AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರೂಗೇರಿ ಪೊಲೀಸ್​ ಠಾಣೆ ಮುಂದೆ‌ ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ

ದೇವದುರ್ಗ ಇನ್​ಸ್ಪೆಕ್ಟರ್ ಅಶೋಕ್ ಸದಲಗಿ ತಮ್ಮ ತಂದೆಯ ಶವವನ್ನು ಹಾರೂಗೇರಿ ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಹಾರೂಗೇರಿ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.​ ಅಷ್ಟಕ್ಕೂ ದೇವದುರ್ಗ ಇನ್​ಸ್ಪೆಕ್ಟರ್ ಅಶೋಕ್ ಪ್ರತಿಭಟನೆ ನಡೆಸಿದ್ದು ಏಕೆ? ತಮ್ಮದೇ ಇಲಾಖೆಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವುದು ಏಕೆ? ಈ ಸ್ಟೋರಿ ಓದಿ.

ಹಾರೂಗೇರಿ ಪೊಲೀಸ್​ ಠಾಣೆ ಮುಂದೆ‌ ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ
ಸಿಪಿಐ ಪ್ರತಿಭಟನೆ
Sahadev Mane
| Updated By: ವಿವೇಕ ಬಿರಾದಾರ|

Updated on:Feb 08, 2025 | 9:16 AM

Share

ಬೆಳಗಾವಿ, ಫೆಬ್ರವರಿ 08: ಪೊಲೀಸ್​ ಠಾಣೆ (Police Station) ಎದರು ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ ನಡೆಸಿರುವ ಘಟನೆ ರಾಯಬಾಗ (Raibag) ತಾಲೂಕಿನ ಹಾರೂಗೇರಿಯಲ್ಲಿ (Harugeri) ನಡೆದಿದೆ. ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​​ ಅಶೋಕ ಸದಲಗಿಯವರು ಹಾರೂಗೇರಿ ಪೊಲೀಸ್​ ಠಾಣೆ ಪಿಎಸ್​ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.

ಜನವರಿ10ರಂದು ಇನ್​ಸ್ಪೆಕ್ಟರ್​​ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನಡೋಣಿ ಪ್ರತಾಪ್ ಹರೋಲಿ, ವಸಂತ ಚೌಗಲಾ ಎಂಬುವರು ಅಕ್ರಮವಾಗಿ ಪ್ರವೇಶ ಮಾಡಿದ್ದರು. ಅಕ್ರಮವಾಗಿ ಪ್ರವೇಶಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಮತ್ತು ಇವರ ಗ್ಯಾಂಗ್‌ ಅಣ್ಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೂಡಲೆ ಅಣ್ಣಪ್ಪ 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ್ದರು. ಬಳಿಕ, ಅಣ್ಣಪ್ಪ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಪೊಲೀಸರು ಅಣ್ಣಪ್ಪರನ್ನು ಇಡೀ ದಿನ ಠಾಣೆಯಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಆರೋಪಿಸಲಾಗಿದೆ. ಸಂಜೆ ಆಗುತ್ತಿದ್ದಂತೆ ಶುಗರ್ ಕಡಿಮೆಯಾಗಿ, ಬಿಪಿ ಹೆಚ್ಚಾಗಿ ಅಣ್ಣಪ್ಪ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ, ಅಣ್ಣಪ್ಪರ ಎರಡನೇ ಪುತ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತೆ ಪತ್ನಿ ಚಿಕಿತ್ಸೆಗಾಗಿ ಸಾಲ: ಫೈನಾನ್ಸ್ ಕಿರುಕುಳಕ್ಕೆ ವಿಷ ಕುಡಿದ ರೈತ

ಬಳಿಕ, ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಇನ್​ಸ್ಪೆಕ್ಟರ್ ಅಶೋಕ್​​ ಅವರು ಹಾರೂಗೇರಿ ಪಿಎಸ್ಐ, ಸಿಪಿಐ ಮತ್ತು ಅಥಣಿ ಡಿಐಎಸ್​ಪಿಗೆ ಮನವಿ ಮಾಡಿದ್ದರು. ಆದರೆ, ದೂರು ದಾಖಲಿಸಿಕೊಳ್ಳದೆ ಪೊಲೀಸರು ಬೇಜವಾಬ್ದಾರಿತನದಿಂದ ವರ್ತಿಸಿದ್ದರು.

ಇನ್ನು ಅಕ್ರಮವಾಗಿ ಜಮೀನು ಪ್ರವೇಶ ಮಾಡಿದ್ದವರು ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಇನ್​ಸ್ಪೆಕ್ಟರ್ ಅಶೋಕ್​ ಸೋದರನ ಮೇಲೆ ಪಿಎಸ್​ಐ ಮಾಳಪ್ಪ ಫೆಬ್ರವರಿ 2 ರಂದು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.

ಇಂದು ಶನಿವಾರ (ಫೆ.08) ಇನ್​ಸ್ಪೆಕ್ಟರ್ ಅಶೋಕ್​ ತಂದೆ ಅಣ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಇನ್​ಸ್ಪೆಕ್ಟರ್ ಅಶೋಕ್​ ಹಾರುಗೇರಿ ಪೊಲೀಸ್​ ಠಾಣೆ ಎದರು ತಂದೆಯ ಶವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಪಿಎಸ್ಐ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಬರುವಂತೆ ಪಟ್ಟು ಹಿಡಿದಿದ್ದಾರೆ.

ವಿಚಾರ ತಿಳಿದು, ಮಧ್ಯರಾತ್ರಿ ಎರಡು ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಡಿವೈಎಸ್‌ಪಿ ಇನ್​ಸ್ಪೆಕ್ಟರ್ ಅಶೋಕ್​​ ಅವರ ಮನವೊಲಿಸಿದ್ದಾರೆ. ಬಳಿಕ, ಇನ್​ಸ್ಪೆಕ್ಟರ್ ಅಶೋಕ್​ ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 am, Sat, 8 February 25