ರಾಜ್ಯದಲ್ಲಿ 88 ಜನ ಪೊಲೀಸರೇ ಕ್ರಿಮಿನಲ್ಸ್: ವಿಧಾನ ಪರಿಷತ್ನಲ್ಲಿ ಗೃಹ ಸಚಿವ ಪರಮೇಶ್ವರ್ ಮಾಹಿತಿ
ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ 88 ಪೊಲೀಸರು ದರೋಡೆ, ಅಪಹರಣ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯರ ಪ್ರಶ್ನೆಗೆ ಉತ್ತರಿಸುವ ವೇಳೆ ಗೃಹ ಸಚಿವರೇ ಈ ಮಾಹಿತಿಯನ್ನು ದೃಢಪಡಿಸಿದ್ದು, ಕೆಲ ಪೊಲೀಸರ ನಡೆ ಸಾರ್ವಜನಿಕರು ಅವರ ಮೇಲಿಟ್ಟಿದ್ದ ವಿಶ್ವಾಸಕ್ಕೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ. ರಕ್ಷಕರೇ ಭಕ್ಷಕರಾದರೆ ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಬೆಳಗಾವಿ, ಡಿಸೆಂಬರ್ 18: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲ ದರೋಡೆ, ಅಪಹರಣದಂತಹ ಕೇಸ್ಗಳಲ್ಲಿ ಪೊಲೀಸರೇ ಭಾಗಿಯಾಗಿರುವ ಆತಂಕಕಾರಿ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಹಾಡಹಗಲೇ ದರೋಡೆ ಸೇರಿ, ಕೋರಮಂಗಲದ ಕಾಲ್ಸೆಂಟರ್ನ ಉದ್ಯೋಗಿಗಳ ಕಿಡ್ನ್ಯಾಪ್ ಕೇಸ್ಗಳಲ್ಲಿಯೂ ಪೊಲೀಸ್ ಸಿಬ್ಬಂದಿಯೇ ಆರೋಪಿಗಳಾಗಿದ್ದರು. ಈ ನಡುವೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಬರೋಬ್ಬರಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಂದಿರೋದು ಬೆಚ್ಚಿಬೀಳಿಸಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಒಟ್ಟು 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ದಾರೆ. ಗೃಹಸಚಿವರ ಉತ್ತರದ ಬೆನ್ನಲ್ಲೇ ಈ ಬಗ್ಗೆ ಶರವಣ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಪೊಲೀಸರೇ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಕ್ಷಕರೇ ಭಕ್ಷಕರಾಗುತ್ತಿರುವ ಕಾರಣ ಪೊಲೀಸರ ಮೇಲೆ ಜನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಪೊಲೀಸರನ್ನು ಅಮಾನತು ಮಾಡುವುದಲ್ಲ, ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್
ಶರವಣ ಅವರ ಮಾತಿಗೆ ಉತ್ತರಿಸಿದ ಗೃಹ ಸಚಿವರು, ಎಲ್ಲಾ ಪೊಲೀಸರು ಕಳ್ಳರು ಎನ್ನಲು ಸಾಧ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ತು, ರಕ್ಷಕರು ಭಕ್ಷಕರೆಂದು ಹೇಳಿದ್ರಿ. ಆದರೆ ಅಪರಾಧ ಕೃತ್ಯಗಳಲ್ಲಿ ಪೊಲೀಸರು ಶಾಮೀಲಾಗಿದ್ರೆ ಸುಮ್ಮನೆ ಬಿಡಲ್ಲ. ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಂಡಿದ್ದೇವೆ. ಏನೂ ಮಾಡಿಲ್ಲವೆಂದು ಹೇಳಲು ಹೋಗಬೇಡಿ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿಮಾಡಿದ್ದೇವೆ. ಪೊಲೀಸರು ಕಟ್ಟುನಿಟ್ಟಾಗಿ ಇರುವುದರಿಂದ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಪೊಲೀಸರನ್ನು ವಜಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



