ಮೈತುಂಬ ಸಾಲ ಮಾಡಿಕೊಂಡಿದ್ದ ಗಂಡನನ್ನು ಕೊಲೆ ಮಾಡಿ ಸಹಜ ಸಾವೆಂದು ಬಿಂಬಿಸಿದ್ದ ಪತ್ನಿ-ಅತ್ತೆ ಅರೆಸ್ಟ್
ಸಾಲಗಾರರ ಕಾಟದಿಂದ ಬೇಸತ್ತು 3 ವರ್ಷಗಳಿಂದ ಬೆಳಗಾವಿ ಬಿಟ್ಟು ಓಡಿ ಹೋಗಿದ್ದ ಗಂಡ ತಡರಾತ್ರಿ ಮನೆಗೆ ಬಂದಿದ್ದ. ಕುಡಿದು ಬಂದು ಹೆಂಡತಿ ಜೊತೆ ಜಗಳವಾಡಿದ್ದ. ಗಂಡನ ಮಾತುಗಳಿಂದ ಕೋಪಗೊಂಡ ಹೆಂಡತಿ ತನ್ನ ತಾಯಿಯ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಈ ಕೊಲೆಯನ್ನು ಸಹಜ ಸಾವೆಂದು ಬಿಂಬಿಸಿದ್ದು ಮರಣೋತ್ತರ ಪರೀಕ್ಷೆಯಿಂದ ಕೊಲೆ ರಹಸ್ಯ ಬಯಲಾಗಿದೆ. ತಾಯಿ-ಮಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ, ಸೆ.04: ಮೈತುಂಬಾ ಸಾಲ ಮಾಡಿಕೊಂಡಿದ್ದ ಪತಿಯನ್ನು ಪತ್ನಿ ಹಾಗೂ ಅತ್ತೆ ಸೇರಿಕೊಂಡು ಕೊಲೆ (Murder) ಮಾಡಿ ಸಹಜ ಸಾವೆಂದು ಬಿಂಬಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ತಾಯಿ-ಮಗಳ ಕೊಲೆ ರಹಸ್ಯ ಬಯಲಾಗಿದೆ. ಬೆಳಗಾವಿಯ (Belagavi) ಪೀರವನಾಡಿ ನಿವಾಸಿ ವಿನಾಯಕ್ ಜಾಧವ(48) ಕೊಲೆಯಾದ ವ್ಯಕ್ತಿ. ಜಾಧವ್ ಹೆಂಡತಿ ಮತ್ತು ಆಕೆಯ ತಾಯಿ ಇಬ್ಬರೂ ಸೇರಿಕೊಂಡು ಜಾಧವ್ ಕೊಲೆ ಮಾಡಿ ಬಳಿಕ ಇದೊಂದು ಸಹಜ ಸಾವು, ತನ್ನ ಪತಿ ಕುಡಿದು ಬಂದು ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದರು. ಆದರೆ ಈಗ ತಿಂಗಳ ಬಳಿಕ ಕೊಲೆ ಅಸಲಿ ಸತ್ಯ ಹೊರ ಬಿದ್ದಿದೆ. ಪತ್ನಿ ರೇಣುಕಾ, ಅತ್ತೆ ಶೋಭಾ ಪೊಲೀಸರ ಅತಿಥಿಯಾಗಿದ್ದಾರೆ.
