂ ಸಹ ಅಕ್ರಮದ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನೂ ಪರಿಶೀಲನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Sat, 25 November 23