
ಬೆಂಗಳೂರು/ಬೆಳಗಾವಿ, ಅಕ್ಟೋಬರ್ 31: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ) ಬಿಗ್ ಶಾಕ್ ನೀಡಿದೆ. ಹೂಡಿಕೆದಾರರಿಂದ ಬರೋಬ್ಬರಿ 2,459 ಕೋಟಿ ರೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆಗಳಲ್ಲಿನ ಹಣ, ಷೇರು ಹೂಡಿಕೆ, ಕೃಷಿ ಜಮೀನು ಹಾಗೂ ಬಂಗಲೆ ಸೇರಿದಂತೆ ವಿವಿಧ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಇಡಿ ಅಧಿಕಾರಿಗಳು ಒಟ್ಟು 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಈ ಪೈಕಿ 367 ಕೋಟಿ ರೂ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ಗಳು, 47 ಬ್ಯಾಂಕ್ ಖಾತೆಗಳಲ್ಲಿದ್ದ 44 ಕೋಟಿ ರೂ ಹಣ, 13 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಗಳು ಹಾಗೂ ಷೇರು ಮಾರುಕಟ್ಟೆಯಲ್ಲಿನ 1.31 ಕೋಟಿ ರೂ ಹೂಡಿಕೆ ಸೇರಿದೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಬರೋಬ್ಬರಿ 2,459 ಕೋಟಿ ರೂ ಹಣ ಸಂಗ್ರಹಿಸಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ತಿಳಿದುಬಂದ ಹಿನ್ನೆಲೆ ಇ.ಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.
ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು, ಮೊಬೈಲ್ಗಳು ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹಣವನ್ನು ಹೇಗೆ ಸಂಗ್ರಹಿಸಲಾಗಿದೆ, ಯಾವ ರೀತಿ ವರ್ಗಾವಣೆ ಮಾಡಲಾಗಿದೆ ಮತ್ತು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮಾಡಲಾಗಿತ್ತು.
ಇದನ್ನೂ ಓದಿ: ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ಹಗರಣ: ಕೋರ್ಟ್ಗೆ ಇಡಿಯಿಂದ ವರದಿ ಸಲ್ಲಿಕೆ
ಇನ್ನು ಪ್ರಕರಣ ಸಂಬಂಧ ಶಿವಾನಂದ ನೀಲಣ್ಣನವರ್ರನ್ನು ಆಗಸ್ಟ್ 8ರಂದು ಬಂಧಿಸಲಾಗಿತ್ತು. ಬಳಿಕ ತನಿಖೆ ಮುಂದುವರಿಸಿದ್ದ ಇಡಿ ಅಧಿಕಾರಿಗಳು, ಅಕ್ಟೋಬರ್ 9ರಂದು ಶಿವಾನಂದ ನೀಲಣ್ಣನವರ್ ಸೇರಿದಂತೆ ಐವರ ವಿರುದ್ಧ ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಹೂಡಿಕೆಗಳಿಂದ 185.95 ಕೋಟಿ ರೂ ನಿವ್ವಳ ನಷ್ಟ ಉಂಟಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಲ್ಲದೆ, ಸುಮಾರು 25 ಕೋಟಿ ರೂ ಹಣವನ್ನು ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾವಣೆ ಮಾಡಿರುವುದೂ ಪತ್ತೆಯಾಗಿದೆ.
ತನಿಖೆ ವೇಳೆ ಹಣ ವರ್ಗಾವಣೆಗೆ ಸಂಬಂಧಿಸಿದ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಫಿಕ್ಸೆಡ್ ಡೆಪಾಸಿಟ್‌ಗಳನ್ನು ಸೃಷ್ಟಿಸಿ, ಅವುಗಳ ಆಧಾರದ ಮೇಲೆ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿದೆ ಎಂದು ಇಡಿ ತನಿಖೆಯಲ್ಲಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ ಶಿವಾನಂದ ನೀಲಣ್ಣನವರ್ ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೀಗ ಪ್ರಕರಣದ ತನಿಖೆಯ ಭಾಗವಾಗಿ ಒಟ್ಟು 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.