ಕೊಲ್ಲುವಾಗ ಭ್ರೂಣ ಅಮ್ಮಾ ಅಮ್ಮಾ ಎಂದು ಕೂಗತ್ತೆ: ಸದನದಲ್ಲಿ ಗದ್ಗದಿತರಾದ ಉಮಾಶ್ರೀ
ಕರ್ನಾಟಕದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಇನ್ನು ಇದೇ ವಿಚಾರವಾಗಿ ಇಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು. ಕಾಂಗ್ರೆಸ್ ಪರಿಷತ್ ಸದಸ್ಯೆ ಉಮಾಶ್ರೀ ಅವರು ಭ್ರೂಣ ಹತ್ಯೆ ಬಗ್ಗೆ ಪ್ರಸ್ತಾಪಿಸಿ ಕಣ್ಣೀರಿಟ್ಟಿರುವ ಪ್ರಸಂಗ ನಡೆದಿದೆ.
ಬೆಳಗಾವಿ, (ಡಿಸೆಂಬರ್ 12): ಕರ್ನಾಟಕದಲ್ಲಿ ಭ್ರೂಣ ಮತ್ತೆ ಹಾಗೂ ಹತ್ಯೆ ಪ್ರಕರಣ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ (Belagavi Winter Session) ಪ್ರತಿಧ್ವನಿಸಿದೆ. ಪರಿಷತ್ನಲ್ಲಿಂದು ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯೆ ಉಮಾಶ್ರೀ (umashree) ಪ್ರಸ್ತಾಪಿಸಿದ್ದು, ಕೊಲ್ಲುವಾಗ ಭ್ರೂಣ (foeticide) ಅಮ್ಮಾ ಅಮ್ಮಾ ಎಂದು ಕೂಗುತ್ತೆ. ಮಗು ನನ್ನ ಕಾಪಾಡಿ ಎಂದು ಕೂಗತ್ತೆ. ಆದರೆ ಕೇಳುವುದಕ್ಕೆ ಧ್ವನಿನೇ ಇಲ್ವಲ್ಲಾ ಎಂದು ಹೇಳುತ್ತಾ ಗದ್ಗದಿತರಾದರು.
ಗಮನ ಸೆಳೆಯುವ ಸೂಚನೆ ಅಡಿ ಭ್ರೂಣ ಹತ್ಯೆ ವಿಚಾರ ಪ್ರಸ್ತಾಪಿಸಿದ ಉಮಾಶ್ರೀ, ಹೆಣ್ಣು ಬ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಕೊಲ್ಲಲು ಮಚ್ಚು ಇನ್ನೊಂದು ಬೇಕಿಲ್ಲ, ಕೇವಲ ಯಂತ್ರದ ಮೂಲಕ ಭ್ರೂಣ ತೆಗೆದು ಹತ್ಯೆ ಮಾಡಲಾಗುತ್ತಿದೆ. ಹೆಣ್ಣು ಇಲ್ಲದೆ ವರ್ತಮಾನ, ಭೂತ, ಭವಿಷ್ಯ ಇಲ್ಲ. ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನು ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತೆ. ಆದರೆ ಅದನ್ನ ತೆಗೆದುಕೊಂಡು ಹೋಗಿ ಕಾವೇರಿ ಒಡಲಿಗೆ ಸೇರಿಸುತ್ತಾರೆ. ಇದನ್ನು ತಡೆಗೆ ಕಠಿಣ ಕಾನೂನು ಇಲ್ಲ. ಹಾಗಾಗಿ ಇದು ನಡೆಯುತ್ತಿದೆ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ: ಮೇಲುಕೋಟೆ ಬಳಿ ನವಜಾತ ಶಿಶುವಿನ ಶವ ಪತ್ತೆ; ಹೆಣ್ಣು ಎಂಬ ಕಾರಣಕ್ಕೆ ಬಿಸಾಡಿದರಾ?
