ಬೆಳಗಾವಿ ಜಿಲ್ಲೆಯನ್ನು ವಿಭಜಿಸು, ಸಿಎಂಗೆ ಒಳ್ಳೆ ಬುದ್ದಿ ನೀಡು; ಸವದತ್ತಿಯ ಯಲ್ಲಮ್ಮ ದೇವಿಗೆ ಹರಕೆ
ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಿಗೆ ಭಕ್ತರೊಬ್ಬರು ವಿಚಿತ್ರ ಹರಕೆಯನ್ನು ಕಟ್ಟಿಕೊಂಡಿದ್ದಾರೆ.
ಬೆಳಗಾವಿ: ಭಕ್ತರು ದೇವರಿಗೆ ನಾನಾ ತರಹದ ಹರಿಕೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗೇ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿಯ (Savadatti) ಯಲ್ಲಮ್ಮ ದೇವಿಗೆ ಭಕ್ತರೊಬ್ಬರು ವಿಚಿತ್ರ ಹರಕೆಯನ್ನು ಕಟ್ಟಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಂತೆ ಹರಕೆ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯನ್ನು 4 ಜಿಲ್ಲೆಗಳಾಗಿ ವಿಭಜಿಸು, ಮುಖ್ಯಮಂತ್ರಿಗೆ ಒಳ್ಳೆ ಬುದ್ದಿ ನೀಡು ಎಂದು ಹರಕೆ ಪತ್ರದಲ್ಲಿ ಬರೆಯಲಾಗಿದೆ.
ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು. ಈಗ 14 ತಾಲೂಕು ಆಗಿವೆ, ಹೀಗಾಗಿ ಬೆಳಗಾವಿಯನ್ನು ವಿಭಜಿಸಿ ಬೆಳಗಾವಿ, ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ನಗರಗಳನ್ನು ಜಿಲ್ಲೆಗಳಾಗಿ ಮಾಡಿ. ಕೊಡಗಿನಲ್ಲಿ ಕೇವಲ 2 ವಿಧಾನ ಸಭಾ ಕ್ಷೇತ್ರವಿದ್ದರೂ ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರ ಇದ್ದು ನಾಲ್ಕು ಜಿಲ್ಲೆಗಳನ್ನಾಗಿ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರತಿ ಜಿಲ್ಲೆಗೂ ಎರಡು ಪ್ರತ್ಯೇಕ ಉಪವಿಭಾಗಾಧಿಕಾರಿ ಆಫೀಸ್ ಮಾಡುವಂತೆ ಮಾಡು. ಹುಂಡೇಕರ್, ವಾಸುದೇವ, ಗದ್ದಿಗೌಡರ ಸಮಿತಿಗಳು ಗೋಕಾಕನ್ನು ಜಿಲ್ಲೆ ಮಾಡುವಂತೆ ಶಿಫಾರಸು ಮಾಡಿವೆ ಎಂದು 4 ಪುಟಗಳ ಸುದೀರ್ಘ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Fri, 23 September 22