Namma Metro: ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬವಾಗುತ್ತಿರುವುದೇಕೆ?; 10 ಕಾರಣಗಳು ಇಲ್ಲಿವೆ

Bengaluru Metro: ಮೆಟ್ರೋ ಕಾಮಗಾರಿ ಯೋಜನೆ ವಿಳಂಬವಾದ್ದರಿಂದ ಬಜೆಟ್​ ಕೂಡ 27,000 ಕೋಟಿ ರೂ.ನಿಂದ 30,695 ಕೋಟಿ ರೂ.ಗೆ ಏರಿಕೆಯಾಗಿತ್ತು. ಹಾಗಾದರೆ, 2ನೇ ಹಂತದ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕಾರಣವಾದರೂ ಏನು?

Namma Metro: ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬವಾಗುತ್ತಿರುವುದೇಕೆ?; 10 ಕಾರಣಗಳು ಇಲ್ಲಿವೆ
ಸಾಂಕೇತಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಕೇಸುಗಳು ವಿಪರೀತಕ್ಕೆ ಹೋಗಿದ್ದರಿಂದ 1 ತಿಂಗಳು ಲಾಕ್​ಡೌನ್ (Lockdown) ಘೋಷಿಸಲಾಗಿತ್ತು. ಇದರಿಂದ ಅನೇಕ ಅರ್ಥಿಕ ಸಂಕಷ್ಟಗಳು ಎದುರಾಗಿದ್ದು, ಬೆಂಗಳೂರಿನ ಮೆಟ್ರೋ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿತ್ತು. ನಮ್ಮ ಮೆಟ್ರೋ 2ನೇ ಹಂತದ (Namma Metrol 2nd Phase) ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ಬೆಂಗಳೂರಿನ ಬಹುಭಾಗಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮೆಟ್ರೋ ಕಾಮಗಾರಿ ಕೆಲಸ 2024ರೊಳಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ (BS Yediyurappa) ಭರವಸೆ ನೀಡಿದ್ದರು. ಈ ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದಕ್ಕೆ ಏನೆಲ್ಲ ಕಾರಣಗಳಿವೆ ಗೊತ್ತಾ?

ಬೆಂಗಳೂರಿನಲ್ಲಿ ಈಗಾಗಲೇ ಹಸಿರು ಮತ್ತು ನೇರಳೆ ಬಣ್ಣದ ಮಾರ್ಗಗಳ ಮೆಟ್ರೋ ರೈಲು ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೋನಾದಿಂದಾಗಿ ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರೂ ಒಂದುಕಾಲದಲ್ಲಿ ಮೆಟ್ರೋ ರೈಲುಗಳು ಸದಾ ಕಿಕ್ಕಿರಿದು ತುಂಬಿರುತ್ತಿತ್ತು. ಬೆಂಗಳೂರಿನ ಇನ್ನಷ್ಟು ಪ್ರದೇಶಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 2ನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ಕಾಮಗಾರಿ ಪೂರ್ಣವಾದರೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ.

2014ರಲ್ಲಿ ನಡೆದ ಒಪ್ಪಂದದಂತೆ 2017ರ ವೇಳೆಗೆ 72 ಕಿ.ಮೀ. ವ್ಯಾಪ್ತಿಯ ಈ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕೇವಲ 6.2 ಕಿ.ಮೀ. ಉದ್ದದ ಮೆಟ್ರೋ ಲೈನ್ ಮಾತ್ರ ಪೂರ್ಣಗೊಂಡಿತ್ತು. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುವ ಗಡುವನ್ನು 2024ಕ್ಕೆ ವಿಸ್ತರಿಸಲಾಗಿತ್ತು. ಈ ಯೋಜನೆ ವಿಳಂಬವಾದ್ದರಿಂದ ಮೆಟ್ರೋ ಕಾಮಗಾರಿಯ ಬಜೆಟ್​ ಕೂಡ 27,000 ಕೋಟಿ ರೂ.ನಿಂದ 30,695 ಕೋಟಿ ರೂ.ಗೆ ಏರಿಕೆಯಾಗಿತ್ತು. ಹಾಗಾದರೆ, 2ನೇ ಹಂತದ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕಾರಣವಾದರೂ ಏನು?

ಈ ಬಗ್ಗೆ ವರದಿ ಮಾಡಿರುವ ಟೈಮ್ಸ್​ ಆಫ್ ಇಂಡಿಯಾ 10 ಕಾರಣಗಳನ್ನು ಪಟ್ಟಿ ಮಾಡಿದೆ.

1. ಮೆಟ್ರೋ ಮಾರ್ಗ ಸಾಗುವ ಕೆಲಸ ಪ್ರದೇಶಗಳಲ್ಲಿ ಭಾರೀ ಮರಗಳಿವೆ. ಆ ಮರಗಳನ್ನು ಕಡಿದು ಮೆಟ್ರೋ ಮಾರ್ಗ ನಿರ್ಮಿಸಲು ಬಿಡುವುದಿಲ್ಲ ಎಂದು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆ ಮರಗಳ ಬದಲಾಗಿ ಬೇರೆಡೆ 1:10 ಅನುಪಾತದಂತೆ ಗಿಡಗಳನ್ನು ಬೆಳೆಸುವುದಾಗಿ ಬಿಎಂಆರ್​ಸಿಎಲ್ ಅಫಿಡವಿಟ್ ಸಲ್ಲಿಸಿತ್ತು. ಗಿಡಗಳನ್ನು ನೆಡುವ ಮತ್ತು ಮರಗಳನ್ನು ಕಡಿಯುವ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳಬೇಕೆಂಬ ಬಗ್ಗೆ ಅರಣ್ಯ ಇಲಾಖೆ ಮತ್ತು BMRCL ನಡುವೆ ಇನ್ನೂ ನಿರ್ಧಾರವಾಗಿಲ್ಲ.

2. ಶಾದಿ ಮಹಲ್ ಬಳಿ ಶಾಫ್ಟ್​ ನಿರ್ಮಾಣವನ್ನು ಆರಂಭಿಸಲು ಸುರಂಗಮಾರ್ಗದ ಕನ್​ಸ್ಟ್ರಕ್ಟರ್​ಗಳಿಗೆ ಇನ್ನೂ 4,013 ಚದರ ಮೀಟರ್ ಭೂಮಿಯನ್ನು ಹಸ್ತಾಂತರಿಸಿಲ್ಲ. ಈ ಜಾಗವನ್ನು ಮೂರು ವರ್ಷಗಳಿಗೆ ಲೀಸ್​ಗೆ ಪಡೆಯಬೇಕು. ಇದಕ್ಕೆ ಇನ್ನೂ ವಕ್ಫ್​ ಬೋರ್ಡ್​ನಿಂದ ಅನುಮತಿ ಸಿಕ್ಕಿಲ್ಲ.

3. ಕೆಆರ್​ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕಾಮಗಾರಿಯನ್ನು ಆರಂಭಿಸಲು BMRCL ಮತ್ತು GAIL ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಅದಕ್ಕೆ GAIL ಅಧಿಕಾರಿಗಳಿಂದ ಇನ್ನೂ ಕ್ಲಿಯರೆನ್ಸ್​ ಸಿಕ್ಕಿಲ್ಲ.

4. ಮೆಟ್ರೋ ಡಿಪೋಗಾಗಿ ಶೆಟ್ಟಿಗೆರೆ ಗ್ರಾಮದಲ್ಲಿ 23 ಎಕರೆ ಸರ್ಕಾರಿ ಜಾಗ ಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ BMRCLಗೆ ಕರ್ನಾಟಕ ಸರ್ಕಾರ 18 ಎಕರೆ ಭೂಮಿಯನ್ನು ನೀಡಿದೆ. ಇನ್ನುಳಿದ 5 ಎಕರೆ ಜಾಗವನ್ನು ನೀಡುವುದು ಬಾಕಿಯಿದೆ.

5. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ಜಕ್ಕೂರಿನ ಸರ್ಕಾರಿ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ ಮಾರ್ಗದಲ್ಲಿ ಸಾಗುವುದರಿಂದ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್​ಗೆ ತೊಂದರೆಯಾಗುತ್ತದೆ. ಈ ಕುರಿತು ಈಗಾಗಲೇ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

6. ಕೆಂಪೇಗೌಡ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಾಗುವ ಮೆಟ್ರೋ ಕಾಮಗಾರಿಗೆ ಹೆಬ್ಬಾಳದಲ್ಲಿ ಬಿಎಂಟಿಸಿ 2 ಎಕರೆ ಜಮೀನನ್ನು ನೀಡಬೇಕಾಗುತ್ತದೆ. ಹೆಬ್ಬಾಳದ ಮೆಟ್ರೋ ಸ್ಟೇಷನ್​ಗೆ ಈ ಜಾಗವನ್ನು ನೀಡಲು ಸೂಚಿಸಲಾಗಿದೆ. ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

