ಬೆಳಗಾವಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯ ಕಿತ್ತಾಟಕ್ಕೆ ಸಂತೋಷ್ ಬಲಿಯಾದರೇ ಎಂಬ ವಿಚಾರವೂ ಚರ್ಚೆಯಾಗುತ್ತಿದೆ. ಸಂತೋಷ ಪಾಟೀಲ್‌ನಿಂದ ಉಪಗುತ್ತಿಗೆ ಪಡೆದ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾದ ಅಂಶವನ್ನೂ ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಈಚೆಗೆ ಉಪಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಉಡುಪಿ ಪೊಲೀಸರ ವಿಚಾರಣೆಗೆ ಹಾಜರಾಗದ ಇವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ ಹಲವು ಕಾಮಗಾರಿಗಳನ್ನು ಮಾಡಿಸಿದ್ದರು.
ಕಾಮಗಾರಿ ಮಂಜೂರಾತಿ ಪಡೆಯುವ ವೇಳೆ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಲೆಟರ್ ಹೆಡ್ ಮೂಲಕವೇ ಮೃತ ಸಂತೋಷ್ ಪಾಟೀಲ ಕಾಮಗಾರಿಯ ವಿವರಗಳನ್ನು ಈಶ್ವರಪ್ಪ ಅವರಿಗೆ ಒದಗಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಮೌಖಿಕ ಸೂಚನೆ ಮೇರೆಗೆ ₹ 4.12 ಕೋಟಿ ವೆಚ್ಚದಲ್ಲಿ 108 ಕಾಮಗಾರಿ ಮಾಡಿಸಿದ್ದೇನೆ ಎಂದು ಸಂತೋಷ ಪಾಟೀಲ್ ಹೇಳಿದ್ದರು.
ಕಾಮಗಾರಿ ನಿರ್ವಹಿಸಲು 12 ಉಪಗುತ್ತಿಗೆದಾರರಿಗೆ ಕೆಲಸ ಹಂಚಿದ್ದರು. ಸಂತೋಷ ಪಾಟೀಲ್ ಮತ್ತು ಗ್ರಾಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹೇಳಿದ್ದಕ್ಕೆ ಕೆಲಸ ಮಾಡಿದೆವು ಎಂದು ಇಂದಿಗೂ ಉಪಗುತ್ತಿಗೆದಾರರು ಹೇಳುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೂ ತಾರದೆ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ. ಕಾಮಗಾರಿ ಬಳಿಕ ಬಿಲ್ ಮಂಜೂರಾತಿಯಲ್ಲಿ ರಾಜಕೀಯ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಗ್ರಾಪಂ ಅಧ್ಯಕ್ಷನ ವಿಚಾರಣೆ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಗೆ ಬರುವಂತೆ ಈ ಮೊದಲೇ ಅಧ್ಯಕ್ಷ ನಾಗೇಶ್ ಅವರಿಗೆ ಪೊಲೀಸರು ಸೂಚನೆ ನೀಡಿದ್ದರು. ನಿನ್ನೆಯವರೆಗೂ ನಾಗೇಶ್ ಮನ್ನೋಳಕರ್ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಇಂದು (ಏಪ್ರಿಲ್ 19) ಬೆಳ್ಳಂಬೆಳಗ್ಗೆ ನಾಗೇಶ್ ನಿವಾಸಕ್ಕೆ ಪೊಲೀಸರ ತಂಡ ಪ್ರವೇಶಿಸಿತು. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನಾಗೇಶ್ ಅವರ ವಿಚಾರಣೆ ನಡೆಸಿದರು.
₹ 4 ಕೋಟಿ ವೆಚ್ಚದ ಕಾಮಗಾರಿ ಮಾಡಿದ್ದ ಸಂತೋಷ್ ಪಾಟೀಲ್ ಅವರ ನಿವಾಸವು ಹಿಂಡಲಗಾದ ಲಕ್ಷ್ಮೀನಗರದ ಸಮರ್ಥ ಕಾಲೋನಿಯಲ್ಲಿದೆ. ಯಾವ ಆಧಾರದ ಮೇಲೆ ಕಾಮಗಾರಿಗೆ ಅನುಮತಿ ನೀಡಿದ್ದೀರಿ? ಯಾರನ್ನು ಭೇಟಿಯಾಗಿ ನೀವು ಕಾಮಗಾರಿಗೆ ಅನುಮತಿ ಪಡೆದಿದ್ದೀರಿ ಎಂದು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನೂ ಈ ವೇಳೆ ಪೊಲೀಸರು ವಶಪಡಿಸಿಕೊಂಡರು. ನಾಗೇಶ್ ಮನೆಗೆ 12 ಉಪ ಗುತ್ತಿಗೆದಾರರನ್ನು ಕರೆಸಿ, ಅಲ್ಲಿಯೇ ವಿಚಾರಣೆ ನಡೆಸಲಾಯಿತು.
ಸಂತೋಷ್ ಮನೆಗೆ ಡಿಕೆಶಿ ಭೇಟಿ ಇತ್ತೀಚೆಗೆ ಅತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಭೇಟಿ ನೀಡಲಿದ್ದಾರೆ. ಮುಂಬೈನಿಂದ ಮಧ್ಯಾಹ್ನ 2.25ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣಕ್ಕೆ ಆಗಮಿಸಲಿರುವ ಡಿಕೆಶಿ, ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿರುವ ಸಂತೋಷ ಅವರ ನಿವಾಸಕ್ಕೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಇದೇ ವೇಳೆ ಕೆಪಿಸಿಸಿ ವತಿಯಿಂದ ಸಂತೋಷ ಕುಟುಂಬಸ್ಥರಿಗೆ ₹ 11 ಲಕ್ಷದ ಪರಿಹಾರ ಚೆಕ್ ವಿತರಿಸಲಿದ್ದಾರೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಚುರುಕುಗೊಂಡ ತನಿಖೆ, ಗೌಪ್ಯವಾಗಿ ರಮೇಶ್ ಜಾರಕಿಹೊಳಿ ಭೇಟಿಯಾದ ತುಂಡು ಗುತ್ತಿಗೆದಾರರು
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