ಕಾಂಗ್ರೆಸ್ ಸಾಗರದಷ್ಟು ಬೆಳೆದಿದ್ದರೂ ಯಾರಿಗೂ ಉಪಯೋಗವಿಲ್ಲ: ಬಿಎಸ್ ಯಡಿಯೂರಪ್ಪ

TV9 Digital Desk

| Edited By: ganapathi bhat

Updated on: Nov 21, 2021 | 9:16 PM

ಕನಿಷ್ಠ 15 ಸ್ಥಾನಗಳಲ್ಲಿ ಗೆದ್ದು ಪರಿಷತ್‌ನಲ್ಲಿ ಬಹುಮತ ಪಡೆಯುತ್ತೇವೆ. ಯಾರ ಹಂಗಿಲ್ಲದೆ ಕೆಲಸ ಮಾಡುವ ಅವಕಾಶ ನಮಗೆ ಸಿಗುತ್ತೆ. ಬೆಳೆ ನಾಶವಾದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಾಗರದಷ್ಟು ಬೆಳೆದಿದ್ದರೂ ಯಾರಿಗೂ ಉಪಯೋಗವಿಲ್ಲ: ಬಿಎಸ್ ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ

ಬೆಳಗಾವಿ: ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಯಾವುದೋ ಕಾರಣಕ್ಕೆ ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಚುನಾವಣೆ ‌ಬಳಿಕ ರಾಜ್ಯ ಪ್ರವಾಸ ಮಾಡಿ‌ ಪಕ್ಷ ಸಂಘಟಿಸ್ತೇನೆ. ರಾಜ್ಯಾದ್ಯಂತ ಸಂಚರಿಸಿ ವಿವಿಧ‌ ಮೋರ್ಚಾ ಬಲ‌ ಪಡಿಸ್ತೇವೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕಿದೆ. ಮುಂಬರುವ ವಿಧಾನಸಭೆ ಚುನಾವಣೆ ನಮಗೆ ಸವಾಲು. ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಹೋಗಿದ್ದಾರೆ ಅಂದಿದ್ದಾರೆ. ದಲಿತರಿಗೆ ಸಿದ್ದರಾಮಯ್ಯ ಅಪಮಾನವನ್ನು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಕೂಡಲೇ ಕ್ಷಮೆಯಾಚಿಸಲಿ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು (ನವೆಂಬರ್ 21) ವಾಗ್ದಾಳಿ ನಡೆಸಿದ್ದಾರೆ.