ವಿನಾಯಕ್ ಜಾಧವ್ ಅವರು ಕೊರೊನಾ ಸಮಯದಲ್ಲಿ ತಮ್ಮ ಉದ್ಯಮದಲ್ಲಿ ನಷ್ಟ ಹೊಂದಿ ಸಾಲದ ಸುಳಿಗೆ ಸಿಲುಕಿದ್ದರು. ಹೀಗಾಗಿ ಸಾಲಗಾರರ ಕಾಟಕ್ಕೆ ಬೇಸತ್ತು ಬೆಳಗಾವಿ ಬಿಟ್ಟು ಹೋಗಿದ್ದರು. ಆದರೆ ಮನೆಯನ್ನು ಸಾಲಕ್ಕೆ ಅಡಮಾನವಾಗಿ ಇಟ್ಟಿದ್ದರಿಂದ ಆಗಾಗ ಸಾಲಗಾರರು ಮನೆ ಬಳಿ ಬರುತ್ತಿದ್ದರು. ಆದರೆ ವಿನಾಯಕ್ ಜಾಧವ್ ಹೆಂಡತಿ ಹಾಗೂ ಅತ್ತೆ ತಮಗೂ ಸಾಲಕ್ಕೂ ಸಂಬಂಧ ಇಲ್ಲ ಎಂದು ಸಾಲಗಾರರನ್ನು ಓಡಿಸಿದ್ದರು.
ಇದನ್ನೂ ಓದಿ: ಮಂಡ್ಯ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಿಸಿದ ಪುನೀತ್ ಕೆರೆಹಳ್ಳಿ ತಂಡ
ಬರೋಬ್ಬರಿ ಮೂರು ವರ್ಷದ ಬಳಿಕ ಜುಲೈ 29ರಂದು ವಿನಾಯಕ್ ಜಾಧವ್ ಏಕಾಏಕಿ ಬೆಳಗಾವಿಯ ಮನೆಗೆ ಎಂಟ್ರಿಕೊಟ್ಟಿದ್ದರು. ತಡ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ವಿನಾಯಕ ತನ್ನ ಹೆಂಡತಿ ರೇಣುಕಾ ಜೊತೆ ಜಗಳವಾಡಿದ್ದರು. ಕೊನೆಗೆ ಗಂಡನ ಜಗಳದಿಂದ ಬೇಸತ್ತು ಕೊಲೆ ಮಾಡಲು ಹೆಂಡತಿ ಅತ್ತೆ ಪ್ಲ್ಯಾನ್ ಮಾಡಿದ್ದಾರೆ. ಕೊಲೆಯಿಂದ ಸಾಲಗಾರರು ಸುಮ್ಮನಾಗ್ತಾರೆ, ತಮಗೂ ಗಂಡನ ಕಿರಿಕಿರಿ ತಪ್ಪುತ್ತೆ ಎಂದು ಚಿಂತಿಸಿ ಮಲಗಿದ್ದ ಪತಿಯನ್ನು ಹಗ್ಗದಿಂದ ಕುತ್ತಿಗೆ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಹೆಂಡತಿ ರೇಣಕಾಗೆ ಆಕೆಯ ತಾಯಿ ಶೋಭಾ ಅವರು ಸಾಥ್ ಕೊಟ್ಟಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರೂ ಸೇರಿಕೊಂಡು ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿ ಕುಡಿದು ವಿನಾಯಕ್ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕರೆದು ಪತಿ ಮದ್ಯಪಾನ ಮಾಡಿ ಬಿದ್ದಿದ್ದಾನೆ ಎಂದು ಡ್ರಾಮಾ ಮಾಡಿದ್ದಾರೆ. ಇದು ಕೊಲೆಯಲ್ಲ ಸಹಜ ಸಾವು ಎಂದು ಬಿಂಬಿಸಿದ್ದಾರೆ. ಆದರೆ ಒಂದು ತಿಂಗಳ ಬಳಿಕ ಮರಣೋತ್ತರ ಪರೀಕ್ಷೆಯಿಂದ ವಿನಾಯಕ್ ಸಾವಿನ ಸತ್ಯ ಹೊರ ಬಂದಿದೆ. ಸದ್ಯ ಈಗ ಬೆಳಗಾವಿ ಗ್ರಾಮೀಣ ಪೊಲೀಸರು ಹೆಂಡತಿ ರೇಣುಕಾ ಜಾಧವ್, ಶೋಭಾ ಅವರನ್ನು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:27 am, Wed, 4 September 24