ಇನ್ನು ಇದೇ ವೇಳೆ ಬಿಜೆಪಿ, ಜೆಡಿಎಸ್ ಸದಸ್ಯರು ಸಹ ಹೆಣ್ಣು ಭ್ರೂಣ ಹತ್ಯೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ನಿಯಮದ ಪ್ರಕಾರವೇ ಭ್ರೂಣ ಪರೀಕ್ಷೆ ಮಾಡಬೇಕು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಭ್ರೂಣದ ಲಿಂಗ ಪರೀಕ್ಷೆ ಮಾಡಬಾರದು. ಮಂಡ್ಯ, ಮೈಸೂರು ಭಾಗದಲ್ಲಿ ಭ್ರೂಣ ಹತ್ಯೆ ಪ್ರಕರಣ ದಾಖಲಾಗಿದ್ದು, ಜೂನ್ನಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಆ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದರು. ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ಪ್ರಕರಣ ತಡೆಗೆ ನಿಯಮವಿದೆ. ಆದರೆ ಈ ನಿಯಮ ಸರಿಯಾಗಿ ಅನುಷ್ಠಾನವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಇಂದು ಔಷಧಿ ಮೂಲಕವೇ ಭ್ರೂಣ ಹತ್ಯೆ ನಡೆಯುತ್ತಿದೆ. ರಾಜ್ಯಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ನಿರ್ಧರಿಸಿದ್ದೇವೆ. ಅನಧಿಕೃತ ಆಸ್ಪತ್ರೆ, ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ ಪರಿಶೀಲನೆ ನಡೆಸಿದ್ದೇವೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಉತ್ತರಿಸಿದರು.
ಹೆಣ್ಣು ಭ್ರೂಣ ಹತ್ಯೆ ಕಾಯ್ದೆಗೆ ತಿದ್ದುಪಡಿ
ಬಹಳ ಕಡೆ ಅವ್ಯಾಹತವಾಗಿ ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಅಧಿಕಾರಿಗಳು ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದು ಗೊತ್ತಾಗಿದೆ. ಇದನ್ನು ತಡೆಯಲು ನಾವು ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಕೊಲೆಗಿಂತ ಕಮ್ಮಿಯೇನಲ್ಲ ಭ್ರೂಣ ಹತ್ಯೆ ಅಂತ ಭಾವನೆ ಸದನದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಭ್ರೂಣ ಹತ್ಯೆ ಪ್ರಕರಣ ತಡೆಯಲು ರಾಜ್ಯ ಮಟ್ಟದ ಕಾರ್ಯಪಡೆ ಸ್ಥಾಪನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಭ್ರೂಣ ಹತ್ಯೆ ಆರೋಪಿಗಳ ಬಂಧನದ ಸಂದರ್ಭದಲ್ಲಿ ಯಾವಯಾವ ಸೆಕ್ಷನ್ ಹಾಕಬೇಕು ಎಂಬುದನ್ನು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನೂ ನೋಡುತ್ತಿದ್ದೇವೆ. ಹೆಣ್ಣು ಭ್ರೂಣ ಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆಯೂ ಕೂಡ ಚರ್ಚೆ ಮಾಡ್ತಿದ್ದೇವೆ ಎಂದು ಹೇಳಿದರು.
ಅಲ್ಟ್ರಾ ಸೌಂಡ್ ಮಿಷನ್ ಖರೀದಿಗೂ ಮಾರಾಟಕ್ಕೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಅಲ್ಟ್ರಾ ಸೌಂಡ್ ಮಿಷನ್ ಗಳ ಲೈಸೆನ್ಸ್ ರಿನ್ಯುವಲ್ ಪ್ರತಿವರ್ಷ ಮಾಡುವಂತೆ ನೋಡುತ್ತಿದ್ದೇವೆ. ಸೆಕೆಂಡ್ ಹ್ಯಾಂಡ್ ಅಲ್ಟ್ರಾ ಸೌಂಡ್ ಮಿಷನ್ ಬಳಕೆ ಬಗ್ಗೆಯೂ ನಿಯಮ ರೂಪಿಸುತ್ತೇವೆ. ಕಾಲ್ ಸೆಂಟರ್ ಓಪನ್ ಮಾಡುವುದಕ್ಕೂ ನಮಗೆ ಅನುಮೋದನೆ ಸಿಕ್ಕಿದೆ. ಯಾವುದಾದರೂ ಮಾಹಿತಿದಾರರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡುತ್ತೇವೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಮಾಹಿತಿ ನೀಡುವವರಿಗೂ 1 ಲಕ್ಷ ರೂ. ಇನ್ಸೆಂಟಿವ್ ನೀಡುವ ಬಗ್ಗೆಯೂ ಚರ್ಚೆ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇವೆ. 56 ಸಬ್ ಡಿವಿಷನ್ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ತಂಡ ರಚನೆಗೆ ನಿರ್ಧಾರ ಮಾಡಿದ್ದು, ಭ್ರೂಣ ಹತ್ಯೆ ತಡೆಯಲು ವಿಶೇಷ ನೀತಿ ರೂಪಿಸುವ ಬಗ್ಗೆಯೂ ಸಮಾಲೋಚನೆ ಮಾಡುತ್ತೇವೆ ಎಂದು ವಿವರಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Tue, 12 December 23