ಪರಿಷತ್​​ನ 25 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ಎರಡೆರಡು ಸ್ಥಾನ ಇದ್ದ ಕಡೆ ಒಂದೊಂದೇ ಅಭ್ಯರ್ಥಿ ಹಾಕಿದ್ದೇವೆ. ನಾವು ಕನಿಷ್ಠ 15 ಸ್ಥಾನಗಳಲ್ಲಿ ಗೆದ್ದು ಪರಿಷತ್‌ನಲ್ಲಿ ಬಹುಮತ ಪಡೆಯುತ್ತೇವೆ. ಯಾರ ಹಂಗಿಲ್ಲದೆ ಕೆಲಸ ಮಾಡುವ ಅವಕಾಶ ನಮಗೆ ಸಿಗುತ್ತೆ. ಬೆಳೆ ನಾಶವಾದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜನಸ್ವರಾಜ್ ಯಾತ್ರೆ ಅಲ್ಲ ಜನ ಬರ್ಬಾದ್ ಯಾತ್ರೆ ಎಂಬ ಸಿದ್ದರಾಮಯ್ಯ ಟ್ವೀಟ್​​ಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ. ನಿಮ್ಮ ಯೋಗ್ಯತೆಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಲು ಆಗಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಧ್ಯೆ ಭಿನ್ನಾಭಿಪ್ರಾಯ ಇದೆ. ಭಿನ್ನಾಭಿಪ್ರಾಯದಿಂದ ಅಭ್ಯರ್ಥಿ ಆಯ್ಕೆ ಮಾಡಲು ಆಗಿಲ್ಲ. ಜನ ಬೆಂಬಲ ಇಲ್ಲವೆಂದು ಗೊತ್ತಾದ ಮೇಲೆ ಮಾತಾಡ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮನಬಂದಂತೆ ಮಾತಾಡ್ತಾರೆ ಎಂದು ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಹಣ, ಹೆಂಡ, ಜಾತಿ ವಿಷ ಬೀಜವನ್ನು ಬಿತ್ತಿ ಕಾಂಗ್ರೆಸ್​ನವರು ಚುನಾವಣೆ ಗೆಲ್ಲುತ್ತಿದ್ರು. ಮೋದಿ 8 ವರ್ಷದಲ್ಲಿ ವಿಶ್ವವೇ ತಿರುಗಿನೋಡುವಂತೆ ಮಾಡಿದ್ದಾರೆ. ಕಾಂಗ್ರೆಸ್ ಸಾಗರದಷ್ಟು ಬೆಳೆದಿದ್ದರೂ ಯಾರಿಗೂ ಉಪಯೋಗವಿಲ್ಲ. ಪ್ರಧಾನಿ ಮೋದಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಟಾಯ್ಲೆಟ್​, ಮನೆ ನಿರ್ಮಾಣ, ನೀರು ಪೂರೈಕೆಗೆ ಒತ್ತು ನೀಡಿದ್ದಾರೆ ಎಂದು ಜನಸ್ವರಾಜ್ ಸಮಾವೇಶದಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯಾದ್ಯಂತ ಮಳೆಯಾಗುತ್ತಿರುವುದರಿಂದ ಕೇಂದ್ರದ ತಂಡ ಬರಲಿ. ಕೇಂದ್ರ, ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಅವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ದೇಶದ ಜನ ದೊಡ್ಡ ಪಾಠ ಕಲಿಸಲಿದ್ದಾರೆ: ಜಗದೀಶ್ ಶೆಟ್ಟರ್ ವಾಗ್ದಾಳಿ ಕಾಂಗ್ರೆಸ್​​ ನಾಯಕರಿಗೆ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆ ಇದೆ. ಆದರೆ ಸಿದ್ದರಾಮಯ್ಯ ವರ್ಸಸ್ ಡಿ.ಕೆ.ಶಿವಕುಮಾರ್ ಇವರಿಬ್ಬರ ಮಧ್ಯೆ ತಮ್ಮದೂ ಇರಲಿ ಅಂತ ಡಾ.ಪರಮೇಶ್ವರ್ ಇದ್ದಾರೆ. ಇಮ್ರಾನ್ ಖಾನ್ ತಮ್ಮ ಸಹೋದರ ಎಂದು ಸಿಧು ಹೇಳ್ತಾರೆ. ಅಂಥವನನ್ನು ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ನಾಶವಾಗುತ್ತೆ. ಪಂಜಾಬ್​ನಲ್ಲಿ ಆ ಸಿಧುನಿಂದ ಕಾಂಗ್ರೆಸ್ ಸರ್ವನಾಶ ಆಗುತ್ತೆ. ರಾಜ್ಯದಲ್ಲಿ ಈ ಸಿದ್ದುವಿನಿಂದ ಕಾಂಗ್ರೆಸ್ ಸರ್ವನಾಶವಾಗುತ್ತೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನವರಿಗೆ ಮೋದಿ ನಾಯಕತ್ವ ನೋಡಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಪಂಜಾಬ್​​ನಲ್ಲೋ ರಾಜಸ್ಥಾನದಲ್ಲೋ ಇದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಮೋದಿ ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ. ರೈತನ ಆದಾಯ ದ್ವಿಗುಣಗೊಳಿಸಲು ಕೃಷಿ ಕಾನೂನು ತಂದ್ದಿದ್ರು. ನಂಜುಂಡಸ್ವಾಮಿ ವರದಿ ಅನುಷ್ಠಾನಕ್ಕೆ ಕಾಂಗ್ರೆಸ್ ಬಿಡಲಿಲ್ಲ. ರೈತರನ್ನು ಮುಂದೆ ಬಿಟ್ಟು ಕೇಂದ್ರ ಸರ್ಕಾರಕ್ಕೆ ಅಡ್ಡಿಪಡಿಸಿದರು. ಕೃಷಿ ಕಾನೂನು ವಾಪಸ್ ಆಗಿದ್ದರಿಂದ ತೊಂದರೆಯಾಗುತ್ತದೆ. ಆದರೆ ಕಾಂಗ್ರೆಸ್​ ಪಕ್ಷಕ್ಕೆ ಇದ್ಯಾವುದು ಮುಖ್ಯ ಅಲ್ಲ. ಕಾಂಗ್ರೆಸ್​ ಪಕ್ಷಕ್ಕೆ ದೇಶದ ಜನ ದೊಡ್ಡ ಪಾಠ ಕಲಿಸಲಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಮಾತನಾಡಿದ್ದಾರೆ.

ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರೇ ಮಾಲೀಕರು: ಸಿಟಿ ರವಿ ಕಾಂಗ್ರೆಸ್​, ಜೆಡಿಎಸ್ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ಕೆಲವು ಪಕ್ಷಗಳು ವಾರಸುದಾರಿಕೆ ಮೇಲೆ ಬರುತ್ತವೆ. ಕಾಂಗ್ರೆಸ್​ ಪಕ್ಷಕ್ಕೆ ಮೊದಲು ನೆಹರು ಹಾಗೂ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಡಿಎನ್ಎ ಮೂಲಕ ಓನರ್ ಶಿಪ್ ಎಂದು ಸಿ.ಟಿ.ರವಿ ಟೀಕೆ ಮಾಡಿದ್ದಾರೆ. ರಾಜ್ಯದಲ್ಲೂ ಒಂದು ಪಕ್ಷ ಇದೆ, ದೊಡ್ಡಗೌಡ್ರು, ಸಣ್ಣಗೌಡ್ರು, ಮರಿ ಗೌಡ್ರು ಇಲ್ಲೂ ಡಿಎನ್​ಎ ಮೂಲಕ ಪಕ್ಷದ ಮಾಲೀಕತ್ವ. ಆದರೆ ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರೇ ಮಾಲೀಕರು. ಧ್ವಜ ಕಟ್ಟಿದವನು ಬಿಜೆಪಿಯಲ್ಲಿ ಪ್ರಧಾನಮಂತ್ರಿ ಆಗಬಹುದು ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ತಂದೆಗೆ, ಮಧ್ಯಾಹ್ನ ಮಗನಿಗೆ, ಸಂಜೆ ಸೊಸೆಗೆ ನಮಸ್ಕಾರ ಮಾಡಬೇಕು: ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada