Bengaluru Rains: ಸಂಜೆಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವಾಹನ ಸವಾರರು ಹೈರಾಣು
ನಿತ್ಯ ಮೋಡ ಕವಿದ ವಾತಾವರಣ ಇರುತ್ತಿದ್ದ ಬೆಂಗಳೂರಿನಲ್ಲಿಇಂದು ಧಾರಾಕಾರ ಮಳೆ ಆಗಿದೆ. ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ಬಸವನಗುಡಿ, ಕಬ್ಬನ್ಪಾರ್ಕ್, ವಿ.ವಿ.ಪುರಂ, ಬನಶಂಕರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಆಗಿದೆ. ಜೋರು ಮಳೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐದು ದಿನಗಳ ಮಳೆ ಆಗಲಿದೆ.
ಬೆಂಗಳೂರು, ಜುಲೈ 08: ಉತ್ತರ ಕರ್ನಾಟಕ ಭಾಗದಲ್ಲಿ ಮಳೆರಾಯ (Rain) ಅಬ್ಬರಿಸುತ್ತಿದ್ದಾನೆ. ಆದರೆ ಬೆಂಗಳೂರಿನಲ್ಲಿ (Bengaluru) ಮಾತ್ರ ಒಂದು ಹನಿ ಮಳೆ ಆಗಿರಲಿಲ್ಲ. ನಿತ್ಯ ಮೋಡ ಕವಿದ ವಾತಾವರಣ ಇರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಮಳೆ ಆಗುತ್ತಿತ್ತು. ಆದರೆ ಇಂದು ಮಾತ್ರ ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಧಾರಾಕಾರ ಮಳೆ ಆಗಿದೆ. ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ಬಸವನಗುಡಿ, ಕಬ್ಬನ್ಪಾರ್ಕ್, ವಿ.ವಿ.ಪುರಂ, ಬನಶಂಕರಿ, ಚಾಮರಾಜಪೇಟೆ ಸುತ್ತಮುತ್ತ ಸೇರಿದಂತೆ ಹಲವೆಡೆ ಮಳೆ ಆರ್ಭಟಿಸಿದೆ. ಜೋರು ಮಳೆ ಹಿನ್ನೆಲೆ ವಾಹನಗಳ ಸವಾರರು ಹೈರಾಣಾಗಿದ್ದಾರೆ.
ಇನ್ನು ಕರಾವಳಿಯಲ್ಲಿ ಟ್ರಫ್ ಉಂಟಾಗಿರುವ ಹಿನ್ನಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐದು ದಿನಗಳ ಮಳೆ ಇರಲಿದೆ ಎಂದು ಹವಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಇದನ್ನೂ ಓದಿ: ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ
ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಮತ್ತು 21 ಡಿಗ್ರಿ ದಾಖಲಾಗುವ ಸಾಧ್ಯಾತೆ ಇದೆ. ಇನ್ನು ಸರಾಸರಿ ಸಮುದ್ರ ಮಟ್ಟದಲ್ಲಿರುವ ಆಫ್- ಕೇರಳ ಟ್ರಫ್ ಈಗ ದಕ್ಷಿಣ ಗುಜರಾತ್-ಕರ್ನಾಟಕ ಕರಾವಳಿಯಲ್ಲಿ ಹಾದು ಹೋಗುತ್ತಿರುವ ಹಿನ್ನೆಲೆ ಐದು ದಿನ ಮಳೆ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದಿನಿಂದ ಮತ್ತು ಜುಲೈ 11 ರವರೆಗೂ ಮಳೆ ಇರಲಿದ್ದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿಗೆ ಇಂದಿನಿಂದ ಜುಲೈ 10ರ ವರೆಗೆ ಯಲ್ಲೋ ಅಲರ್ಟ್ ನೀಡಿದ್ದು ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಇದನ್ನೂ ಓದಿ: ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ
ಇನ್ನು ಬೀದರ್, ಕಲ್ಬುರ್ಗಿ , ಯಾದಗಿರಿ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ನೀಡಿದ್ದು ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಿಗೆ 5 ದಿನದ ಮಳೆಯ ಅಲರ್ಟ್ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Mon, 8 July 24