ಚಿಕ್ಕೋಡಿ: ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ; ಚಳಿಗಾಲ ಅಧಿವೇಶನ ಮುಗಿಯುವವರೆಗೂ ನಿರಂತರ ಹೋರಾಟ
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಚಿಕ್ಕೋಡಿಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ, ಅಧಿವೇಶನ ನಡೆಯುವಷ್ಟು ದಿನವೂ ಪ್ರತಿಭಟನೆ ಮಾಡುವುದಕ್ಕೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಿರ್ಧಿರಿಸಿದೆ.
ಬೆಳಗಾವಿ: ಆದಷ್ಟು ಬೇಗ ಚಿಕ್ಕೋಡಿಯನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡದೇ ಹೋದರೆ ತೆಲಂಗಾಣ ಮಾದರಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಮನೆಯ ಮುಂದೆ ಹೋಗಿ ಧರಣಿ ಮಾಡುವುದಲ್ಲದೇ ಡಿ.15ರಂದು ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಸರ್ಕಾರದ ಗಮನ ಸೆಳೆಯುವುದಲ್ಲದೆ, ಡಿಸೆಂಬರ್ 19 ರಿಂದ 29 ರವರೆಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಮುಗಿಯುವವರೆಗೂ ಕೂಡ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಿರಂತರ ಹೋರಾಟ ಮಾಡಲು ಜಿಲ್ಲಾ ಹೋರಾಟಗಾರರು ಮುಂದಾಗಿದ್ದಾರೆ.
ಗಡಿ ವಿವಾದ ಬೆನ್ನಲ್ಲೆ ಇದೀಗ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಕೂಗು ಕೇಳಿಬಂದಿದೆ. ಚಿಕ್ಕೋಡಿ ಜಿಲ್ಲೆಯಾಗಬೇಕು ಎಂದು ನಿನ್ನೆ ಮೊನ್ನೆಯಿಂದ ಕೇಳಿ ಬಂದ ಕೂಗು ಅಲ್ಲ. 80ರ ದಶಕದಿಂದ ಇನ್ನೇನು ಚಿಕ್ಕೋಡಿ ಜಿಲ್ಲೆಯಾಯಿತು ಎಂದು ಖುಷಿಪಟ್ಟಿದ್ದ ಜನರಿಗೆ ಕಳೆದ ಮೂರು ದಶಕವಾದರೂ ಕೂಡ ಚಿಕ್ಕೋಡಿ ಜಿಲ್ಲೆಯಾಗದೇ ಇರುವುದಕ್ಕೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಯಾರೊಬ್ಬ ಜಿಲ್ಲೆಯ ಜನಪ್ರತಿನಿಧಿಗಳಾಗಲಿ ಇತ್ತಕಡೆ ಗಮನ ಹರಿಸುತ್ತಿಲ್ಲ. ಜಿಲ್ಲೆ ದೊಡ್ಡದಿರುವುದರಿಂದ ಅಥಣಿ ತಾಲೂಕಿನ ಭಾಗದ ಜನರು ಎನೇ ಕೆಲಸಗಳನ್ನ ಮಾಡಿಸಿಕೊಳ್ಳಲು ಜಿಲ್ಲಾ ಕೇಂದ್ರ ಬೆಳಗಾವಿಗೆ ಹೋಗಿ ಬರಬೇಕೆಂದರೆ ಒಂದು ದಿನ ಹೋಗು ಬರುವುದರಲ್ಲಯೇ ಕಳೆಯುತ್ತದೆ.
ಇನ್ನು ಚಿಕ್ಕೋಡಿ ಜಿಲ್ಲೆಗಾಗಿ ಸಾಕಷ್ಟು ಹೋರಾಟ ಮಾಡಿದರು ಈ ಬಗ್ಗೆ ಯಾರೊಬ್ಬರು ಕೂಡ ಗಮನಹರಿಸುತ್ತಿಲ್ಲ. ಇಲ್ಲಿ ಸಂಸದರು, ಶಾಸಕರಿದ್ದರು ಕೂಡ ಪ್ರತ್ಯೇಕ ಜಿಲ್ಲೆ ಮಾಡಲು ಆಗಲಿಲ್ಲ. ಇತ್ತೀಚೆಗಷ್ಟೇ ಬಳ್ಳಾರಿಯಿಂದ ವಿಭಜನೆಗೊಂಡು ನೂತನವಾಗಿ ವಿಜಯನಗರ ಜಿಲ್ಲೆಯನ್ನ ಅಲ್ಲಿರುವ ಒಬ್ಬರೆ ಶಾಸಕ ಆನಂದಸಿಂಗ್ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿದರು. ಆದರೆ ನಮ್ಮಲ್ಲಿ 18 ಜನ ಜನಪ್ರತಿನಿಧಿಗಳಿದ್ದರು ಪ್ರಯೋಜನವಿಲ್ಲದಂತಾಗಿದೆ. ಚುನಾವಣೆ ಬಂದಾಗ ಮಾತ್ರ ಪ್ರತ್ಯೇಕ ಜಿಲ್ಲೆ ಮಾಡುತ್ತೇವೆ ಎಂದು ಹೇಳಿ ಮೂಗಿಗೆ ತುಪ್ಪ ಸವರಿ ಹೋಗುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಿಕ್ಕೋಡಿ ಕುರಿತು ಮಾತನಾಡಬೇಕು. ಇಲ್ಲಿನ ಜನ ಅಬಿವೃದ್ಧಿ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಪ್ರತ್ಯೇಕ ಜಿಲ್ಲೆಯಾದರೆ ಹೆಚ್ಚಿನ ಅನುದಾನದಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಲ್ಲದೇ ಅದರ ಜೊತೆಗೆ ಚಿಕ್ಕೋಡಿಯಲ್ಲಿ ಎಸ್ಪಿ, ಡಿಸಿ ಕಚೇರಿಗಳು ಬಂದರೆ ಗಡಿ ಸಂರಕ್ಷಣೆಗೆ ಅನುಕೂಲ ಆಗುವುದಲ್ಲದೇ ಗಡಿಯಲ್ಲಿ ಕನ್ನಡ ಬೆಳೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಹೋರಾಟಗಾರರು.
ಇದನ್ನೂ ಓದಿ:ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ಜನಾಕ್ರೋಶ: ಜನಪರವಾಗಿರೋದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ?
ಒಟ್ಟಿನಲ್ಲಿ ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಈ ಭಾಗದ ಜನರು ಹೋರಾಟ ಮಾಡುತ್ತಲೆ ಬಂದಿದ್ದಾರೆ. ಈ ಬಾರಿಯಾದರು ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಜನರಿಗೆ ಸಿಹಿ ಸುದ್ದಿ ಸಿಗುತ್ತದೆಯಾ ಎನ್ನುವುದನ್ನ ಕಾದು ನೋಡಬೇಕಾಗಿದೆ.
ವರದಿ: ವಿನಾಯಕ್ ಗುರವ್ ಟಿವಿ9 ಚಿಕ್ಕೋಡಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 am, Tue, 13 December 22