7. ವೆಲ್ಲಾರ ಜಂಕ್ಷನ್ ಬಳಿಯ ಸುರಂಗಮಾರ್ಗದಲ್ಲಿ ಮೆಟ್ರೋ ಸ್ಟೇಷನ್ ನಿರ್ಮಿಸಲು ಬೇಕಾದ ಜಾಗವನ್ನು ನೀಡಲು ಚರ್ಚ್​ಗಳು ಅನುಮತಿ ನೀಡಿದ್ದರೂ ಅದರ ಕೆಲವು ಸದಸ್ಯರು ಅಡ್ಡಗಾಲು ಹಾಕಿದ್ದರು. ಅಲ್ಲದೆ, ಮೆಟ್ರೋ ಯೋಜನೆಗೆ ಸಾಲ ನೀಡುತ್ತಿರುವ ಯುರೋಪಿಯನ್ ಇನ್ವೆಸ್ಟ್​ಮೆಂಟ್ ಬ್ಯಾಂಕ್​ಗೆ ಈ ಬಗ್ಗೆ ದೂರು ಕೂಡ ನೀಡಿದ್ದರು. ಇದು ಕೂಡ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣವಾಯಿತು.

8. ORR- KIA ಮೆಟ್ರೋ ಕಾರಿಡಾರ್ ಯೋಜನೆಗೆ ಮರಗಳನ್ನು ಕಡಿಯುವುದಕ್ಕೆ ಎನ್​ಜಿಓಗಳು ಕೂಡ ವಿರೋಧ ವ್ಯಕ್ತಪಡಿಸಿವೆ. ಗ್ರೋಥ್​ವಾಚ್ ಎಂಬ ಎನ್​ಜಿಓ ಇತ್ತೀಚೆಗಷ್ಟೆ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಈ ಮೆಟ್ರೋ ಯೋಜನೆಗೆ ಹೂಡಿಕೆ ಮಾಡುತ್ತಿರುವ ಏಜೆನ್ಸಿಗಳ ಜೊತೆ ಈ ಬಗ್ಗೆ ಮಾತುಕತೆ ನಡೆಸಿತ್ತು.

9. ಕೊರೋನಾ ಲಾಕ್​ಡೌನ್​ನಿಂದಾಗಿ ಕಾರ್ಮಿಕರೆಲ್ಲ ತಮ್ಮ ಊರುಗಳಿಗೆ ವಾಪಾಸ್ ಹೋಗಿದ್ದರಿಂದ ಮೆಟ್ರೋ ಕಾಮಗಾರಿ ವಿಳಂಬವಾಯಿತು.

10. ಮೆಟ್ರೋ ಕಾಮಗಾರಿ ನಡೆಯುವುದರಿಂದ ಜನರಿಗೆ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಇದಕ್ಕೆಂದು ಬಿಎಂಆರ್​ಸಿಎಲ್ ಹೆಚ್ಚುವರಿಯಾಗಿ 1885 ಚ.ಮೀ. ಜಾಗವನ್ನು ವಶಕ್ಕೆ ಪಡೆದಿದೆ. ಜಿಂದಾಲ್- ಪ್ರೆಸ್ಟೀಜ್ ಲೇಔಟ್​ನಿಂದ ಚಿಕ್ಕಬಿದರಕಲ್ಲು ಮೆಟ್ರೋ ಸ್ಟೇಷನ್ ಮಾರ್ಗದಲ್ಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜಿಂದಾಲ್ ಮತ್ತು ಪ್ರೆಸ್ಟೀಜ್ ಸಂಸ್ಥೆಗಳು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.

ಇದನ್ನೂ ಓದಿ: Namma Metro: ಇಂದಿನಿಂದ ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ; ಆದರೆ, ರೈಲು ಹತ್ತುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ

ಇದನ್ನೂ ಓದಿ: Namma Metro ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಮೆಟ್ರೋ ರೈಲಿನಲ್ಲಿ ಶೀಘ್ರವೇ ಟೋಕನ್ ವ್ಯವಸ್ಥೆ ಶುರು

(10 Reason for Namma Metro 2nd Phase Construction Work in Slow Progress)

Click on your DTH Provider to Add TV9 Kannada